Advertisement

ತೆಂಕಿಲ ಗುಡ್ಡ ಕುಸಿತ: 11 ಕುಟುಂಬ ಸ್ಥಳಾಂತರ

09:47 PM Aug 13, 2019 | Team Udayavani |

ಪುತ್ತೂರು: ಭೂಕಂಪನದ ಸಾಧ್ಯತೆ ಇರುವ ಬಗ್ಗೆ ಭೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ ಬೆನ್ನಲೇ ನಗರದ ತೆಂಕಿಲ ದರ್ಖಾಸು ಪ್ರದೇಶದ 11 ಕುಟುಂಬಗಳನ್ನು ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರ ಸೂಚನೆಯಂತೆ ಸ್ಥಳಾಂತರಿಸಲಾಗಿದೆ.

Advertisement

ತೆಂಕಿಲ ದರ್ಖಾಸು ಪ್ರದೇಶಕ್ಕೆ ಸಹಾಯಕ ಆಯುಕ್ತರು ಭೇಟಿ ನೀಡಿ, ಬಿರುಕು ಬಿಟ್ಟಿರುವ ಜಮೀನಿನ ಆಸುಪಾಸಿನ ಮನೆಗಳನ್ನು ಪರಿಶೀಲನೆ ನಡೆಸಿ, ಮಳೆ ಕಡಿಮೆಯಾಗುವ ತನಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಗರಸಭೆಗೆ ಸೂಚನೆ ನೀಡಿದ್ದರು.

ಇಂದಿರಾ ಕ್ಯಾಂಟೀನ್‌ ಆಹಾರ
ತೆಂಕಿಲ ದರ್ಖಾಸು ಪರಿಸರದ ಮೂರು ಕುಟುಂಬಗಳಿಗೆ ನಗರಸಭೆಯ ಸಮುದಾಯ ಭವನದಲ್ಲಿ ವಸತಿ ಮತ್ತು ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ. ಗಂಗಾಧರ, ಮಾಲಿನಿ ಹಾಗೂ ಸುರೇಶ್‌ ಕುಟುಂಬದ 13 ಮಂದಿ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ.

ಗುರುವ ಅವರ ಕುಟುಂಬದ ಸದಸ್ಯರು ಮಿತ್ತೂರಿನ ಸಂಬಂಧಿಕರ ಮನೆಗೆ, ಪೂವಪ್ಪ ಅವರ ಕುಟುಂಬ ನಿಡ³ಳ್ಳಿಯಲ್ಲಿನ ಸಂಬಂಧಿಕರ ಮನೆಗೆ, ಸೇಸಪ್ಪ ಗೌಡರ ಕುಟುಂಬ ನಗರದ ಕಮ್ನಾರುನಲ್ಲಿರುವ ಸಂಬಂಧಿಕರ ಮನೆಗೆ, ಶ್ರೀಧರ ನಾಯ್ಕ ಅವರ ಕುಟುಂಬ ತೆಂಕಿಲ ಬೈಪಾಸ್‌ನ ಸಂಬಂಧಿಕರ ಮನೆಗೆ ತೆರಳಿ ಆಶ್ರಯ ಪಡೆದಿವೆ. ನಿವಾಸಿಗಳನ್ನು ನಗರಸಭೆ ವಾಹನದಲ್ಲಿ ಅವರ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಯಿತು.

ಉಪಾಹಾರ ವ್ಯವಸ್ಥೆ
ಸಮುದಾಯ ಭವನಕ್ಕೆ ಸ್ಥಳಾಂತರಗೊಂಡಿರುವ ಕುಟುಂಬದ ಶಾಲಾ ಮಕ್ಕಳು ಶಾಲೆಗೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಉಪಾಹಾರ ಸಿದ್ಧಪಡಿಸಿ ಬುತ್ತಿಗಳಿಗೆ ಹಾಕಿ ನೀಡಲಾಗಿದೆ. ಮಕ್ಕಳು ಶಾಲಾ ಹಾಜರಾತಿಯಿಂದ ತಪ್ಪಿಸಿಕೊಳ್ಳದಂತೆ ನಗರಸಭೆ ಈ ಕ್ರಮ ಕೈಗೊಂಡಿದೆ.

Advertisement

ತೆಂಕಿಲದಲ್ಲಿ ಗುಡ್ಡ ಬಿರುಕು ಬಿಟ್ಟ ಸ್ಥಳ ಅಪಾಯಕಾರಿ ಹಂತದಲ್ಲಿ ಇರುವುದು ಮೇಲ್ನೋಟಕ್ಕೆ ಕಂಡಿದೆ. ಸುರಕ್ಷತೆ ದೃಷ್ಟಿಯಿಂದ ನಿವಾಸಿಗಳನ್ನು ಸ್ಥಳಾಂತರಿಸಿದ್ದು, ಸ್ಥಳೀಯಾಡಳಿತ ಮೂಲಕ ನಗರದ ಸಮುದಾಯ ಭವನದಲ್ಲಿ ವಸತಿ, ಊಟೋಪಹಾರ ಒದಗಿಸಲಾಗಿದೆ. ಆರೋಗ್ಯದ ಕಡೆಗೂ ಗಮನಹರಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರದ ಸಮುದಾಯ ಭವನಕ್ಕೆ ಆ. 13ರಂದು ಭೇಟಿ ನೀಡಿದ ಅವರು ನಿವಾಸಿಗಳ ಆರೋಗ್ಯ ಮತ್ತು ಸ್ಥಳದ ಕುರಿತು ಮಾಹಿತಿ ಪಡೆದು ಬಳಿಕ ಮಾತನಾಡಿದರು.

ಶಾಶ್ವತ ವ್ಯವಸ್ಥೆಗೆ ಕ್ರಮ
ಕೆಲವರು ಸಂಬಂಧಿಕರ ಮನೆಯ ಆಶ್ರಯ ಪಡೆದಿದ್ದಾರೆ. ಮಳೆ ಇಳಿಮುಖವಾದ ಬಳಿಕ ಸ್ಥಳದ ವಸ್ತುಸ್ಥಿತಿ ಪರಿಶೀಲಿಸಿ ವಾಸಸ್ಥಳಕ್ಕೆ ಮರಳುವ ಬಗ್ಗೆ ಯೋಚಿಸಲಾಗುವುದು. ಅಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದ್ದಲ್ಲಿ ಕುಟುಂಬಗಳಿಗೆ ಶಾಶ್ವತ ಬದಲಿ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದ್ದಾರೆ.

ಸ್ಥಳಾಂತರಕ್ಕೆ ನಿರಾಕರಣೆ
ಗುಡ್ಡ ಬಿರುಕು ಬಿಟ್ಟು ಆತಂಕದ ಸ್ಥಿತಿಯಲ್ಲಿರುವ ತೆಂಕಿಲ ದರ್ಖಾಸು ಪ್ರದೇಶದಲ್ಲಿ ವಾಸವಾಗಿರುವ 10 ಕುಟುಂಬಗಳ ಸದಸ್ಯರು ಮನೆ ಬಿಟ್ಟು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಮನೆಗಳಿಗೆ ಏನೂ ಆಗುವುದಿಲ್ಲ. ನಿಮ್ಮ ಸುರಕ್ಷತೆಗಾಗಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುವುದು ಎಂದು ಸಹಾಯಕ ಆಯುಕ್ತರು ನಿವಾಸಿಗಳ ಮನವೊಲಿಸಿದರು. ಮುಂದಿನ ವ್ಯವಸ್ಥೆಗಳನ್ನು ಸರಕಾರಿ ಮಟ್ಟದಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ನಿವಾಸಿಗಳು ಸ್ಥಳಾಂತರವಾಗಲು ಒಪ್ಪಿಗೆ ನೀಡಿದರು.

ಸಮುದಾಯ ಭವನದಲ್ಲೇ ಓದು, ಅಭ್ಯಾಸ
ಒಂದು ವಾರದ ಬಳಿಕ ಶಾಲೆಗಳು ಪುನಾರಂಭವಾದ ಹಿನ್ನೆಲೆಯಲ್ಲಿ ಸಮುದಾಯ ಭವನದಲ್ಲಿರುವ ಕುಟುಂಬಗಳ ಮಕ್ಕಳು ಸೋಮವಾರ ರಾತ್ರಿ ಅಲ್ಲೇ ಓದು, ಅಭ್ಯಾಸ ಪ್ರಕ್ರಿಯೆ ನಡೆಸಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next