ಕೆ.ಆರ್.ಪೇಟೆ: ತಾಲೂಕಿನ ತೆಂಡೇಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಗಮನ ಹರಿಸದ ಕಾರಣ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದದ್ದು, ಗ್ರಾಮಸ್ಥರು ರೋಗ ಭೀತಿಯಲ್ಲಿ ಬದುಕುವಂತಾಗಿದೆ.
ಜೊತೆಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡದೆ ಗ್ರಾಮದಲ್ಲಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ಹಿಂದುಳಿದಿದೆ. ಮೈಸೂರು-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ರುವ ತೆಂಡೇಕೆರೆ ಗ್ರಾಮ ಪಂಚಾಯಿತಿ ಕೇಂದ್ರ. ಸುತ್ತಮುತ್ತಲ ಗ್ರಾಮಗಳಿಗೆ ಕೇಂದ್ರಸ್ಥಾನ. ಗ್ರಾಮದ ಸುತ್ತಮುತ್ತ ಇರುವ ಇತರೆ ಗ್ರಾಮಸ್ಥರು ಕೆ.ಆರ್.ಪೇಟೆ ತಾಲೂಕು ಕೇಂದ್ರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯ, ನೆರೆಯ ಮೈಸೂರಿಗೆ ಪ್ರಯಾಣಿಸಲು ತೆಂಡೇಕೆರೆ ಗ್ರಾಮಕ್ಕೆ ಬಂದು ಅಲ್ಲಿಂದಲೇ ಹೋಗಬೇಕಿದೆ. ಜೊತೆಗೆ ಪ್ರತಿ ಸೋಮವಾರ ಇಲ್ಲಿ ದೊಡ್ಡ ಸಂತೆ ನಡೆಯುತ್ತದೆ.
ಆದರೂ ಗ್ರಾಮದಲ್ಲಿ ನೈರ್ಮಲ್ಯ ಕೊರತೆ, ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ತೆಂಡೆಕೆರೆ ಸಂತೆಯಲ್ಲಿ ಹಣ್ಣು, ಸೊಪ್ಪು, ತರಕಾರಿ, ರಾಗಿ, ಕುರಿ , ಕೋಳಿ, ರಾಸುಗಳೂ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಯುತ್ತದೆ. ಸುತ್ತಮುತ್ತಲ ಗ್ರಾಮಗಳ ಜನತೆಯಲ್ಲಾ ಸಂತೆಯಲ್ಲಿ ಸೇರಿ ವ್ಯಾಪಾರ ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಪ್ರತಿದಿನ ಸಾಕಷ್ಟು ಕಸ ಗ್ರಾಮದಲ್ಲಿ ಸಂಗ್ರಹವಾಗುತ್ತದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮಗೂ ಗ್ರಾಮದಲ್ಲಿ ಬೀಳುವ ಕಸಕ್ಕೂ ಸಂಬಂಧ ಇಲ್ಲ ಎಂದು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆದರೆ ರಸ್ತೆ ಬದಿ ವ್ಯಾಪಾರಿಗಳು, ಸಂತೆಯಲ್ಲಿ ವ್ಯಾಪಾರ ಮಾಡುವ ವರ್ತಕರಿಂದ ಪಟ್ಟು ಹಿಡಿದು ಸುಂಕ ವಸೂಲಿ ಮಾಡುತ್ತಾರೆ. ಜೊತೆಗೆ ರೈತರು ಬೆಳೆದ ಬೆಳೆಗಳಿಗೂ ಒಂದು ಮೂಟೆಗೆ ತಲಾ 5 ರೂ. ಸುಂಕ ವಸೂಲಿ ಮಾಡುತ್ತಾರೆ. ಆದರೆ, ಸಂತೆಯೊಳಗೆ ಮೂಲ ಸೌಲಭ್ಯಗಳು ಮಾತ್ರ ಕಲ್ಪಿಸಿಲ್ಲ ಎಂಬುದು ರೈತರು, ಗ್ರಾಹಕರು, ವರ್ತಕರ ಆರೋಪ.
ರೋಗ ಹಬ್ಬಿಸುವ ಸಂತೆಮಾಳ: ತೆಂಡೇಕೆರೆ ಸಂತೆ ಯಲ್ಲಿ ಎಲ್ಲಿ ನೋಡಿದರೂ, ಕಸ, ಸೊಳ್ಳೆ, ನೊಣ, ದುರ್ವಾಸನೆಯದ್ದೇ ಕಾರುಬಾರು. ಪ್ರತಿ ಸೋಮವಾರ ನಡೆಯುವ ಸಂತೆಯಲ್ಲಿ ಗ್ರಾಹಕರು ಹಣ್ಣು, ತರಕಾರಿ ಮತ್ತಿತರೆ ವಸ್ತುಗಳು ಖರೀದಿಸಲು ಬರುತ್ತಾರೆ. ಜಾನುವಾರು ಮಾರಾಟ ಮಾಡುತ್ತಾರೆ. ಆದರೆ ಇವರಿಂದ ಸುಂಕ ವಸೂಲಿ ಮಾಡುವ ಗ್ರಾಪಂ ಸಂತೆ ಮಾಳವನ್ನು ಮಾತ್ರ ಸ್ವತ್ಛ ಮಾಡ ಬೇಕೆಂದು ಚಿಂತನೆ ನಡೆಸದಿರುವ ವಿಪರ್ಯಾಸ
ವರ್ತಕರು ಹಾಗೂ ಸಾರ್ವಜನಿಕರು ಸಂತೆಮಾಳದಲ್ಲಿ ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಿದೆ. ಜೊತೆಗೆ ವರ್ತಕರು ಕೊಳೆತು ದುರ್ವಾಸನೆ ಬೀರುತ್ತಿರುವ ಕಸದ ನಡುವೆಯೇ ಹಣ್ಣು ಮತ್ತು ತರಕಾರಿ ಮಾರಾಟ ಮಾಡಬೇಕಿದೆ. ಜನರಿಗೆ ಬಹುಬೇಗನೆ ರೋಗ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ಇದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಮಗೇನೂ ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತೆಂಡೆಕೆರೆ ಗ್ರಾಮಕ್ಕೆ ಸ್ವಚ್ಛತೆ ಎಂದರೆ ಏನೆಂಬುದೇ ಗೊತ್ತಿಲ್ಲ, ಗ್ರಾಮ ಮತ್ತು ಸಂತೇಮಾಳದಲ್ಲಿ 6 ತಿಂಗಳಿಂದ ಕಸದ ರಾಶಿ ಬಿದ್ದಿದೆ. ಅದನ್ನು ಕಂಡರೂ ಕಾಣದಂತೆ ಅಧಿಕಾರಿ ಗಳು ಕಣ್ಣು ಮುಚಿ c ಓಡಾಡುತ್ತಿದ್ದಾರೆ. ದೂರದ ಊರುಗಳಿರಲಿ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ಕೊಳಚೆ ಬಿದ್ದಿದೆ. ಅದನ್ನೂ ಸ್ವ. ಚ್ಛ ಮಾಡಿಸಿಲ್ಲವೆಂದರೆ, ಇನ್ನು ಅವರು ಗ್ರಾಮ, ಸಂತೆಮಾಳದಲ್ಲಿ ಸ್ವಚ್ಛ ಮಾಡುವರೇ? ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ
. –ಕುಮಾರ್, ತೆಂಡೇಕೆರೆ ನಿವಾಸಿ
-ಎಚ್.ಬಿ.ಮಂಜುನಾಥ್