Advertisement

ರಸ್ತೆ ಅಗಲೀಕರಣಕ್ಕೆ ಮತ್ತೆ ಟೆಂಡರ್‌

04:02 PM Nov 12, 2019 | Suhan S |

ಚಿತ್ರದುರ್ಗ: ನಗರದ ಪ್ರವಾಸಿಮಂದಿರದಿಂದ ಗಾಂಧಿ ವೃತ್ತದ ಮೂಲಕ ಕನಕ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಮತ್ತೂಮ್ಮೆ ಟೆಂಡರ್‌ ಕರೆಯಲು ರ್ನಿರಿಸಲಾಗಿದ್ದು, ಡಿಸೆಂಬರ್‌ ತಿಂಗಳಲ್ಲಿ ಅಂತಿಮವಾಗಬಹುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರಸಭೆ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪ್ರವಾಸಿಮಂದಿರದಿಂದ ಗಾಂಧಿ ವೃತ್ತ, ಅಲ್ಲಿಂದ ಕನಕ ವೃತ್ತ ಅಥವಾ ಮಾಳಪ್ಪನಹಟ್ಟಿವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ ಮೂರು ಸಲ ಟೆಂಡರ್‌ ಕರೆದರೂ ಗುತ್ತಿಗೆದಾರರು ಆಸಕ್ತಿ ತೋರಿಸುತ್ತಿಲ್ಲ ಎಂದರು.

ಈಗ ನಾಲ್ಕನೇ ಬಾರಿ ಟೆಂಡರ್‌ ಕರೆಯುತ್ತಿದ್ದು, ಗುತ್ತಿಗೆದಾರರಿಗೆ ನಾವೇ ಮನವೊಲಿಸಿ ಟೆಂಡರ್‌ ಹಾಕಿಸುತ್ತಿದ್ದೇವೆ. ಈ ಕಾಮಗಾರಿ ಕೈಗೆತ್ತಿಕೊಳ್ಳುವವರು 3 ಕೋಟಿ ರೂ. ಠೇವಣಿ ಇಡಬೇಕು ಎಂಬ ನಿಯಮವಿದೆ. ಜತೆಗೆ ಇಲ್ಲಿ ಬಳಸುವ ಕಾಂಕ್ರೀಟ್‌ ಪ್ರಮಾಣಕ್ಕೆ ಕಡಿಮೆ ಮೊತ್ತ ನಿಗದಿ ಮಾಡಲಾಗಿದೆ ಎಂಬ ಆಕ್ಷೇಪವಿದೆ. ಇದೆಲ್ಲದರ ಜತೆಗೆ ನಗರದ ಮಧ್ಯ ಭಾಗದಲ್ಲಿ ರಸ್ತೆ ಮಾಡುವುದರಿಂದ ಸಾರ್ವಜನಿಕರು ತಕರಾರು ಮಾಡಬಹುದು, ಕೋರ್ಟ್‌ ಮೆಟ್ಟಿಲೇರಬಹುದು ಎಂಬ ಆತಂಕ ಗುತ್ತಿಗೆದಾರರಲ್ಲಿದೆ. ಈ ಕಾರಣಕ್ಕೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಈ ಕಾಮಗಾರಿಗಾಗಿ 18 ಕೋಟಿ ರೂ. ಅನುದಾನಮಂಜೂರಾಗಿ ಬಹಳ ದಿನಗಳಾಗಿವೆ. ಈ   ಹಿನ್ನೆಲೆಯಲ್ಲಿ ನಾಲ್ಕನೇ ಸಲ ಟೆಂಡರ್‌ ಕರೆದು ಡಿಸೆಂಬರ್‌ 15 ರಿಂದ 20 ರೊಳಗಾಗಿ ಅಂತಿಮಗೊಳಿಸಿ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.

16 ಕೋಟಿ ರೂ. ಹೆಚ್ಚುವರಿ ಹಣ ಬೇಕು: ಈಗಾಗಲೇ ಕಾಮಗಾರಿ ಆರಂಭಿಸಿರುವ ಜೆಎಂಐಟಿ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆ ವಿಶಾಲವಾಗುವುದರಿಂದ ದಾವಣಗೆರೆ ರಸ್ತೆಗಳ ಮಾದರಿಯಲ್ಲೇ ಅಭಿವೃದ್ಧಪಡಿಸಲಾಗುತ್ತಿದೆ. ಹಾಗಾಗಿ ಈ ರಸ್ತೆಗೆ ನಿಗದಿಯಾಗಿರುವ 19 ಕೋಟಿ ಜತೆಗೆ ಇನ್ನೂ 9 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಶಾಸಕರ ಗಮನಕ್ಕೆ ತಂದರು.

Advertisement

ಈ ವೇಳೆ ಶಾಸಕರು 14ನೇ ಹಣಕಾಸು ಸೇರಿದಂತೆ ಬೇರೆ ಬೇರೆ ಅನುದಾನಗಳನ್ನು ಹೊಂದಿಸಿಕೊಡುತ್ತೇನೆ. ಜತೆಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹೆಚ್ಚುವರಿ ಅನುದಾನ ತಂದು ಕೊಡುತ್ತೇನೆ. ಕೆಲಸ ಪ್ರಾರಂಭಿಸಿ ಎಂದು ಸೂಚಿಸಿದರು.

ಚಳ್ಳಕೆರೆ ಗೇಟ್‌ನಿಂದ ಪ್ರವಾಸಿಮಂದಿರವರೆಗಿನ ರಸ್ತೆಯನ್ನೂ ಉತ್ತಮವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ರಸ್ತೆಗೆ ಈಗಾಗಲೇ 19 ಕೋಟಿ ರೂ. ಹಣ ಮಂಜೂರಾಗಿದೆ.ಜತೆಗೆ ಇನ್ನೂ 7 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗುತ್ತದೆ. ರಸ್ತೆ ಮಧ್ಯೆ ಡಿವೈಡರ್‌, ವಿದ್ಯುತ್‌ ದೀಪ, ಪುಟ್‌ಪಾತ್‌, ಡ್ರೈನೇಜ್‌ ಹಾಗೂ ಎರಡು ಕಡೆ ಸೇತುವೆ ಕಾಮಗಾರಿಗಳಿವೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ 3 ಕೋಟಿ ರೂ. ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ನೀಡಿರುವ 25 ಕೋಟಿ ರೂ. ವಿಶೇಷ ಅನುದಾನದಲ್ಲಿ ಅನುದಾನ ಒದಗಿಸಿಕೊಡುತ್ತೇನೆ. ತ್ವರಿತವಾಗಿ ಕೆಲಸ ಆರಂಭಿಸಿ ಮುಂದಿನ ಜೂನ್‌ ವೇಳೆಗೆ ಕಾಮಗಾರಿ ಮುಗಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾಸ್ಪತ್ರೆಯಿಂದ ಆರ್‌ಟಿಒ ಕಚೇರಿವರೆಗೆಕಾಂಕ್ರೀಟ್‌ ರಸ್ತೆ ನಿರ್ಮಿಸಲು 5 ಕೋಟಿ ರೂ. ಟೆಂಡರ್‌ ಆಗಿದೆ. ಆರ್‌ಟಿಒ ಕಚೇರಿಯಿಂದ ಮುಸ್ಟೂರುವರೆಗೆ ರಸ್ತೆ ಅಭಿವೃದ್ಧಿಗಾಗಿ ಎಸ್‌ಎಚ್‌ ಡಿಪಿ ಅಡಿಯಲ್ಲಿ 32 ಕೋಟಿ ರೂ. ಮಂಜೂರಾಗಿದೆ.ಚಳ್ಳಕೆರೆ ಗೇಟ್‌ನಿಂದ ಹಳೇ ಹೆದ್ದಾರಿ ಅಭಿವೃದ್ಧಿಗೆ 8 ಕೋಟಿ ರೂ., ಮುರುಘಾ ಮಠದ ವತಿಯಿಂದ ನಿರ್ಮಿಸುತ್ತಿರುವ ಬಸವ ಪುತ್ಥಳಿ ಇರುವ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ 3 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು, ಲೋಕೋಪಯೋಗಿ ಇಲಾಖೆ ಇಇ ಸತೀಶ್‌, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕ ರಾಜಶೇಖರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next