ಮರಿಯಮ್ಮನಹಳ್ಳಿ/ಭದ್ರಾವತಿ: ಬಳ್ಳಾರಿ ಜಿಲ್ಲೆ ಹೊಸಪೇಟೆ ಹಾಗೂ ಭದ್ರಾವತಿಯಲ್ಲಿ ಸಂಭವಿಸಿದ ಪ್ರತ್ಯೇಕ ದುರ್ಘಟನೆಗಳಲ್ಲಿ ತೆಪ್ಪ ಮಗುಚಿ ಮೂವರು ನೀರು ಪಾಲಾಗಿದ್ದಾರೆ. ಹೊಸಪೇಟೆ ತಾಲೂಕಿನ 114-ಡಣಾಪುರ ಗ್ರಾಮದಲ್ಲಿ ಮಂಗಳವಾರ ತೆಪ್ಪದಲ್ಲಿ ಸುತ್ತಾಡಲು ಹೋದ ಡಣಾಪುರ ಗ್ರಾಮದ ಡಿ.ಕೆ. ಬಸವರಾಜ (27) ಹಾಗೂ ಈತನ ಸಂಬಂಧಿ ಸಂಡೂರಿನ ಹರೀಶ (17) ನೀರು ಪಾಲಾಗಿದ್ದಾರೆ. ಸತತ 5 ಗಂಟೆ ಶೋಧ ಕಾರ್ಯದ ನಂತರ ಮೃತದೇಹಗಳು ಪತ್ತೆಯಾಗಿವೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಡಿ.ಕೆ.ಬಸವರಾಜ ಮೊಹರಂ ರಜೆ ನಿಮಿತ್ತ ಮಂಗಳವಾರ ಡಣಾಪುರಕ್ಕೆ ಆಗಮಿಸಿದ್ದರು. ಇವರ ಸೋದರ ಅಳಿಯ ಹರೀಶ ಸಹ ಅವರ ತಾಯಿ ಜತೆ ಇಲ್ಲಿಗೆ ಬಂದಿದ್ದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಸವರಾಜ, ಹರೀಶ ಹಾಗೂ ಹರೀಶನ ತಾಯಿ ನಾಗರತ್ನಮ್ಮ ಹೊಳೆ ಹತ್ತಿರದಲ್ಲಿರುವ ಹೊಲ ನೋಡಲು ಹೋಗಿದ್ದರು. ಹೊಳೆ ದಡದಲ್ಲಿದ್ದ ತೆಪ್ಪದಲ್ಲಿ ಕುಳಿತು ಮೂವರೂ ಸ್ವಲ್ಪ ಹೊತ್ತು ಹಿನ್ನೀರಲ್ಲಿ ಸುತ್ತಾಡಿದರು.
ನಂತರ ವಾಪಸ್ ದಡಕ್ಕೆ ಬಂದು ತಾಯಿ ನಾಗರತ್ನಮ್ಮನನ್ನು ಇಳಿಸಿ ಇವರಿಬ್ಬರೇ ಮತ್ತೆ ತೆಪ್ಪದಲ್ಲಿ ಹೋಗಿದ್ದರು. ಈ ವೇಳೆ, ಹರೀಶ ತೆಪ್ಪದಿಂದ ಆಯತಪ್ಪಿ ನದಿಗೆ ಬಿದ್ದಿದ್ದು, ಅವರ ರಕ್ಷಣೆಗೆ ಬಸವರಾಜ ನೀರಿಗೆ ಜಿಗಿದರು. ನೀರಿನ ಸುಳಿಗೆ ಸಿಲುಕಿ ಇಬ್ಬರೂ ನೀರು ಪಾಲಾಗಿದ್ದಾರೆ. ಗಾಬರಿಗೊಂಡ ತಾಯಿ, ಸಂಬಂಧಿ ಕರಿಗೆ ಫೋನ್ ಮೂಲಕ ಸುದ್ದಿ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.
ಭದ್ರಾ ನದಿಗೆ ಬಿದ್ದು ಬಾಲಕ ಸಾವು: ಭದ್ರಾವತಿ ಸಮೀಪ ಭದ್ರಾನದಿಯಲ್ಲಿ ತೆಪ್ಪ ಮಗುಚಿ ತಮೀಮ್ (17) ಎಂಬುವರು ಮೃತಪಟ್ಟಿದ್ದಾರೆ. ನಗರದ ಯಕಿನ್‌ಷಾ ಕಾಲೋನಿಯ ಅಜರ್, ಜಬಿ, ತಮೀಮ್ ಮೊಹರಂ ರಜೆ ಹಿನ್ನೆಲೆಯಲ್ಲಿ ತುಂಬಿ ಹರಿ ಯುತ್ತಿರುವ ಭದ್ರಾನದಿಯಲ್ಲಿ ತೆಪ್ಪದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕೈಯಲ್ಲಿದ್ದ ಹುಟ್ಟು ಜಾರಿ ನೀರಿಗೆ ಬಿತ್ತು. ಇದರಿಂದ ತೆಪ್ಪ ನಿಯಂತ್ರಿಸಲಾಗದೆ ಮೂವರು ನೀರಿನಲ್ಲಿ ಮುಳುಗಿದರು. ಜಬಿ ಈಜಿ ದಡ ಸೇರಿದರೆ, ಅಜರ್ ನದಿಯೊಳಗೇ ಇದ್ದ ಮರವನ್ನೇರಿ ಕುಳಿತು ಜೀವ ರಕ್ಷಿಸಿಕೊಂಡಿದ್ದಾನೆ. ತಮೀಮ್ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.