Advertisement

ಹರೆಗೋಡು: ಉಪ್ಪು ನೀರಿಗೆ ಹತ್ತಾರು ಎಕ್ರೆ ಕೃಷಿ ಪ್ರದೇಶ ನಾಶ

11:22 PM Mar 31, 2019 | sudhir |

ಹೆಮ್ಮಾಡಿ: ಕಟ್‌ ಬೆಲೂ¤ರು ಗ್ರಾಮದ ಹರೆಗೋಡುವಿನಲ್ಲಿ ಭತ್ತ, ದ್ವಿದಳ ಧಾನ್ಯ ಹಾಗೂ ಕಬ್ಬು ಬೆಳೆ ಬೆಳೆಯುತ್ತಿದ್ದ ಹತ್ತಾರು ಎಕ್ರೆ ಕೃಷಿ ಪ್ರದೇಶವು ಉಪ್ಪು ನೀರಿನ ಸಮಸ್ಯೆಗೆ ತುತ್ತಾಗಿದೆ. ಇಲ್ಲಿನ ರೈತರು ಕಳೆದ 2 ವರ್ಷಗಳಿಂದ ಸುಗ್ಗಿ ಬೆಳೆ ಬೆಳೆಯಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಹರೆಗೋಡಿನಲ್ಲಿ ಐನೂರು ಎಕ್ರೆಗೂ ಮಿಕ್ಕಿ ಪ್ರದೇಶದಲ್ಲಿ ಹಿಂದೆ ಎರಡು ಭತ್ತದ ಬೆಳೆ, ಅನಂತರ ದ್ವಿದಳ ಧಾನ್ಯ ಬೆಳೆಯುತ್ತಿದ್ದರು. ವಿಶಾಲ ಬಯಲು ಪ್ರದೇಶದಲ್ಲಿದ್ದ ಕಾಡಿನಕೆರೆ ನೀರು ಬಳಸಿಕೊಂಡು ಕಬ್ಬು ಬೆಳೆ ಕೂಡ ಬೆಳೆಯುತ್ತಿದ್ದರು. ಕೆರೆ ಕಾಯಕಲ್ಪ ಯೋಜನೆ ದುರಸ್ತಿ¤ಗೆ ಇಡೀ ಕೆರೆಯೇ ಹಳ್ಳಹತ್ತಿ ಹೋಗಿದ್ದು, ಕಬ್ಬು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ ಇಲ್ಲಿನ ರೈತರು.

ಕುಸಿದ ಕಿಂಡಿ ಅಣೆಕಟ್ಟು
ಉಪ್ಪು ನೀರು ತಡೆಗಾಗಿ ಕೃಷಿಕರೇ ಕಟ್ಟೆ ಕಟ್ಟಿ ಅದಕ್ಕೊಂದು ರಂಧ್ರ ಕೊರೆದು, ನೀರಿನ ಉಬ್ಬರ ಇಳಿತಕ್ಕೆ ಹೊಂದಿಕೊಳ್ಳುವಂತೆ ಬಾಗಿಲು ನಿರ್ಮಿಸಿಕೊಂಡು ಉಪ್ಪು ನೀರು ಒಳಗೆ ಬಾರದಂತೆ ತಡೆ ಮಾಡಿದ್ದರು. ಆದರೆ ರೈತರ ತಡೆಗೋಡೆ ಸಮೀಪದಲ್ಲೇ ಉಪ್ಪು ನೀರು ತಡೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಮೂರೇ ತಿಂಗಳಲ್ಲಿ ಕುಸಿದು ಬಿದ್ದಿದೆ. ರೈತರು ನಿರ್ಮಿಸಿದ ಸ್ವಯಂ ಚಾಲಿತ ಬಾಗಿಲು ಸಿಗಡಿ ಕೆರೆಗೆ ನೀರು ಹಾಯಿಸಲು ತೆರೆದಿಡುವುದರಿಂದ ಉಪ್ಪು ನೀರು ಕೃಷಿ ಭೂಮಿಗೆ ಹರಿಯುತ್ತದೆ.

ಸಿಗಡಿ ಕೃಷಿಗಾಗಿ ಉಪ್ಪು ನೀರು ಒಳಗೆ ಬರಲು ಎಲ್ಲ ಅನುಕೂಲ ಮಾಡಿಕೊಂಡಿದ್ದರಿಂದ ಸುಮಾರು 50 ಎಕ್ರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಭತ್ತದ ಕೃಷಿ ಭೂಮಿಯಲ್ಲಿ ಮುಂಗಾಲಿನವರೆಗೆ ಉಪ್ಪು ನೀರು ನಿಂತಿದೆ. ಈ ಬಾರಿ ಮುಂಗಾರಿನಲ್ಲೂ ಭತ್ತದ ಬೆಳೆ ಕಷ್ಟಕರ ಎನ್ನುವುದಾಗಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ರೈತರು.

2 ವರ್ಷಗಳಿಂದ ಬೇಸಾಯವಿಲ್ಲ
ಉಪ್ಪು ನೀರಿನ ಸಮಸ್ಯೆಯಿಂದ ಬೇಸಾಯ ಮಾಡುವುದೇ ಕಷ್ಟಕರವಾಗಿದೆ. ನಮ್ಮ ಈ ಸಮಸ್ಯೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಆಗಲಿ ಯಾರೂ ಕೂಡ ಕೇಳುವುದಿಲ್ಲ. ಸಿಗಡಿ ಕೃಷಿಗೆ ಇಲ್ಲಿ ಅನುಮತಿ ನೀಡಿರುವುದರಿಂದಾಗಿ ನಮ್ಮ ತುತ್ತಿನ ಅನ್ನಕ್ಕೆ ತೊಂದರೆಯಾಗುತ್ತಿದೆ. ಕಳೆದ 2 ವರ್ಷಗಳಿಂದ ಸುಗ್ಗಿ ಬೆಳೆಗೆ ತೊಂದರೆಯಾಗುತ್ತಿದೆ.
– ವಿಶ್ವನಾಥ ಗಾಣಿಗ ಹರೆಗೋಡು, ಕೃಷಿಕರು

Advertisement

ಭೇಟಿ ನೀಡಿ ಪರಿಶೀಲನೆ
ಕೃಷಿಗೆ ಉಪ್ಪು ನೀರಿನ ಸಮಸ್ಯೆಯಿಂದ ಭತ್ತದ ಕೃಷಿಗೆ ತೊಂದರೆಯಾಗಿರುವುದರ ಬಗ್ಗೆ ಇಲಾಖೆಯಿಂದ ಯಾವುದೇ ಪರಿಹಾರ ನೀಡುವುದು ಕಷ್ಟ. ಆದರೆ ಈ ಬಗ್ಗೆ ರೈತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಿ. ಮುಂದಿನ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಿ, ವಸ್ತುಸ್ಥಿತಿ ಬಗ್ಗೆ ತಿಳಿದುಕೊಂಡು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
– ರೂಪಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next