ಉಡುಪಿ: ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ಗುರುಗಳು ಕಾಲಟಿಯಿಂದ ಹಿಂದಿರುಗುವಾಗ ಉಡುಪಿಗೆ ಬಂದು ಶಾರದಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈಗ ನಾವು
ಶೃಂಗೇರಿಯಿಂದ ಕಾಲಟಿಗೆ ಹೋಗುವ ಮಾರ್ಗವಾಗಿ ಉಡುಪಿಗೆ ಆಗಮಿಸಿದ್ದೇವೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಕಿರಿಯ ಸ್ವಾಮೀಜಿಯವರಾದ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿಗಳು ತಿಳಿಸಿದರು.
ಕುಂಜಿಬೆಟ್ಟು ಶ್ರೀಶಾರದಾ ದೇವಸ್ಥಾನದಲ್ಲಿ ಶಾರದಾ ದೇವಿಗೆ ಕುಂಭಾಭಿಷೇಕ ನೆರವೇರಿಸಲು ಗುರುವಾರ ಆಗಮಿಸಿದ ಅವರು ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಇಲ್ಲಿನ ಕುಂಭಾಭಿಷೇಕ ನಡೆಯುತ್ತಿರುವುದು ಗುರುಭಕ್ತಿಯ ದ್ಯೋತಕವಾಗಿದೆ. ಐದಾರು ವರ್ಷಗಳಿಂದ ಕುಂಭಾಭಿಷೇಕ ನಡೆಸಬೇಕೆಂದು ಒತ್ತಾಯಿಸುತ್ತಿದ್ದರೂ ಸಮಯ ಕೂಡಿಬರಲಿಲ್ಲ. ಈಗ ಆ ಸಮಯ ಕೂಡಿಬಂದಿದೆ. ಗುರುಗಳೇ ಬಂದು ಕುಂಭಾಭಿಷೇಕ ನಡೆಸಬೇಕೆಂಬ ಮನವಿ ಇರುವುದು ಸ್ಥಾನಿಕ ಬ್ರಾಹ್ಮಣ ಸಮಾಜದ ಗುರುಭಕ್ತಿಯ ಪ್ರತೀಕವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಸ್ಥಾನಿಕ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ವೈ.ಭುವನೇಂದ್ರ ರಾವ್ ಸ್ವಾಗತಿಸಿ ನಿರ್ದೇಶಕ ವೇಣುಗೋಪಾಲ ರಾವ್ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ಚಂದ್ರಮೌಳೀಶ್ವರ ದೇವರಿಗೆ ಸ್ವಾಮೀಜಿ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಕಡಿಯಾಳಿಯಿಂದ ಶಾರದಾ ಮಂಟಪದವರೆಗೆ ಆಕರ್ಷಕ ಭವ್ಯ ಮೆರವಣಿಗೆಯಲ್ಲಿ ಸ್ವಾಮೀಜಿಯವರನ್ನು ಸ್ವಾಗತಿಸಲಾ ಯಿತು. ಶುಕ್ರವಾರ ಬೆಳಗ್ಗೆ ಶಾರದಾ ದೇವಿಗೆ ಕುಂಭಾಭಿಷೇಕವನ್ನು ಸ್ವಾಮೀಜಿ ನಡೆಸಿಕೊಡಲಿದ್ದಾರೆ.