Advertisement

ಮನೆಯ ಮೇಲೊಂದು ತಾರಸಿ ತೋಟ

06:00 AM Sep 28, 2018 | |

ಉಡುಪಿ: ಪಟ್ಟಣ/ನಗರಗಳಲ್ಲಿ ಜಾಗದ ಕೊರತೆಯಿಂದಾಗಿ ಸ್ವಂತ ಹಣ್ಣು, ತರಕಾರಿ ಬೆಳೆಯಲು ಚಿಂತಿಸುವವರು ತುಂಬಾ ವಿರಳ. ಆದರೆ ಮನಸ್ಸು ಮಾಡಿ ಸರಿಯಾದ ಯೋಜನೆ ರೂಪಿಸಿಕೊಂಡರೆ ನಿಮ್ಮ ಚಿಕ್ಕ ಕುಂಟುಂಬಕ್ಕೆ ಅಗತ್ಯವಿರುವಷ್ಟು ಹೂವು, ಹಣ್ಣು, ತರಕಾರಿಗಳನ್ನು ಕಡಿಮೆ ಜಾಗದಲ್ಲಿಯೇ ಬೆಳೆಸಬಹುದು. ಇದಕ್ಕಾಗಿ ದುಬಾರಿಯಾದ ಸಿಮೆಂಟ್‌, ಮಣ್ಣಿನ ಕುಂಡಗಳನ್ನೇ ಬಳಸಬೇಕೆಂದೇನಿಲ್ಲ. ಹಳೇ ಬಕೆಟ್‌, ಸಿಮೆಂಟ್‌ ಚೀಲ, ಹಳೆಯ ಟಯರ್‌, ಪ್ಲಾಸ್ಟಿಕ್‌ ಕುಂಡ, ಉಪಯೋಗಿಸಿದ ಪೇಂಟ್‌ ಡಬ್ಬಗಳು, ಪ್ಲಾಸ್ಟಿಕ್‌ ನರ್ಸರಿ ಬ್ಯಾಗ್‌ಗಳನ್ನು ಬಳಸಬಹುದು.

Advertisement

ಕುಂಡಕ್ಕೆ ಬಳಸುವ ನರ್ಸರಿ ಮಿಶ್ರಣವು ತಂಬಾ ಮುಖ್ಯ. ಮಣ್ಣು, ಮರಳು, ಗೊಬ್ಬರವನ್ನು 1:1:1 ಪ್ರಮಾಣದಲ್ಲಿ ಬೆರೆಸಿ, ಸ್ವಲ್ವ ಬೇವಿನಹಿಂಡಿ ಅಥವಾ ಎರೆಗೊಬ್ಬರವನ್ನು ಸೇರಿಸಿ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಬೇಕು. ಕುಂಡದ ತಳಭಾಗದಲ್ಲಿ 2-3 ರಂಧ್ರಗಳನ್ನು ಮಾಡಿ ನೀರು ನಿಲ್ಲದೆ ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಪ್ರತಿ ಬೆಳೆಯ ಎತ್ತರ ಮತ್ತು ಬೇರಿನ ಪ್ರಮಾಣ ಆಧರಿಸಿ ಕುಂಡ/ಚೀಲಗಳ ಗಾತ್ರವನ್ನು ನಿರ್ಧರಿಸಬೇಕು. 

ಉದಾ: ಬೆಂಡೆ, ಬದನೆಯಂತಹ ಗಿಡಗಳಿಗೆ 12-14 ಇಂಚು ಆಳವಿರುವ ಕುಂಡ ಬಳಸಬೇಕು. ಸೊಪ್ಪಿನ ತರಕಾರಿಗಳಿಗೆ ಸಣ್ಣ ಕುಂಡಗಳು ಸಾಕು. ಬಹುವಾರ್ಷಿಕ ಗಿಡಗಳಿಗೆ (ನುಗ್ಗೆ, ಗುಲಾಬಿ, ಪಪ್ಪಾಯ ಇತ್ಯಾದಿ) ದೊಡ್ಡ ಗಾತ್ರದ ಕುಂಡ ಬೇಕಾಗುತ್ತದೆ.

ಮನೆಯಲ್ಲಿ ತರಕಾರಿ ಬೆಳೆಯು ವುದರಿಂದ ರಾಸಾಯನಿಕ ಮುಕ್ತ ತರಕಾರಿ, ಹಣ್ಣುಗಳನ್ನು ಪಡೆಯಬಹುದು. ಮನೆಯ ಪರಿಸರಕ್ಕೆ ಶುದ್ದವಾದ ಗಾಳಿ ದೊರಕುತ್ತದೆ. ಮನೆಯ ಉಷ್ಣಾಂಶ ಕಡಿಮೆಗೊಳಿಸುತ್ತದೆ. ಮನಸ್ಸಿಗೆ ಆನಂದ , ಶರೀರಕ್ಕೆ ವ್ಯಾಯಾಮ ಆಗುತ್ತದೆ.ಮಕ್ಕಳಿಗೆ ಗಿಡಗಳ ಬಗ್ಗೆ ಅರಿವು ಮೂಡಿಸಬಹುದು. 

ತಾರಸಿ ತೋಟ ನಿರ್ಮಿಸುವ ಮೊದಲು ಗಮನ ದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ತಾರಸಿಯು ಅಧಿಕ ಭಾರ ತಡೆಯಲು ಸದೃಢವಾಗಿದೆಯೇ?, ತಾರಸಿಯಲ್ಲಿ ಯಾವುದೇ ಬಿರುಕಿಲ್ಲದೆ, ಇಳಿಜಾರಿದ್ದು ನೀರು ಬಸಿದು ಹೋಗುವಂತಿರಬೇಕು. ನೆಲವು ವಾಟರ್‌ ಪೂ›ಫ್ ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರು, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ತೋಟಗಾರಿಕೆ ಇಲಾಖೆ, ದೊಡ್ಡಣಗುಡ್ಡೆ (ದೂ: 0820-2520590) ಇಲ್ಲಿ ಸಂಪರ್ಕಿಸು ವಂತೆ ಇಲಾಖೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next