Advertisement
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಕುರಿತು ಅನುಪಾಲನಾ ವರದಿ ಸಲ್ಲಿಸಿದ್ದಾರೆ.
Related Articles
Advertisement
ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ 16,853 ಮಕ್ಕಳ ಪೈಕಿ 3,828 ಮಕ್ಕಳನ್ನು ಈಗಾಗಲೇ ಶಾಲೆಗೆ ಸೇರಿಸಲಾಗಿದೆ. ಬೆಂಗಳೂರು ವ್ಯಾಪ್ತಿಯ ಕೊಳಗೇರಿಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಪ್ರತಿ ತಿಂಗಳು 13 ಮತ್ತು 14ರಂದು ರಾತ್ರಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ, ಆ.13 ಮತ್ತು 14ರಂದು ನಡೆಸಿದ ಸಮೀಕ್ಷೆಯಲ್ಲಿ ಶಾಲೆಯಿಂದ ಹೊರಗುಳಿದ 415 ಮಕ್ಕಳನ್ನು ಗುರುತಿಸಲಾಗಿದೆ. 2019-20ನೇ ಸಾಲಿಗಾಗಿ ಸರ್ಕಾರ ‘ಟೆಂಟ್ ಸ್ಕೂಲ್’ಗಳನ್ನು ನಡೆಸುತ್ತಿದ್ದು, ಅದರಲ್ಲಿ ಬೆಂಗಳೂರು ದಕ್ಷಿಣದ 3 ಹಾಗೂ 4ನೇ ಬ್ಲಾಕ್‌ನ 193 ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ.
ಜೊತೆಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಏಳು ದಿನ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಪ್ರತಿ ಶನಿವಾರ ರಾಜ್ಯ ಯೋಜನಾ ಕಚೇರಿಗೆ ಮಾಹಿತಿ ನೀಡುವಂತೆ ಎಲ್ಲ ಹಾಜರಾತಿ ಅಧಿಕಾರಿಗಳಿಗೆ 2019ರ ಆ.8ರಂದು ವಿಡಿಯೋ ಕಾನ್ಫ್ರೆನ್ಸ್ ಹಾಗೂ ಆ.13ರಂದು ಪತ್ರದ ಮೂಲಕ ಸೂಚಿಸಲಾಗಿದೆ.
ಪೋಷಕರಿಗೆ ಹಾಜರಾತಿ ನೋಟಿಸ್ ನೀಡಿದ ಬಳಿಕವೂ ಮಗು ಶಾಲೆಗೆ ಬರದಿದ್ದರೆ ಅಂತಹ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರುವಂತೆ ಹಾಜರಾತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿ ‘ವಿಲೇಜ್ ಎಜುಕೇಷನ್ ರಿಜಿಸ್ಟರ್’ (ವಿಇಆರ್) ಹಾಗೂ ನಗರ ಪ್ರದೇಶಗಳಲ್ಲಿ ‘ವಾರ್ಡ್ ಎಜುಕೇಷನ್ ರಿಜಿಸ್ಟ್ರರ್’ (ಡಬ್ಲ್ಯೂಇಆರ್) ನಿರ್ವಹಿಸುವಂತೆ ಹಾಜರಾತಿ ಅಧಿಕಾರಿಗಳಿಗೆ ಸೂಚಿಸಿ, 2014-15ನೇ ಸಾಲಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಮರು ಪಾಲಿಸುವಂತೆ ಸೂಚಿಸಲಾಗಿದೆ. ಡಿಎಸ್‌ಇಆರ್‌ಟಿ ಸಿದ್ದಪಡಿಸಿರುವ ತರಬೇತಿ ಕೈಪಿಡಿ ಪ್ರಕಾರ 2019ರ ಆ.17ರಂದು ಹಾಜರಾತಿ ಅಧಿಕಾರಿಗಳಿಗೆ ಮತ್ತು ಆ.21ರಂದು ಎಸ್‌ಡಿಎಂಸಿ ಸದಸ್ಯರು, ಪೋಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2019ರ ಕರಡು ನೀತಿಯನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ.