Advertisement
ಅಕ್ಕಿ ಗೊಂದಲ ಮುಂದುವರಿದಿರುವ ನಡು ವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಹಣಕಾಸು ಹಾಗೂ ಆಹಾರ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದಾರೆ. ಸರ್ಕಾರಿ ಏಜೆನ್ಸಿಗಳಾದ ಎನ್.ಸಿ.ಸಿ.ಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರಗಳು ಸಲ್ಲಿಸಿರುವ ದರ ಪಟ್ಟಿ ಕುರಿತು ಚರ್ಚಿಸಿ ಟೆಂಡರ್ ಕರೆಯುವಂತೆ ಸೂಚನೆ ನೀಡಿದ್ದಾರೆ.
Related Articles
ಸಭೆಗೂ ಮುನ್ನ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರ ಜತೆ ಮಾತನಾಡಿ, ಜು.1ರಿಂದ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರಲಿದೆ. ಅಕ್ಕಿಯನ್ನೂ ನೀಡಬೇಕೆಂಬ ಉದ್ದೇಶವಿದ್ದರೂ ಅಕ್ಕಿ ದೊರೆಯುತ್ತಿಲ್ಲ. ದೊರೆತರೂ ಹೆಚ್ಚಿನ ದರ ಕೇಳುತ್ತಾರೆ. 2.29 ಲಕ್ಷ ಮೆಟ್ರಿಕ್ ಟನ್ ಎಲ್ಲಿಯೂ ದೊರೆಯುತ್ತಿಲ್ಲ. ಯಾವ ರಾಜ್ಯದಲ್ಲೂ ಪೂರ್ಣ ಪ್ರಮಾಣದ ಅಕ್ಕಿ ದೊರೆಯುತ್ತಿಲ್ಲವಾದ್ದರಿಂದ ಬೇರೆ ಸರ್ಕಾರಿ ಏಜೆನ್ಸಿಗಳಿಂದ ದರ ಪಟ್ಟಿ ಕರೆಯಲಾಗಿದ್ದು, ಮಾತುಕತೆ ನಡೆದಿದೆ ಎಂದರು.
Advertisement
ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಪಡೆಯಲು ಟೆಂಡರ್ ಕರೆಯಬೇಕು. ಅದಕ್ಕೆ ಸಮಯ ತಗಲುತ್ತದೆ. ಜೋಳ, ರಾಗಿ ವಿತರಣೆ 6 ತಿಂಗಳಿಗಾಗುವಷ್ಟಿದೆ. 2 ಕೆಜಿಯಂತೆ ನೀಡಬಹುದು. ಇನ್ನೂ 3 ಕೆಜಿ ಅಕ್ಕಿ ನೀಡಬೇಕಿದೆ. ಇಡೀ ವರ್ಷ ನೀಡುವಷ್ಟು ರಾಗಿ, ಜೋಳ ಲಭ್ಯವಿಲ್ಲ ಎಂದೂ ತಿಳಿಸಿದರು.
ಸಭೆಯಲ್ಲಿ ಏನಾಯ್ತು ?ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಭೇಟಿ ಬಳಿಕ ನಡೆದ ವಿದ್ಯಮಾನಗಳ ಬಗ್ಗೆ ಈ ಸಭೆಯಲ್ಲಿ ಪರಾಮರ್ಶೆ ನಡೆಯಿತು. ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡುವುದಿಲ್ಲ ಎಂಬುದು ದೃಢಪಟ್ಟಿರುವುದರಿಂದ ಅನ್ಯ ಮಾರ್ಗಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಹುಪಾಲು ಛತ್ತೀಸ್‌ಗಡದಿಂದ ಅಕ್ಕಿ ಖರೀದಿ ಮಾಡುವ ಸಾಧ್ಯತೆ ಇದೆ. ಪಂಜಾಬ್ ಸರ್ಕಾರವೂ ಅಕ್ಕಿ ಪೂರೈಕೆ ಮಾಡದೇ ಇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅನ್ನ ಭಾಗ್ಯ ಯೋಜನೆಗೆ ಅಗತ್ಯವಾದ ಹೆಚ್ಚುವರಿ ಅಕ್ಕಿಗೆ ಛತ್ತೀಸ್‌ಗಡ ರಾಜ್ಯ ಮಾತ್ರ ಈಗ ಆಸರೆಯಾಗಿದೆ. ಆದರೆ ನಿರಂತರವಾಗಿ ಇದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.