Advertisement
ಶ್ರೀಲಂಕಾ ಬಾಂಬ್ ಸ್ಫೋಟ ಘಟನೆಯ ಹೊಣೆ ಐಸಿಸ್ ಉಗ್ರ ಸಂಘಟನೆ ಹೊತ್ತಿದೆ. ದಾಳಿಯ ನಂತರವೂ ಸುಮಾರು 150 ಶಂಕಿತ ಉಗ್ರರು ಶ್ರೀಲಂಕಾದಲ್ಲೇ ಬೀಡುಬಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿಯೂ ಇದೆ.
Related Articles
ನಿವೃತ್ತ ಯೋಧನೊಬ್ಬ ತಮಿಳುನಾಡಿನ ರಾಮನಾಥಪುರಂನಲ್ಲಿ 17 ಉಗ್ರರು ನುಸುಳಿದ್ದಾರೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ತಾನು ಧ್ಯಾನ ಮಾಡುವಾಗ ಉಗ್ರರು ನುಸುಳಿರುವ ಬಗ್ಗೆ ಗೋಚರವಾಯಿತು. ದೇಶ ರಕ್ಷಣೆಗಾಗಿ ನಾನು ಪೊಲೀಸರಿಗೆ ಮಾಹಿತಿ ನೀಡಿದೆ ಎಂದೂ ಹೇಳಿದ್ದಾನೆ.
Advertisement
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ರಾಜ್ಯದೆಲ್ಲೆಡೆ ನಿಗಾ ವಹಿಸುವಂತೆ ರಾಜ್ಯ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗಕ್ಕೂ ನಿಗಾವಹಿಸುವಂತೆ ಮೌಖೀಕವಾಗಿ ಸೂಚನೆ ನೀಡಲಾಗಿದೆ. ರಾಜ್ಯದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೇವಾಲಯ, ಮಸೀದಿ, ಚರ್ಚ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ಹೈಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮತ್ತು ಕರಾವಳಿ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ.
ರಾಜ್ಯದ ಬಸ್, ರೈಲ್ವೆ, ವಿಮಾನ ನಿಲ್ದಾಣ, ಜಲಾಶಯ, ಪ್ರಮುಖ ಕಟ್ಟಡಗಳ ಬಳಿ ಬಿಗಿ ಭದ್ರತೆ ಏರ್ಪಡಿಸಿ ಹದ್ದಿನ ಕಣ್ಣಿಡಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿಯೂ ಈ ಹಿಂದೆ ಉಗ್ರರ ಚಟುವಟಿಕೆಗಳು ನಡೆದಿರುವುದರಿಂದ ಸಹಜವಾಗಿ ಆತಂಕವಿದೆ.
ಹೀಗಾಗಿ, ತಪಾಸಣೆ ತೀವ್ರಗೊಳಿಸಲಾಗಿದೆ. ರಾಜ್ಯದ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಇಲಾಖೆಯ ಭದ್ರತಾ ಅಧಿಕಾರಿಗಳಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿ ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಪ್ರತಿ ಗಂಟೆಗೂಮ್ಮೆ ತಪಾಸಣೆ ನಡೆಸುವಂತೆ ಸೂಚನೆ ಸಹ ನೀಡಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಕೆಎಸ್‌ಆರ್‌ಟಿಸಿ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಯಾಣಿಕರ ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ತಪಾಸಣೆಗೊಳಪಡಿಸಿಯೇ ಬಿಡುತ್ತಿದ್ದಾರೆ.
ಒಟ್ಟಾರೆ, ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಕರ್ನಾಟಕಕ್ಕೂ ಆತಂಕ ತಂದೊಡ್ಡಿದೆ. ರಾಜ್ಯ ಪೊಲೀಸ್ ಇಲಾಖೆಯೂ ಎಲ್ಲ ರೀತಿಯ ಮುಂಜಾಗ್ರತಾ ಹಾಗೂ ಭದ್ರತಾ ಕ್ರಮ ಕೈಗೊಂಡಿದೆ. ಸಾರ್ವಜನಿಕರೂ ಸಹ, ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿಗಳ ಚಲನ ವಲನ ಗಮನಿಸಿದರೆ ತತ್‌ಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆ ಮಾಡುವಂತೆಯೂ ಮನವಿ ಮಾಡಿದೆ. ಈ ಸಂಗತಿಯನ್ನೂ ಸಾರ್ವಜನಿಕರೂ ಕೂಡ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಹಾಗೆಂದು ಭಯಭೀತರಾಗುವುದು ಬೇಡ. ಎಲ್ಲಾದರೂ ಅನುಮಾನಾಸ್ಪದ ವಸ್ತುಗಳು, ಬ್ಯಾಗುಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಹೋಟೆಲ್ ಮತ್ತು ಪಿ.ಜಿ.ಗಳು ಹಾಗೂ ಮನೆ ಮಾಲೀಕರು ತಮ್ಮ ಬಳಿ ಬರುವವರಿಂದ ಗುರುತಿನ ಚೀಟಿಯನ್ನು ನೋಡಿಯೇ ಪ್ರವೇಶ ನೀಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಟ್ಟಲ್ಲಿ ರಾಜ್ಯದ ರಕ್ಷಣೆಯ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲೆ ಎಷ್ಟು ಇದೆಯೋ ಅಷ್ಟೇ ನಾಗರಿಕರ ಮೇಲೂ ಇದೆ ಎನ್ನುವುದನ್ನು ಮರೆಯುವುದು ಬೇಡ.