Advertisement

ತೆಂಕಿಲ ಗುಡ್ಡ ಬಿರುಕು: ಸರ್ವೆ ಆಧರಿಸಿ ಕ್ರಮ

12:45 AM Sep 21, 2019 | Team Udayavani |

ಪುತ್ತೂರು: ಕೆಲವು ತಿಂಗಳ ಹಿಂದೆ ತೆಂಕಿಲ ದರ್ಖಾಸ್‌ ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕಿನ ಕಾರಣಗಳ ಬಗ್ಗೆ ಸಮರ್ಪಕ ಪರಿಶೀಲನೆ ಆಗಿಲ್ಲ. ಹಾಗಾಗಿ ಪುನಃ ತಜ್ಞರ ತಂಡದಿಂದ ಸರ್ವೆ ಮಾಡಿಸಿ, ಆ ವರದಿ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ಬಳಿಕವೇ ಸ್ಥಳಾಂತರದ ಅಗತ್ಯದ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ತೆಂಕಿಲ, ಕಮ್ನಾರು, ಕಟ್ಟತ್ತಾರು ಪ್ರದೇಶದ ನಿವಾಸಿಗಳು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಶುಕ್ರವಾರ ಮಿನಿ ವಿಧಾನಸೌಧದಲ್ಲಿ ನಗರಸಭೆ ಸದಸ್ಯೆ ದೀಕ್ಷಾ ಪೈ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ನಿವಾಸಿಗಳು, ಸ್ಥಳಾಂತರಿಸುವ ನಿರ್ಧಾರದ ಮೊದಲು ಬಿರುಕಿಗೆ ಕಾರಣಗಳ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ತನಕದ ಸರ್ವೆ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರತ್ಯೇಕ ಸರ್ವೆಯ ಅಗತ್ಯದ ಕುರಿತಾಗಿಯೂ ತೀರ್ಮಾನಿಸಲಾಗುವುದು ಎಂದರು.

ಕ್ರಮಬದ್ಧ ಸರ್ವೆ ಆಗಿಲ್ಲ
ಗುಡ್ಡ ಬಿರುಕು ಬಿಟ್ಟ ಸಂದರ್ಭ ಭೂ ವಿಜ್ಞಾನಿಗಳು ಸಹಿತ ಎರಡು ಮೂರು ತಂಡಗಳು ಸ್ಥಳಕ್ಕೆ ಬಂದಿವೆ. ಆದರೆ ಈ ಬಗ್ಗೆ ಸ್ಥಳೀಯ ನಿವಾಸಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ವೈಜ್ಞಾನಿಕ ಮಾದರಿಯಲ್ಲಿ ತನಿಖೆ ಮಾಡದೆ ಭೂಕಂಪ ಎಂಬ ಹೇಳಿಕೆ ನೀಡಿದ್ದಾರೆ. ಅನಂತರ ಸ್ಯಾಟಲೈಟ್‌ ಮೂಲಕ ಸರ್ವೆ ನಡೆಸಲಾಗಿದೆ ಎಂದಿದ್ದರೂ ಆ ವರದಿಯನ್ನು ಈ ತನಕ ಬಹಿರಂಗಪಡಿಸಿಲ್ಲ. ಈವರೆಗಿನ ಯಾವುದೇ ಸರ್ವೆಗಳು ಕ್ರಮಬದ್ಧವಾಗಿ ನಡೆದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಇಂಗುಗುಂಡಿಯೇ ಕಾರಣ
ಗುಡ್ಡ ಬಿರುಕಿಗೆ ಇಂಗುಗುಂಡಿ ಕಾರಣ. ತಜ್ಞ ಗಂಗಾಧರ ಭಟ್‌ ಅವರನ್ನು ಸ್ಥಳೀಯರು ಕರೆಯಿಸಿ ಪರಿಶೀಲಿಸಿದ ಸಂದರ್ಭ ಅವರು ಈ ಅಂಶವನ್ನು ದೃಢಪಡಿಸಿದ್ದಾರೆ. ಸರ್ವೆಗೆ ಅವಕಾಶ ಕೊಟ್ಟಲ್ಲಿ ಈ ಬಗ್ಗೆ ತಾನು ಸಂಪೂರ್ಣ ಪರಿಶೀಲಿಸಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ಹೀಗಾಗಿ ಸಂತ್ರಸ್ತ ನಿವಾಸಿಗಳ ಸಮ್ಮುಖದಲ್ಲಿ ಉಪಸ್ಥಿತಿಯಲ್ಲಿ ಸರ್ವೆ ನಡೆಸುವಂತೆ ಅವರು ಆಗ್ರಹಿಸಿದರು. ಮನವಿ ಸ್ವೀಕಾರ ಸಂದರ್ಭ ಉಪವಿಭಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

1,200ಕ್ಕೂ ಅಧಿಕ ಇಂಗುಗುಂಡಿ
ತೆಂಕಿಲ ದರ್ಖಾಸ್‌ ಗುಡ್ಡದ ಮೇಲೆ ಕೆಸಿಡಿಸಿಗೆ ಸಂಬಂಧಿಸಿದ ನೂರಾರು ಎಕರೆ ಗೇರು ತೋಟವಿದ್ದು, ಅದರಲ್ಲಿ 1,200ಕ್ಕೂ ಅಧಿಕ ಇಂಗುಗುಂಡಿಗಳನ್ನು ತೋಡಲಾಗಿದೆ. ಸುಮಾರು 4 ಅಡಿ ಆಳವಿರುವ ಈ ಇಂಗುಗುಂಡಿಗಳಲ್ಲಿ ನೀರು ಇಂಗುವುದೇ ಗುಡ್ಡ ಬಿರುಕು ಬಿಡಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಪರಿಸರದಲ್ಲಿ 100ಕ್ಕಿಂತ ಅಧಿಕ ಮನೆಗಳಿವೆ. ಆದರೆ 12 ಮನೆಯವರನ್ನು ಮಾತ್ರ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದು ಸರಿಯಲ್ಲ. ಇದರಲ್ಲಿ 10 ಮನೆಯವರು ಸಮಗ್ರ ತನಿಖೆ ಆಗದೆ ನಾವು ಸ್ಥಳಾಂತರಗೊಳ್ಳುವುದಿಲ್ಲ. ಇಲ್ಲಿ ಪುನಃ ಸರ್ವೆ ಮಾಡಿ ಮಾಹಿತಿ ನೀಡಬೇಕು ಎಂದು ಸಂತ್ರಸ್ತರು ಮನವಿ ಸಲ್ಲಿಸಿದರು. ಗುಡ್ಡಭಾಗದಲ್ಲಿ ನಡೆಯುವ ಅವೈಜ್ಞಾನಿಕ ಕಾಮಗಾರಿಗೆ ತಡೆ ನೀಡುವಂತೆಯೂ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next