Advertisement
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಅನಗತ್ಯವಾಗಿ ಅಗೆಯುವುದು, ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್ಸಿ) ಹಾವಳಿ ತಡೆಯುವುದು, ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸೇರಿ ಎಲ್ಲ ರೀತಿಯ ಸೇವೆಗಳು ಒಂದೇ ಸೂರಿನಡಿ ನೀಡುವುದು ಯೋಜನೆಯ ಪರಿಕಲ್ಪನೆಯಾಗಿದೆ. ಆದರೆ, ನಗರದ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಕೆಳಗಿರುವ ಡಕ್ಟ್ಗಳಲ್ಲಿರಬೇಕಾದ ಒಎಫ್ಸಿ ಕೇಬಲ್‌ಗಳು ಪಾದಚಾರಿಗಳಿಗೆ ಸಾವಿನ ಕುಣಿಕೆಗಳಾಗಿ ಪರಿಣಮಿಸಿವೆ.
Related Articles
Advertisement
ಶುಲ್ಕ ಜಾಸ್ತಿ ಎಂಬ ಆರೋಪ: ಟೆಂಡರ್‌ಶ್ಯೂರ್ ರಸ್ತೆಗಳಲ್ಲಿ ಕೇಬಲ್ ಅಳವಡಿಕೆಗೆ ಹೆಚ್ಚಿನ ಶುಲ್ಕ ನಿಗದಿಪಡಿಸಿರುವುದರಿಂದ ಟೆಲಿಕಾಂ ಸಂಸ್ಥೆಗಳು ಕೇಬಲ್ ಅಳವಡಿಕೆಗೆ ಮುಂದಾಗುತ್ತಿಲ್ಲ ಎಂಬ ಆರೋಪವಿದೆ. ಸಾಮಾನ್ಯ ರಸ್ತೆಗಳಲ್ಲಿ ಪ್ರತಿ ಮೀಟರ್ ಕೇಬಲ್ ಅಳವಡಿಕೆಗೆ 850 ರೂ. ನಿಗದಿಪಡಿಸಲಾಗಿದೆ. ಆದರೆ, ಪಾಲಿಕೆಯಿಂದ ಅಭಿವೃದ್ಧಿಪಡಿಸಿದ 13 ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಪ್ರತಿ ಮೀಟರ್‌ಗೆ 1,500 ರೂ. ನಿಗದಿಪಡಿಸಲಾಗಿದೆ. ಈ ಕಾರಣದಿಂದ ಸಂಸ್ಥೆಗಳು ಮುಂದಾಗುತ್ತಿಲ್ಲ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಂಡ ಹಾಕಿದಾಗ ದೌಡಾಯಿಸಿದ್ದರು: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಕೆ.ಗುಣಶೇಖರ್ ಅವರು ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಮರದಿಂದ ಮರಕ್ಕೆ ಎಳೆಯಲಾಗಿದ್ದ ಒಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಿದ್ದರು. ಪರಿಣಾಮ ಕೇವಲ 24 ಗಂಟೆಗಳಲ್ಲಿ ಪಾಲಿಕೆಗೆ 2.50 ಕೋಟಿ ರೂ. ಒಎಫ್ಸಿ ಶುಲ್ಕ ಸಂಗ್ರಹವಾಗಿತ್ತು. ಜತೆಗೆ ಹಲವು ಸಂಸ್ಥೆಗಳು ಶುಲ್ಕ ಪಾವತಿಸಲು ಮುಂದಾಗಿದ್ದವು. ಅದಾದ ಬಳಿಕ ಮತ್ತೆ ಹಳೆಯ ಚಾಲಿ ಮುಂದುವರಿಸಿವೆ.
ಏಜೆನ್ಸಿಗಳ ಹಿಂದೇಟಿಗೆ ಕಾರಣವೇನು?: ಒಎಫ್ಸಿ ಕೇಬಲ್ ಅಳವಡಿಕೆ ಸಂಸ್ಥೆಗಳು ಸಾಮಾನ್ಯ ರಸ್ತೆಗಳಲ್ಲಿ 100 ಮೀಟರ್‌ಗೆ ಅನುಮತಿ ಪಡೆದು 300-400 ಮೀಟರ್ ಕೇಬಲ್ ಅಳವಡಿಸುತ್ತಾರೆ. ಆದರೆ, ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಇಂತಹ ಅಕ್ರಮಕ್ಕೆ ಅವಕಾಶವಿಲ್ಲ. ಈ ಕಾರಣದಿಂದಾಗಿ ಟೆಲಿಕಾಂ ಏಜೆನ್ಸಿಗಳು ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಡಕ್ಟ್ಗಳನ್ನು ಬಳಸಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಾಣಕ್ಕೆ ಕುತ್ತು ತರುವ ಕೇಬಲ್‌ಗಳು: ಒಎಫ್ಸಿ ಸಂಸ್ಥೆಗಳು ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನು ಪಾಲಿಕೆಯಿಂದ ಕೆಲವು ಕಡೆಗಳಲ್ಲಿ ಅರ್ಧಕ್ಕೆ ಕತ್ತರಿಸಿ ಬಿಟ್ಟಿದ್ದು, ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವವರ ಪ್ರಾಣಕ್ಕೆ ಕುತ್ತಾಗಿ ಪರಿಗಣಮಿಸಿವೆ. ತುಂಡಾಗಿ ನೇತಾಡುವ ಕೇಬಲ್‌ಗಳು ರಸ್ತೆಯಲ್ಲಿ ಸಂಚರಿಸುವವರ ಕಣ್ಣಿಗೆ ತಾಗುವ ಆತಂಕವಿದೆ. ಈ ಹಿಂದೆ ಡಬ್ಬಲ್ ರಸ್ತೆಯಲ್ಲಿ ಕೇಬಲ್ ಕಾಲಿಗೆ ತಾಗಿ ರಸ್ತೆಗೆ ಬಿದ್ದ ಪರಿಣಾಮ ಯುವತಿಯೊಬ್ಬರು ಮೃತಪಟ್ಟಿದ್ದಳು. ಜತೆಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಕೇಬಲ್ ಕುತ್ತಿಗೆ ತಾಗಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದ ಘಟನೆ ಸಂಭವಿಸಿದ್ದನ್ನು ಸ್ಮರಿಸಬಹುದಾಗಿದೆ.
ಒಎಫ್ಸಿ ಅಳವಡಿಕೆಗೆ ಸಿದ್ಧವಿರುವ ರಸ್ತೆಗಳು: ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಮ್ಯೂಸಿಯಂ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ವಿಠuಲ್ ಮಲ್ಯ ರಸ್ತೆ, ಕಮಿಷನರೇಟ್ ರಸ್ತೆ, ನೃಪತುಂಗರಸ್ತೆ, ಕೆ.ಜಿ.ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ, ಚರ್ಚ್‌ಸ್ಟ್ರೀಟ್.
ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಈ ಹಿಂದಿನ ಸಚಿವರಾದ ಕೆ.ಜೆ.ಜಾರ್ಜ್ ಹಲವಾರು ಬಾರಿ ಏಜೆನ್ಸಿಗಳೊಂದಿಗೆ ಚರ್ಚೆ ಮಾಡಿ ಅನಧಿಕೃತ ಕೇಬಲ್ ಘೋಷಣೆ ಮಾಡಿಕೊಳ್ಳುವಂತೆ ಹಾಗೂ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಶುಲ್ಕ ಪಾವತಿಸಿ ಕೇಬಲ್ ಅಳವಡಿಸುವಂತೆ ತಿಳಿಸಿದ್ದಾರೆ. ಆದರೂ, ಏಜೆನ್ಸಿಗಳು ಕೇಬಲ್‌ಗಳ ಅಳವಡಿಕೆಗೆ ಮುಂದಾಗಿಲ್ಲ. ಈ ಕುರಿತು ಡಿಸಿಎಂ ಜತೆ ಚರ್ಚಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು.-ಆರ್.ಸಂಪತ್‌ರಾಜ್, ಮೇಯರ್