Advertisement

ಪ್ರಾಣಿ-ಪಕ್ಷಿಗಳಿಗೆ ತಂಪು ವಾತಾವರಣ ಕಲ್ಪಿಸಲು ಹತ್ತಾರು ಉಪಕ್ರಮ

04:48 PM Apr 03, 2018 | Team Udayavani |

ಮಹಾನಗರ : ದಿನೇದಿನೆ ಧಗೆ ಹೆಚ್ಚುತ್ತಿದ್ದು, ಸೆಕೆಯ ಪ್ರಮಾಣ ಏರುತ್ತಿದೆ. ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಪ್ರಾಣಿ-ಪಕ್ಷಿಗಳಿಗೆ ಹಿತಕರ ವಾತಾವರಣ ಸೃಷ್ಟಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.  ಪ್ರಾಣಿ- ಪಕ್ಷಿಗಳಿರುವಲ್ಲಿ ವಾತಾವರಣ ವನ್ನು ತಂಪಾಗಿಸಲು ಹೆಚ್ಚುವರಿ ಫ್ಯಾನ್‌ಗಳ ಅಳವಡಿಕೆ, ನೀರು ಚಿಮ್ಮಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲಲ್ಲಿ ಅಳವಡಿಸಿರುವ ನೀರಿನ ತೊಟ್ಟಿಗಳಲ್ಲಿ  ಪ್ರಾಣಿಗಳು ಬಿದ್ದುಕೊಂಡು ಸೆಕೆಯಿಂದ ಬಚಾವಾಗಲು ಪ್ರಯತ್ನಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮೃಗಾಲಯದ ಪರಿಸರದಲ್ಲಿ ಹೇರಳ ವಾಗಿ ಮರಗಿಡಗಳಿದ್ದರೂ ಬಿಸಿಲಿನ ತಾಪ ಕಡಿಮೆ ಇಲ್ಲ. ಹಾಗಾಗಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರು ಪ್ರಾಣಿಗಳಿಗೆ ಅಗತ್ಯವಿದೆ.  ಸುಮಾರು 150 ಎಕ್ರೆಯಲ್ಲಿ ಹರಡಿ ಕೊಂಡ ಉದ್ಯಾನವನದಲ್ಲಿ  98 ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ- ಪಕ್ಷಿಗಳಿವೆ. ಅತಿ ಹೆಚ್ಚಿನ ಹುಲಿಗಳನ್ನು ಹೊಂದಿರುವ ಮೃಗಾಲಯವೂ ಹೌದು. ಮಂಗಳೂರು ಪ್ರದೇಶದಲ್ಲಿ ಪ್ರತಿವರ್ಷವೂ ಸೆಕೆಯ ಪ್ರಮಾಣ ಹೆಚ್ಚಿರುವುದರಿಂದ ಪರ್ಯಾಯ ವ್ಯವಸ್ಥೆ ಅನಿವಾರ್ಯ.

Advertisement

ಪ್ರತ್ಯೇಕ ವ್ಯವಸ್ಥೆಗಳೇನು ?
ಹದಿನೈದು ದಿನಗಳ ಹಿಂದೆಯೇ ಫ್ಯಾನ್‌- ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಹೆಚ್ಚುವರಿಯಾಗಿ ಸುಮಾರು 15ಕ್ಕೂ ಅಧಿಕ ಫ್ಯಾನ್‌ಗಳನ್ನು ತರಿಸಲಾಗಿದೆ. ಧಗೆ ಹೆಚ್ಚಿರುವ ವೇಳೆಯಲ್ಲಿ ಪೈಪುಗಳ ಮೂಲಕ ಪ್ರಾಣಿಗಳ ಮೈಮೇಲೆ ನೀರು ಚಿಮ್ಮಿಸುವ ಕೆಲಸವನ್ನು ಮಾಡಲಾಗುತ್ತದೆ. ಆರಂಭದಲ್ಲಿ ಪ್ರಾಣಿಗಳು ಇದಕ್ಕೆ ಹೆದರಿಕೊಂಡು ಪ್ರತಿರೋಧ ವ್ಯಕ್ತಪಡಿಸಿ ದರೂ ಬಳಿಕ ತಂಪಾಗಿ ನೀರಿಗೆ ಮೈಯೊ ಡ್ಡುತ್ತವೆ. ಉದ್ಯಾನವನದ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ ಸ್ಪಿಂಕ್ಲೇರ್‌ಗಳನ್ನು ಅಳವಡಿಸಲಾಗಿದ್ದು, ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುತ್ತವೆ ಎಂದು ಹುಲಿಗಳ ನಿರ್ವಹಣೆ ಜವಾಬ್ದಾರಿ ನಿರ್ವಹಿಸುತ್ತಿರುವ ಉದಯಕುಮಾರ್‌ ಅಭಿಪ್ರಾಯಿಸುತ್ತಾರೆ. 

ಮಕ್ಕಳ ರಜೆಯ ಸೀಸನ್‌
ಈಗ ಶಾಲೆ-ಕಾಲೇಜುಗಳಲ್ಲಿ ಬಹುತೇಕ ಪರೀಕ್ಷೆಗಳು ಮುಗಿದಿದ್ದು, ಮಕ್ಕಳಿಗೆ ರಜೆಯ ಸಮಯ. ಹೀಗಾಗಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸೋಮವಾರ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವಾರದ ರಜೆಯಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆನ್ನುವ ನಿಟ್ಟಿನಲ್ಲಿ ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 

ಸೆಕೆ ನಿಯಂತ್ರಣಕ್ಕೆ ಕ್ರಮ 15 ದಿನಗಳ 
ಹಿಂದೆಯೇ ಬಿಸಿಲಿನ ಧಗೆಯಿಂದ ಪ್ರಾಣಿ-ಪಕ್ಷಿಗಳ ಸೆಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಫ್ಯಾನ್‌, ನೀರು ಚಿಮ್ಮಿಸುವ ಮೂಲಕ 
ವಾತಾವರಣವನ್ನು ತಂಪಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲಲ್ಲಿ ನೀರಿನ ಕೊಳ, ಟ್ಯಾಂಕ್‌ಗಳನ್ನೂ ಅಳವಡಿಸಲಾಗಿದೆ. ಈಗ ಶಾಲಾ-ಕಾಲೇಜುಗಳಿಗೆ ರಜೆಯ ಸಮಯವಾಗಿದ್ದು, ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ. 
–  ಎಚ್‌. ಜಯಪ್ರಕಾಶ್‌ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ

  ಕಿರಣ್‌ ಸರಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next