ಈ ಬದುಕು ನಿನ್ನೆ- ಇಂದು- ನಾಳೆಗಳ ಪ್ರಯಾಸದ ಪಯಣ. ನಾವು ಬಿಟ್ಟು ಬಂದ ನಿಲ್ದಾಣವೇ ನಿನ್ನೆಗಳು. ಪಯಣಿಸುತ್ತಿರುವ ಕ್ಷಣಗಳೇ ವರ್ತ ಮಾನ. ತಲುಪಬೇಕೆಂದಿರುವ ಸ್ಥಳವೇ ನಾಳೆಗಳು. ಇಲ್ಲಿ ನಾಳೆಗಳು ಅನಿರೀಕ್ಷಿತ ತಿರುವು, ಏರುತಗ್ಗು ಹಾಗೂ ಅನಿಶ್ಚಿತತೆ ಗಳೇ ಇರುವ ದಾರಿ.
ನಿನ್ನೆ ಸತ್ತಿಹುದು,
ನಾಳೆ ಬಾರದೆ ಇಹುದು,
ಇಂದು ಸೊಬಗಿರಲದನು ಮರೆತಳುವಿರೇಕೆ?
ಈ ಕವಿ ವಾಣಿ ಅದೆಷ್ಟು ನಿಜ ಅಲ್ಲವೆ? ನಮ್ಮ ಹೆಚ್ಚಿನ ಸಮಯವೆಲ್ಲ ನಿನ್ನೆ ಮತ್ತು ನಾಳೆಗಳ ಯೋಚನೆಯಲ್ಲಿಯೇ ಕಳೆದು ಹೋಗುತ್ತದೆ. ಕಳೆದು ಹೋದ ನಿನ್ನೆಗಳ ಕಹಿ ನೆನಪುಗಳು ಹಾಗೂ ನಾಳೆ ಬರ ಬಹುದಾದ ಆತಂಕಗಳು ಮನಸ್ಸನ್ನು ಸದಾ ಕಾಡುತ್ತಿರುತ್ತದೆ. ಈ ಯೋಚನೆಯ ನಡುವೆ ವರ್ತಮಾನದ ಕ್ಷಣಗಳನ್ನು ಅನು ಭವಿಸದೇ ಕಳೆದುಕೊಳ್ಳುತ್ತೇವೆ.
ನಿನ್ನೆಯೆಂಬುದು ಮುಗಿದು ಹೋದ ವಿಚಾರ. ಕಳೆದು ಹೋದ ಘಟನೆಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ. ಅನೇಕ ಘಟನೆಗಳು ನಮ್ಮ ಕೈ ಮೀರಿ ಸಂಭವಿಸಿ ರಬಹುದು. ಕೆಟ್ಟ ಘಟನೆಗಳು ಮನಸ್ಸಿನ ಮೇಲೆ ಮರೆಯಲಾರದ ನೋವನ್ನು ಉಂಟುಮಾಡಿರಬಹುದು. ಆದರೆ ಕಳೆದುದರ ಕುರಿತು ಅತಿಯಾಗಿ ಚಿಂತಿಸುವುದರಿಂದ ಇಂದಿನ ಹಾಗೂ ನಾಳೆಗಳ ಕ್ಷಣಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇದಕ್ಕಾಗಿಯೇ ಹಿರಿಯರು “ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ’ ಎಂದಿದ್ದು. ಆದರೆ ನಮ್ಮ ತಪ್ಪುಗಳು ನಮ್ಮನ್ನು ತಿದ್ದಬೇಕು. ಅವುಗಳಿಂದ ಪಾಠಗಳನ್ನು ಕಲಿಯುತ್ತ ಮುಂದೆ ಸಾಗಬೇಕು. ಕೆಲವೊಮ್ಮೆ ಎದುರಾಗುವ ಅನಿರೀಕ್ಷಿತ ಕಷ್ಟಗಳು ಉತ್ತಮ ಅನುಭವಗಳನ್ನು ನೀಡುತ್ತವೆ. ತಪ್ಪಿದ ದಾರಿಗಳು, ಎಷ್ಟೋ ಸಲ ಹೊಸ ಹೊಸ ತಿರುವುಗಳನ್ನು ಕೊಡುತ್ತದೆ.
ನಾಳೆ ಏನಾಗುತ್ತದೋ ತಿಳಿಯದು. ನಾಳೆಯ ಘಟನೆಗಳು ಅನಿಶ್ಚಿತ. ಅದಿನ್ನೂ ನಮ್ಮ ಕೈಯಲ್ಲಿಲ್ಲ. ಹಾಗಿ ರುವಾಗಲೂ ನಾಳೆಯ ಕುರಿತು ಅಪಾರ ಭರವಸೆಯಿಂದ ಬದುಕು ತ್ತೇವೆ, ಆಶಾವಾದಿಗಳಾಗಿರುತ್ತೇವೆ. ಈ ಆಶಾವಾದವೇ ಬದುಕಿನ ಜೀವಾಳ. ನಾಳೆಗಾಗಿ ಹಣ ಕೂಡಿಡುತ್ತೇವೆ. ನಾಳೆಗಾಗಿ ದುಡಿಯುತ್ತೇವೆ. ನಾಳೆ ಗಾಗಿ ಕಲಿಯುತ್ತೇವೆ. ನಾಳೆಗಳ ಬಗ್ಗೆ ಕನಸು ಕಾಣುತ್ತೇವೆ. ನಮ್ಮ ಹೆಚ್ಚಿನ ಚಟುವಟಿಕೆಗಳೂ ಕೂಡಾ ನಮ್ಮ ಮುಂದಿನ ದಿನಗಳಿಗಾಗಿಯೇ ಇರುತ್ತವೆ. ಇಂದು ಮುಳುಗಿದ ಸೂರ್ಯ ನಾಳೆ ಬರುತ್ತಾನೆಂಬ ಭರ ವಸೆಯಿಂದ ಮಲಗುತ್ತೇವೆ. ನೆಟ್ಟ ಸಸಿ ನಾಳೆ ನೆರಳಾಗಬಹುದು, ಫಲ ನೀಡ ಬಹುದೆಂದು ಆಶಿಸುತ್ತೇವೆ. ನಾವು ಬದುಕುವುದೇ ನಾಳಿನ ದಿನಗಳಿಗಾಗಿ. ನಾಳೆಗಳು ನಮ್ಮದಾದಾಗ ಅಲ್ಲಿ ಸುಖ ನೆಮ್ಮದಿಗಳಿರಬೇಕು ಎಂದು ಬಯ ಸುತ್ತೇವೆ. ನಮ್ಮ ಇಂದಿನ ಚಿಂತನೆ ಚಟುವಟಿಕೆಗಳೇ ನಾಳೆಗಳ ಅಡಿ ಪಾಯ. ಹಾಗಾಗಿ ನಮ್ಮ ಇಂದಿನ ಯೋಚನೆಗಳು, ಯೋಜನೆಗಳೆಲ್ಲವೂ ಉತ್ತಮವಾಗಿರಬೇಕು.
ಸಿರಿವಂತನಾಗಬೇಕು, ಭವಿಷ್ಯದಲ್ಲಿ ಸುಖ ಸಂಪತ್ತುಗಳು ತನ್ನದಾಗಬೇಕು ಎಂದು ಅಕ್ರಮವಾಗಿ ಗಳಿಸುವವರು ಅದೆಷ್ಟೋ ಜನ ಕಾಣಸಿಗುತ್ತಾರೆ. ಆಸ್ತಿ, ಐಶ್ವರ್ಯ, ಅಂತಸ್ತುಗಳ ಆಶೆಗಾಗಿ ಸಂಸಾ ರದ ಒಳಗಡೆಯೇ ಕೊಲೆ, ಸುಲಿಗೆ, ಮೋಸಗಳು ನಡೆಯುತ್ತವೆ. ಆದರೆ ಅವರ ನಾಳೆಗಳು ಸುಖಕರವಾಗಿರಬಹುದೆಂಬ ನಿಶ್ಚಿತತೆಯಿಲ್ಲ. ಕಷ್ಟಪಟ್ಟು ಪ್ರಾಮಾಣಿಕ ವಾಗಿ ದುಡಿಯುವುದರಿಂದ ಅಪಾರ ಸಂಪತ್ತು ಗಳಿಸಲು ಸಾಧ್ಯವಾಗದಿದ್ದರೂ ನೆಮ್ಮದಿಯಿಂದ ದಿನ ಕಳೆಯಲು ಸಾಧ್ಯ.
ನಿನ್ನೆ ಮತ್ತು ನಾಳೆಗಳ ನಡುವೆ ಇರುವ ಇಂದಿನ ಕ್ಷಣಗಳು ಮಾತ್ರ ಸತ್ಯ. ವರ್ತಮಾನದ ಕ್ಷಣಗಳು ಮಾತ್ರ ಅನುಭವಿಸುವುದಕ್ಕೆ ಸಿಗುವಂಥದ್ದು, ನಮ್ಮ ನಿಯಂತ್ರಣದಲ್ಲಿ ಇರುವಂಥದ್ದು. ಒಳ್ಳೆಯ ಅನುಭವಗಳು ಸವಿ ನೆನೆಪು ಗಳಾಗಿ ಉಳಿಯುತ್ತವೆ. ಕೆಟ್ಟ ಘಟನೆಗಳು ಮುಂದಿನ ಬದುಕಿಗೆ ಪಾಠ ಗಳಾಗುತ್ತವೆ. ನಡೆದು ಬಂದ ದಾರಿ ಯಲ್ಲಿನ ಕಲ್ಲು ಮುಳ್ಳುಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ.
ನಿನ್ನೆ ಮತ್ತು ನಾಳೆಗಳ ನಡುವಿನ ಇಂದಿನ ಕ್ಷಣಗಳಲ್ಲಿ ಕೆಡುಕುತನ ಬಿಟ್ಟು ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತ ಬದುಕೋಣ. ನಮ್ಮ ಹೆಸರಲ್ಲಿ ಒಂದಷ್ಟು ಕಂಪು ಬೆಳೆಸೋಣ.
– ವಿದ್ಯಾ ಅಮ್ಮಣ್ಣಾಯ, ಕಾಪು