Advertisement

ಹತ್ತು ಗಿಗಾ ವ್ಯಾಟ್‌ ಹಸುರು ಇಂಧನ ಉತ್ಪಾದನೆ: ಸುನಿಲ್‌ ಕುಮಾರ್‌

09:01 PM May 19, 2022 | Team Udayavani |

ಬೆಂಗಳೂರು: ಗ್ರೀನ್‌ ಎನರ್ಜಿ ಪಥದಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ ಮುಂದಿನ ಐದು ವರ್ಷದ ಅವಧಿಯಲ್ಲಿ ಹತ್ತು ಗಿಗಾ ವ್ಯಾಟ್‌ ಹಸುರು ಇಂಧನ ಉತ್ಪಾದನೆಯ ಗುರಿ ಹಾಕಿಕೊಂಡಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಹೈಬ್ರಿಡ್‌ ವಿದ್ಯುತ್‌ ಪಾರ್ಕ್‌ ನಿರ್ಮಾಣ ನಮ್ಮ ಆದ್ಯತೆಯಾಗಿದೆ. ಗ್ರೀನ್‌ ಎನರ್ಜಿ ಕ್ಷೇತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸ್ಟೋರೇಜ್‌ ಕೇಂದ್ರ ಸ್ಥಾಪನೆ :

ಈ ಗುರಿ ಸಾಧನೆಯ ಭಾಗವಾಗಿ ಹತ್ತು ಸಾವಿರ ಮೆಗಾ ವ್ಯಾಟ್‌ ಸಾಮರ್ಥ್ಯದ ಹೈಬ್ರಿಡ್‌ ಪಾರ್ಕ್‌ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಸೌರ ಹಾಗೂ ಪವನ ವಿದ್ಯುತ್‌ ಉತ್ಪಾದನೆಯ ಜತೆಗೆ ಸ್ಟೋರೇಜ್‌ ಸೌಲಭ್ಯವನ್ನೂ ಈ ಪಾರ್ಕ್‌ ಹೊಂದಿರುತ್ತದೆ. ಪಾವಗಡ ಸೋಲಾರ್‌ ಪಾರ್ಕ್‌ನಲ್ಲಿ ಸದ್ಯಕ್ಕೆ ಪ್ರಾಯೋಗಿಕವಾಗಿ ಈಗ 50 ಮೆಗಾ ವ್ಯಾಟ್‌ ಸ್ಟೋರೇಜ್‌ ಕೇಂದ್ರ ಪ್ರಾರಂಭಿಸುತ್ತೇವೆ ಎಂದು ಹೇಳಿದರು. ಭವಿಷ್ಯದಲ್ಲಿ ಸೋಲಾರ್‌ ಪಾರ್ಕ್‌ ಮಾಡಲು ಮುಂದೆ ಬರುವ ಖಾಸಗಿಯವರಿಗೆ ಸ್ಟೋರೇಜ್‌ ವ್ಯವಸ್ಥೆ ಕಡ್ಡಾಯಗೊಳಿಸುತ್ತೇವೆ. ತುಮಕೂರು, ದಾವಣಗೆರೆ, ಚಿತ್ರದುರ್ಗ, ಗದಗ, ಬಾಗಲಕೋಟೆ, ಹಾವೇರಿ, ವಿಜಯಪುರದಲ್ಲಿ ಹೈಬ್ರಿಡ್‌ ಪಾರ್ಕ್‌ ಸ್ಥಾಪನೆ ಮಾಡಲಾಗುವುದು ಎಂದರು.

ಕಲ್ಲಿದ್ದಲು ಸಮಸ್ಯೆಯೇ ಇಲ್ಲ :

Advertisement

ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದೆ. ಮಾರ್ಚ್‌ ತಿಂಗಳಲ್ಲಿ ಅತೀ ಹೆಚ್ಚು 14,800 ಮೆಗಾ ವ್ಯಾಟ್‌ ವಿದ್ಯುತ್‌ ಬೇಡಿಕೆ ಬಂದಿತ್ತು.ಅದನ್ನು ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಆರು ವರ್ಷದ ಬಳಿಕ ಎಲ್ಲ ಥರ್ಮಲ್‌ ಯುನಿಟ್‌ಗಳು ಕೆಲಸ ಮಾಡಿವೆ. ಕಲ್ಲಿದ್ದಲಿನ ಸಮಸ್ಯೆ ಆಗದಂತೆ ಕೇಂದ್ರ ಸರಕಾರದ ಜತೆ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

1.80 ಲಕ್ಷ ಟ್ರಾನ್ಸ್‌ಫಾರ್ಮರ್‌ ನಿರ್ವಹಣೆ :

ಟ್ರಾನ್ಸ್‌ ಫಾರ್ಮರ್‌ ನಿರ್ವಹಣ ಅಭಿಯಾನದಲ್ಲಿ ಈವರೆಗೆ 1,80,000 ಟ್ರಾನ್ಸ್‌ಫಾರ್ಮರ್ ಗಳನ್ನು ನಿರ್ವಹಣೆ ಮಾಡಲಾಗಿದೆ. ಅಭಿಯಾನ ಮೇ 20ಕ್ಕೆ ಮುಕ್ತಾಯಗೊಳ್ಳುತ್ತದೆಯಾದರೂ ನಿರ್ವಹಣೆ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಹೇಳಿದರು.

ಶಾಲಾ ಪಠ್ಯಪುಸ್ತಕದಿಂದ ನಾರಾಯಣ ಗುರು, ಭಗತ್‌ ಸಿಂಗ್‌ ಅವರ ಪಠ್ಯ ತೆಗೆದು ಹಾಕಿಲ್ಲ. ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪಠ್ಯದಲ್ಲಿ ಕೇಶವ ಬಲಿರಾಮ ಹೆಡ್ಗೆವಾರ್‌ ಅವರ ಭಾಷಣ ಸೇರಿಸಿದರೆ ತಪ್ಪೇನು? ಅಷ್ಟಕ್ಕೂ ಕಾಂಗ್ರೆಸ್‌ಗೆ ಹೆಡೆYವಾರ್‌ ಕಂಡರೆ ಅಷ್ಟೇಕೆ ಭಯ? ಚಕ್ರವರ್ತಿ ಸೂಲಿಬೆಲೆ ಅವರ ತಾಯಿ ಭಾರತಿಗೆ ವಂದಿಸುವೆ ಎನ್ನುವ ಪಾಠವನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಇದನ್ನು ವಿರೋಧಿಸುವ ಕಾಂಗ್ರೆಸಿಗರು ಯಾರನ್ನು ವಂದಿಸುತ್ತಾರೆ?– ವಿ. ಸುನಿಲ್‌ ಕುಮಾರ್‌, ಇಂಧನ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next