Advertisement

ಕುಷ್ಟಗಿ ಗೇಟ್ ಸೇತುವೆಗೆ ಟೆಂಡರ್‌ ಸಿದ್ಧ

12:06 PM Jul 20, 2019 | Team Udayavani |

ಕೊಪ್ಪಳ: ಬಹು ವರ್ಷಗಳ ಬೇಡಿಕೆಯಾಗಿದ್ದ ಕೊಪ್ಪಳ-ಕುಷ್ಟಗಿ ರಸ್ತೆಯ ರೈಲ್ವೆ ಗೇಟ್-66ಗೆ ಮೇಲ್ಸೇತುವೆ ನಿರ್ಮಾಣದ ಕನಸು ಮತ್ತೆ ಗರಿಗೆದರಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 24 ಕೋಟಿ ರೂ. ವೆಚ್ಚದ ಟೆಂಡರ್‌ ಪ್ರಕ್ರಿಯೆಗೆ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದ್ದು, ಈ ಭಾಗದ ಜನರ ಸಂಚಾರಕ್ಕೆ ಖುಷಿ ವಿಚಾರವಾಗಿದೆ.

Advertisement

ರೈಲ್ವೆ ಗೇಟ್‌ಗೆ ಕೆಳ, ಮೇಲ್ಸೇತುವೆ ನಿರ್ಮಿಸುಲ್ಲಿ ಇಲ್ಲಿನ ಜನರು ಹೋರಾಡಿದ ಶ್ರಮ ಅಷ್ಟಿಷ್ಟಲ್ಲ. ನಿಜಕ್ಕೂ ಹಗಲಿರುಳೆನ್ನದೇ ನಿತ್ಯದ ಬದುಕು ಬಿಟ್ಟು ಸಾರ್ವಜನಿಕ ಉದ್ದೇಶಕ್ಕಾಗಿ ಸೇತುವೆ ನಿರ್ಮಾಣಕ್ಕೆ ಹೋರಾಡಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಇಲ್ಲಿನ ಭಾಗ್ಯನಗರದ ರೈಲ್ವೆ ಗೇಟ್ ನಂ.62ಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಸಾವಿರಾರು ಜನರು ಹೋರಾಟ ಮಾಡಿ ತಮ್ಮ ನೋವು ವ್ಯಕ್ತಪಡಿಸಿದ್ದರು. ಸೇತುವೆಗಾಗಿ ಬಂದ್‌ ಆಚರಣೆ ಮಾಡಲಾಗಿತ್ತು. ಹಲವು ಹೋರಾಟದ ಫಲವಾಗಿ ಇಂದು ಭಾಗ್ಯನಗರದ ಮೇಲ್ಸೇತುವೆ ಸುಂದರವಾಗಿ ನಿರ್ಮಾಣವಾಗಿ ನಿಂತಿದೆ. ವರ್ಷಗಳ ಕಾಲ ಕೊಪ್ಪಳಕ್ಕೆ ಬರಲು ದೂರ ಸಂಚಾರ ಮಾಡಿ ಆಗಮಿಸುತ್ತಿದ್ದ ಜನರಿಗೆ ನೆಮ್ಮದಿ ಸಿಕ್ಕಿದೆ. ಅದಕ್ಕೂ ಮೊದಲು ರೈಲ್ವೆ ಗೇಟ್-64ಗೂ ಕೆಳ ಸೇತುವೆ ನಿರ್ಮಾಣ ಮಾಡಿದ್ದು, ಅಲ್ಲಿಯ ಜನರು ಸಹಿತ ಸೇತುವೆಗಾಗಿ ಶ್ರಮಿಸಿದ್ದಾರೆ.

ಪ್ರಸ್ತುತ ಕುಷ್ಟಗಿ ರೈಲ್ವೆ ಗೇಟ್-66ಗೆ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಅಸ್ತು ಎಂದಿದ್ದು, ಕೇಂದ್ರ ಮಟ್ಟದಲ್ಲಿ ಸಂಸದ ಸಂಗಣ್ಣ ಕರಡಿ ಹೋರಾಟ ಮಾಡಿದ್ದರು. ಜೊತೆಗೆ ರಾಜ್ಯ ಸರ್ಕಾರದಿಂದಲೂ ಶಾಸಕ ರಾಘವೇಂದ್ರ ಹಿಟ್ನಾಳ ಪ್ರಯತ್ನದ ಫಲವಾಗಿ ಇಂದು ಗೇಟ್ ನಂ-66ಗೆ ಮೇಲ್ಸೇತುವೆ ನಿರ್ಮಾಣದ ಭಾಗ್ಯ ಲಭಿಸಿದೆ.

ಕುಷ್ಟಗಿ ಸಂಪರ್ಕದ ಮುಖ್ಯ ರಸ್ತೆ: ಕುಷ್ಟಗಿ ಭಾಗದ ಹಳ್ಳಿಗಳಿಗೆ ಪ್ರಯಾಣ ಮಾಡಬೇಕೆಂದರೆ ಕುಷ್ಟಗಿ ಗೇಟ್-66 ಮೂಲಕವೇ ಸಂಚಾರ ಮಾಡಬೇಕಾಗಿದೆ. ಇದನ್ನು ಬಿಟ್ಟರೆ ಪರ್ಯಾಯ ರಸ್ತೆಗಳು ಇಲ್ಲವೇ ಇಲ್ಲವೆಂಬ ಪರಿಸ್ಥಿತಿಯಿದೆ. ಈ ಭಾಗದಲ್ಲಿನ ಸಾವಿರಾರು ಹಳ್ಳಿಯ ಜನತೆ ಇದೇ ರಸ್ತೆಯನ್ನೇ ಅವಲಂಬಿಸಿ ನಿತ್ಯವೂ ಸಂಚಾರ ಮಾಡುತ್ತಿದ್ದಾರೆ. ಪ್ರತಿಯೊಂದನ್ನು ವ್ಯವಹರಿಸಲು ಈ ಗೇಟ್ ಮೂಲಕವೇ ಕೊಪ್ಪಳ ನಗರಕ್ಕೆ ಪ್ರವೇಶ ಪಡೆಯಬೇಕಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಇದೊಂದೇ ಮಾರ್ಗವಾಗಿದೆ. ಆದರೆ ಪ್ರತಿ ದಿನ ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ಜನರು ನೂರೆಂಟು ತಾಪತ್ರಯ ಅನುಭವಿಸಿದ್ದಾರೆ. ರೋಗಿಗಳು ಇಂದಿಗೂ ಪರಿತಪಿಸುತ್ತಿದ್ದಾರೆ. ಇದರಿಂದ ಎಂದು ಗೇಟ್‌ಗೆ ಸೇತುವೆ ನಿರ್ಮಾಣ ಮಾಡುವರೋ ಎಂದು ಗೋಗರೆಯುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಜನರ ಬಹು ದಿನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

Advertisement

ವಿಸ್ತಾರಗೊಂಡ ಕೊಪ್ಪಳ ನಗರ: ಕೊಪ್ಪಳ ನಗರ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳುತ್ತಿದ್ದು, ಕುಷ್ಟಗಿಯ ರೈಲ್ವೆ ಗೇಟ್-66 ಆಚೆಗೂ ನಗರದ ವ್ಯಾಪ್ತಿ ವಿಸ್ತಾರವಾಗಿದೆ. ಶಾಲಾ ಕಾಲೇಜುಗಳು ಅಲ್ಲಿಯೂ ಆರಂಭಿಸಿವೆ.

ಹಾಗಾಗಿ ಈ ಗೇಟ್‌ಗೆ ಸೇತುವೆ ಅವಶ್ಯಕತೆ ತುಂಬ ಇದೆ. ನಾಯಕರ ನಿರಂತರ ಪ್ರಯತ್ನದ ಫಲವಾಗಿ ಮೇಲ್ಸೇತುವೆ ಮಂಜೂರಾಗಿದೆ. ರಾಜ್ಯ ಸರ್ಕಾರದಿಂದ 13 ಕೋಟಿ, ಕೇಂದ್ರ ಸರ್ಕಾರದಿಂದ 10.51 ಕೋಟಿ ಸೇರಿದಂತೆ ಒಟ್ಟು 24 ಕೋಟಿ ರೂ. ಸೇತುವೆ ನಿರ್ಮಾಣದ ಯೋಜನಾ ಮೊತ್ತವಾಗಿದೆ.

ಬೆಂಗಳೂರು ಹಂತದಲ್ಲಿ ಟೆಂಡರ್‌: ಹುಬ್ಬಳ್ಳಿ ರೈಲ್ವೆ ವಲಯದ ಸೇತುವೆ ನಿರ್ಮಾಣದ ಕಚೇರಿ ಬೆಂಗಳೂರಿನಲ್ಲಿದ್ದು, ಅಲ್ಲಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲವನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ರೈಲ್ವೆ ಇಲಾಖೆ ಇದೇ ವರ್ಷದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭ ಮಾಡುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಬಹು ವರ್ಷಗಳ ಜನರ ಗೋಳಾಟಕ್ಕೆ ಸರ್ಕಾರ ಸ್ಪಂದಿಸಿದ್ದು, ಗೇಟ್ ನಂ.66ಗೆ ಮೇಲ್ಸೇತುವೆ ನಿರ್ಮಾಣಕ್ಕೆ 24 ಕೋಟಿ ರೂ. ಮೀಸಲಿಟ್ಟು ಟೆಂಡರ್‌ ಪ್ರಕ್ರಿಯೆ ಆರಂಭಕ್ಕೆ ರೈಲ್ವೆ ಇಲಾಖೆ ಅಣಿಯಾಗುತ್ತಿದೆ. ಇದರಿಂದ ಜನರ ಗೋಳಾಟಕ್ಕೆ ಇನ್ನೂ ವರ್ಷದಲ್ಲಿಯೇ ತೆರೆ ಬೀಳುವ ಸಾಧ್ಯತೆಯಿದೆ.

ಕುಷ್ಟಗಿ ರೈಲ್ವೆ ಗೇಟ್-66ಗೆ 24 ಕೋಟಿ ರೂ.ಟೆಂಡರ್‌ ಕರೆಯಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಇದು ಮೇಲ್ಸೇತುವೆಯಾಗಿದ್ದು, ಬಹು ವರ್ಷಗಳ ಜನರ ಕನಸು ನನಸಾಗಲಿದೆ. ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳಿಗೆ ಒತ್ತು ನೀಡಿದ್ದು, ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಹಲವು ರೈಲ್ವೆ ಸೇತುವೆಗಳಿಗೆ ಅನುದಾನ ಮಂಜೂರು ಮಾಡಿದೆ. ಇದರಿಂದ ಈ ಭಾಗದ ಜನತೆಗೆ ತುಂಬ ಅನುಕೂಲವಾಗಲಿದೆ. ಸಂಚಾರಕ್ಕೆ ಸುಗಮ ವ್ಯವಸ್ಥೆಯಾಗಲಿದೆ.•ಸಂಗಣ್ಣ ಕರಡಿ, ಸಂಸದರು

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next