Advertisement

“ಋಣಮುಕ್ತ ಕಾಯ್ದೆ’ಗೆ ಹತ್ತು ದಿನದಲ್ಲಿ ಅಂಕಿತ: ಸಿಎಂ

06:00 AM Oct 06, 2018 | |

ಬೆಂಗಳೂರು: ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲದ ಹೊರೆಯಿಂದ ರೈತರಿಗೆ ಮುಕ್ತಿ ಕೊಡಿಸಲು ರೂಪಿಸಿರುವ 
“ಋಣಮುಕ್ತ ಕಾಯ್ದೆ’ಗೆ ಹತ್ತು ದಿನಗಳಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಈಗಾಗಲೇ ಋಣಮುಕ್ತ ಕಾಯ್ದೆ ಸಂಬಂಧ ಕೇಂದ್ರ ಗೃಹ ಸಚಿವಾಲಯ, ರಾಜ್ಯದ ಆರ್ಥಿಕ ಇಲಾಖೆಯಿಂದ ಎರಡು ಸ್ಪಷ್ಟನೆ
ಕೇಳಿತ್ತು. ರಾಜ್ಯ ಸಚಿವ ಸಂಪುಟದಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜನಾಥ್‌ಸಿಂಗ್‌ ಅವರ ಗಮನಕ್ಕೂ ಅದನ್ನು ತರಲಾಗಿದೆ.

ಈಗಾಗಲೇ ನಾನು ಒಮ್ಮೆ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಋಣಮುಕ್ತ ಕಾಯ್ದೆಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದೇನೆ.
ದೇವೇಗೌಡರು ಸಹ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಆ ಕುರಿತು ಮನವಿ ಮಾಡಲಿದ್ದಾರೆ ಎಂದರು.

ರಾಜ್ಯದ ರೈತರು ನೆಮ್ಮದಿಯಿಂದ ಇರಲು ರಾಜ್ಯ ಸರ್ಕಾರದಿಂದ ಸಾಧ್ಯವಾದ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ,
ಖಾಸಗಿಯವರ ಬಳಿ ಸಾಲ ಪಡೆದು ಚಿತ್ರಹಿಂಸೆ ಅನುಭವಿಸುತ್ತಿದ್ದೇವೆ ಎಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

Advertisement

ಸಾಲ ಮನ್ನಾ ಯೋಜನೆಗೆ ರೈತರಿಂದ ಮಾಹಿತಿ ಪಡೆಯಲು ಗಡುವು ಅಥವಾ ಕಾಲನಿಗದಿ ಮಾಡುವ ಪ್ರಶ್ನೆ ಇಲ್ಲ. ಇದಕ್ಕಾಗಿ ಅರ್ಜಿ ಕೊಡುತ್ತಿದ್ದೇವೆ. ರೈತರು ಆತಂಕ ಪಡಬೇಕಿಲ್ಲ. ಸಮಾಧಾನವಾಗಿ ಅರ್ಜಿ ಫಾರಂ ತೆಗೆದುಕೊಂಡು ಕಾಲಹರಣ ಮಾಡದೆ ಅರ್ಜಿ ಸಲ್ಲಿಸಿ. ಅಪಪ್ರಚಾರ ಮಾಡುವವರಿಗೆ ಕಿವಿ ಕೊಡಬೇಡಿ ಎಂದು ಹೇಳಿದರು.

ರಾಜ್ಯದ ಎಲ್ಲ ರೈತರಿಗೆ ಸಾಲ ಮನ್ನಾ ಅನ್ವಯವಾಗುತ್ತದೆ. ಯಾರಿಗೂ ಆ ಬಗ್ಗೆ ಆತಂಕ ಬೇಡ. ರಾಜ್ಯ ಸರ್ಕಾರ ರೈತರ ಪರ ಇದೆ. ನಮ್ಮ ಕಾರ್ಯಕ್ರಮ, ಯೋಜನೆಗಳಿಂದ ಅನುಕೂಲ ಪಡೆದುಕೊಳ್ಳಿ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ಮಾಡಬೇಕು ಎಂಬ ಅಭಿಪ್ರಾಯ ಇದೆ. ಕಾಂಗ್ರೆಸ್‌ನಿಂದ ಆ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಶನಿವಾರ ಮಧ್ಯಾಹ್ನದವರೆಗೂ ದೆಹಲಿಯಲ್ಲೇ ಇರಲಿದ್ದೇನೆ. ಸಾಧ್ಯವಾದರೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ
ಅವರನ್ನು ಭೇಟಿ ಮಾಡುತ್ತೇನೆ.

– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next