Advertisement
ನಮ್ಮ ಇಡೀ ಜೀವನದ ಮುಕ್ಕಾಲು ಭಾಗದಷ್ಟು ನೆನಪುಗಳನ್ನು ಹಾಗೂ ಸಂತೋಷಗಳನ್ನು ಶಾಲೆಯಿಂದ ಪಡೆದಿರುತ್ತೇವೆ.
Related Articles
Advertisement
ಆ ಸಂದರ್ಭ ಅಲ್ಲಿನ ಪ್ರಕೃತಿ ದೃಶ್ಯವೇ ಮನೋಹರ. ಇದನ್ನೆಲ್ಲ ಸವಿಯುತ್ತಾ ಹೊತ್ತು ಕಳೆದದ್ದೇ ಗೊತ್ತಾಗದೆ ತಡವಾಗಿ ಹೋದದ್ದೂ ಇದೆ.ನಮ್ಮಲ್ಲಿ ಒಮ್ಮೆ ಮಳೆ ಅಂತ ಶುರುವಾದರೆ ನಿರಂತರವಾಗಿ ಸುರಿಯುತ್ತಲೇ ಇರುತ್ತದೆ. ಹೀಗಾದಾಗ ನಾವು ವಿದ್ಯಾರ್ಥಿಗಳಲ್ಲಿ ಒಂದು ಸಾಮಾನ್ಯ, ಏಕಚಿತ್ತ ಯೋಚನೆಯೊಂದು ಹೊಳೆಯುವುದು ಉಂಟು! ಅದು, ನಾಳೆ ಮಳೆಗೆ ರಜೆ ಇದೆಯೋ ಇಲ್ಲವೋ? ಇರಬಹುದಾ? ಆಗ ನಮ್ಮೆಲ್ಲರ ಗಮನ ಜಿಲ್ಲಾಧಿಕಾರಿಯವರ ಮೇಲೆಯೇ….! ಇನ್ನು ಪ್ರೌಢ ಶಾಲೆಯ ಹಂತ ತಲುಪಿದಾಗ ನಮ್ಮ ಕೀಟಲೆಗಳು ಮತ್ತಷ್ಟು ಜೋರಾಗಿತ್ತು. ಎಷ್ಟೋ ಬಾರಿ ಶಾಲೆಗೆ ತಲುಪುವಾಗ ಜೋರಾಗಿ ಮಳೆಯಾದರೆ ಕೊಡೆ ಬಿಡಿಸದೆ ಅರೆ ಬರೆ ಒದ್ದೆಯಾಗುತ್ತಾ ಹೋಗುವುದು ಮತ್ತೂ ಕೆಲವರು ಏನೂ ಒದ್ದೆಯಾಗಿಲ್ಲವಾದರೂ, ಶಾಲೆಗೆ ಬಂದ ಮೇಲೆ ಮಳೆಗೆ ಹೋಗಿ ನಿಂತು, ಒದ್ದೆಯಾಗಿದ್ದೇನೆ ಎಂದು ತೋರಿಸುವುದು. ಆ ಮೂಲಕವಾದರೂ ರಜೆ ಸಿಗಬಹುದು ಎಂಬುದು ನಮ್ಮ ಅಂದಾಜು. ಇವಿಷ್ಟೇ ಆದರೆ ಮುಖ್ಯೋಪಾಧ್ಯಾಯರಿಗೆ ಮಳೆಯ ತೀವ್ರತೆ ಮನವರಿಕೆಯಾಗುವುದಿಲ್ಲ ಎಂದು ಶಾಲೆಯ ಅಂಗಳದ ನೀರು ಹೊರ ಹೋಗಲು ಇರುವ ಪೈಪನ್ನು ಪೇಪರ್ ಹಾಗೂ ಪ್ಲಾಸ್ಟಿಕ್ ಉಪಯೋಗಿಸಿ ಸಂಪೂರ್ಣವಾಗಿ ಬ್ಲಾಕ್ ಮಾಡಿ ಅಂಗಳದಲ್ಲಿ ಸರಿಯಾಗಿ ನೀರು ನಿಲ್ಲುವಂತೆ ಮಾಡಿ, ನಮ್ಮ ಶಾಲೆ ಜಲಾವೃತಗೊಳ್ಳುತ್ತದೆ ಎಂದು ಸುದ್ದಿ ಹಬ್ಬಿಸಿದರೂ ಜಗ್ಗದ ಮುಖ್ಯೋಪಾಧ್ಯಾಯರು ಪೈಪ್ ಬ್ಲಾಕ್ ಆಗಿರುವುದನ್ನು ಕೂಡಲೇ ಸರಿಮಾಡಿಸುತ್ತಿದ್ದರು. ಇನ್ನು ಮಳೆ ನಮಗೆ ವೈರಿಯಾಗಿ ಗೋಚರವಾಗುತ್ತಿದ್ದದ್ದು ಆಟದ ಅವಧಿಯಲ್ಲಿ! ಜೋರಾಗಿ ಮಳೆ ಬರುತ್ತಿದ್ದರೆ, ಆಟದ ಹಿಂದಿನ ಅವಧಿಯಲ್ಲಿ ಪಾಠ ಕೇಳದೆ ಆ ಅವಧಿ ಕೇವಲ ಪ್ರಾರ್ಥನೆಗೆ ಮೀಸಲು. (ಆಟದ ಅವಧಿಯಲ್ಲಿ ಮಳೆ ಬರಬಾರದು ಎಂದು). ಶಾಲೆಗೆ ಹೋಗುವಾಗ ಕೇವಲ ಪ್ರಕೃತಿಯನ್ನು ಸವಿಯುತ್ತಾ ಹೋಗುತ್ತಿದ್ದ ನಾವು, ಹಿಂದಿರುಗುವಾಗ ಆ ಗದ್ದೆಯ ನೀರಿನಲ್ಲಿ ಆಟವಾಡುತ್ತಾ, ತೋಡಿಗೆ ದಾಟಲು ಸೇತುವೆ ಇದ್ದರೂ ತೋಡಿಗೆ ಇಳಿದು ಮೀನುಗಳು ಕಾಲ ಮೇಲೆ ಹೋಗುವುದನ್ನು ನೋಡಿ ಖುಷಿಪಟ್ಟದ್ದೂ ಇದೆ. ಅಷ್ಟೇ ಅಲ್ಲದೆ ಅಲ್ಲಲ್ಲಿ ಉಂಟಾಗುವ ತೊರೆಗಳನ್ನು ನೋಡುವುದೇ ಚೆಂದ. ಆದರೆ ವಿಪರ್ಯಾಸವೆಂದರೆ ಈಗಿನ ಪೇಟೆಯ ಮಕ್ಕಳಿಗೆ ಇಂತಹ ಅನುಭವಗಳು ಇಲ್ಲವೇ ಇಲ್ಲ. ಅದು ಯಾವುದೇ ಋತುವಾಗಿರಲಿ…ಅದೇ ಬಸ್, ಅದೇ ರೋಡು, ಅದೇ ಶಾಲೆ. ಶಾಲೆಗೆ ಹೊಕ್ಕರೆ ಮತ್ತದೇ ಶಿಸ್ತು. ಸಮಗ್ರವಾಗಿ ಹೇಳಬೇಕೆಂದರೆ ಈ ಮಕ್ಕಳು ಇಂತಹ ಮೋಜುಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ ಇದನ್ನು ಓದಿದವರು ತಮ್ಮ ಮಳೆಗಾಲದ ಶಾಲಾ ಜೀವನವನ್ನು ಸುಮ್ಮನೆ ಒಮ್ಮೆ ಮೆಲುಕು ಹಾಕಿಕೊಳ್ಳಿ. ಏಕೆಂದರೆ ಅದುವೇ ನಮ್ಮ ಜೀವನದ ಸುವರ್ಣ ಕ್ಷಣಗಳು.