ಲಂಡನ್: ತಾನು ಎಬಿ ಡಿ ವಿಲಿಯರ್ ಜತೆ ಮತ್ತೂಮ್ಮೆ ಟೆನಿಸ್ ಆಡಬೇಕು! ಇಂಥದೊಂದು ಅಭಿಲಾಷೆ ವ್ಯಕ್ತಪಡಿಸಿದವರು ಯಾರು ಗೊತ್ತೇ? ದಕ್ಷಿಣ ಆಫ್ರಿಕಾದ ಟೆನಿಸಿಗ ಕೆವಿನ್ ಆ್ಯಂಡರ್ಸನ್. ಶುಕ್ರವಾರದ ವಿಂಬಲ್ಡನ್ ಗೆಲುವಿನೊಂದಿಗೆ 50 ಗ್ರ್ಯಾನ್‌ಸ್ಲಾಮ್ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾದ 7ನೇ ಟೆನಿಸಿಗನಾಗಿ ಮೂಡಿಬಂದ ಬಳಿಕ ಆ್ಯಂಡರ್ಸನ್ ಈ ಹೇಳಿಕೆ ನೀಡಿದ್ದಾರೆ.
ಡಿ ವಿಲಿಯರ್ ಕ್ರೀಡಾ ಜಗತ್ತಿನ ಸವ್ಯಸಾಚಿ ಎಂಬುದು ಎಲ್ಲರೂ ತಿಳಿದಿರುವ ವಿಷಯ. ಸ್ವಿಮ್ಮಿಂಗ್‌ನಿಂದ ರಗಿºà, ಟೆನಿಸ್‌ನಿಂದ ಕ್ರಿಕೆಟ್… ಹೀಗೆ ಎಲ್ಲ ಆಟಗಳನ್ನೂ ಎಬಿಡಿ ಆರೆದು ಕುಡಿದಿದ್ದಾರೆ. ಹೀಗಿರುವಾಗ ಇವರು ಮತ್ತೂಮ್ಮೆ ಆ್ಯಂಡರ್ಸನ್ ಜತೆ ಟೆನಿಸ್ ಆಡಿದರೆ ಅದರಲ್ಲಿ ಅಚ್ಚರಿಯೇನಿಲ್ಲ.
ಅಂದಹಾಗೆ ಇವರಿಬ್ಬರು ಟೆನಿಸ್ ಮುಖಾಮುಖೀ ಏರ್ಪಟ್ಟದ್ದು 21 ವರ್ಷಗಳ ಹಿಂದೆ. ಆಗ ಆ್ಯಂಡರ್ಸನ್‌ಗೆ 10 ವರ್ಷ, ಎಬಿಡಿಗೆ 12 ವರ್ಷ. ಆ ಪಂದ್ಯದಲ್ಲಿ ಡಿ ವಿಲಿಯರ್ ಆ್ಯಂಡರ್ಸನ್‌ಗೆ ಸೋಲುಣಿಸಿದ್ದರು.
“ಬಹಳ ವರ್ಷಗಳ ಹಿಂದೆ ನಾನು ಡಿ ವಿಲಿಯರ್ ಜತೆ ಟೆನಿಸ್ ಆಡಿದ್ದೆ. ಆಗ ಅವರಿಗೆ 12 ವರ್ಷ, ನನಗೆ ಹತ್ತರ ಹರೆಯ. ಆ ಪಂದ್ಯದಲ್ಲಿ ಅವರು ನನ್ನನ್ನು ಸೋಲಿಸಿದ್ದರು. ಎಬಿಡಿ ಓರ್ವ ಆತ್ಯುತ್ತಮ ಟೆನಿಸ್‌ಪಟು. ಅನಂತರ ನಾವಿಬ್ಬರೂ ಸಂಪರ್ಕದಲ್ಲಿದ್ದೆವು. ಆದರೆ ಮತ್ತೂಮ್ಮೆ ಟೆನಿಸ್‌ನಲ್ಲಿ ಮುಖಾಮುಖೀಯಾಗಲು ಸಾಧ್ಯವಾಗಲಿಲ್ಲ. ಈ ಕ್ಷಣವನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ…’ ಎಂದಿದ್ದಾರೆ ಆ್ಯಂಡರ್ಸನ್.
ಈಗ ಸಾಗುತ್ತಿರುವ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಡಿ ವಿಲಿಯರ್ ಗೈರು ಎದ್ದು ಕಾಣುತ್ತಿದೆ ಎಂದ ಆ್ಯಂಡರ್ಸನ್, ಲಾರ್ಡ್ಸ್ ಟೆಸ್ಟ್ ಪಂದ್ಯದ ಶನಿವಾರದ ಆಟವನ್ನು ವೀಕ್ಷಿಸಲು ಕಾತರಗೊಂಡಿದ್ದೇನೆ ಎಂದರು.