ರಾಮನಗರ: ಕೋವಿಡ್ ಸೋಂಕು ಹೆಚ್ಚಳದಿಂದ ಸರ್ಕಾರ ವಿಧಿಸಿದ್ದ ಲಾಕ್‌ಡೌನ್ ನಿಂದಾಗಿ ಶಾಲೆಗಳು ಮುಚ್ಚಿದ್ದು, ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ಲಭ್ಯವಾಗುತ್ತಿಲ್ಲ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯ್ತಿ ಮಾಡಿತ್ತು. ಆದರೆ ಜೂನ್‌ನಲ್ಲಿ ಸರ್ಕಾರದ ಆದೇಶವಾಗಿದ್ದು, ಬಿಸಿಯೂಟಕ್ಕೆ ಬೇಕಾದ ಆಹಾರ ಪದಾರ್ಥಗಳ ದಾಸ್ತಾನನ್ನು ಶಾಲೆಗಳು ಪಡೆದುಕೊಂಡಿಲ್ಲ. ಲಾಕ್‌ಡೌನ್ ಕಾರಣದಿಂದಸರ್ಕಾರವೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಿದ್ದು, ಸರ್ಕಾರಿ ಶಾಲೆಗಳ ಮೂಲಕವೂ ಮತ್ತೆ ಅದೇ ಕುಟುಂಬಗಳಿಗೆ ಆಹಾರ ಪದಾರ್ಥಗಳು ವಿತರಣೆಯಾಗುತ್ತವೆ ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ತತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಹಾರ ಪದಾರ್ಥಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಗಳು ಆರಂಭವಾದ ತಕ್ಷಣದಲ್ಲೇ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಆರಂಭಿಸುವಂತೆ ಕರ್ನಾಟಕ ಸರ್ಕಾರದ ವಿತ್ತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ಬೇಸಿಗೆ ರಜೆಯ 57 ದಿನಗಳ ಪಡಿತರ ಅಕ್ಕಿ ಮತ್ತು ಬೇಳೆಯನ್ನು (ಏಪ್ರಿಲ್ ಮತ್ತು ಮೇ ತಿಂಗಳು) ಮಕ್ಕಳಿಗೆ ವಿತರಿಸಲಾಗಿದೆ. ಕೋವಿಡ್ ರಜೆಯ (ಜೂನ್ ತಿಂಗಳಿಂದ ನಂತರ) ಪಡಿತರವನ್ನು ವಿತರಿಸಬಾರದು ಎಂದು ಸರ್ಕಾರ ಆದೇಶಿಸಿದ್ದರಿಂದ ಅಕ್ಕಿ ಮತ್ತು ಬೇಳೆಯನ್ನು ಶಾಲೆಗಳು ಆಹಾರ ಇಲಾಖೆಯ ಗೋದಾಮುಗಳಿಂದ ಪಡೆದುಕೊಂಡಿಯೇ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 76,752 ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ದೂರೆಯಬೇಕಿದೆ.
ಹಾಲಿನ ಪುಡಿ ಖರೀದಿ ಸ್ಥಗೀತ: ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಜೊತೆಗೆ ಕ್ಷೀರಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಹಾಲು ಒಕ್ಕೂಟಗಳಿಂದ ಹಾಲಿನ ಪುಡಿ ಖರೀದಿಯೂ ನಿಂತಿದೆ. ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಹಾಲಿನ ಪುಡಿ ದಾಸ್ತಾನು ಇದೆ. ಇದನ್ನು ಸಂರಕ್ಷಿಸಿ ಇಡಲಾಗಿದೆ. ಕ್ಷೀರಭಾಗ್ಯ ಯೋಜನೆಗೂ ತಡೆಯಾಗಿರುವುದರಿಂದ ಹಾಲಿನ ಒಕ್ಕೂಟಗಳಲ್ಲಿ ಟನ್‌ಗಟ್ಟಲೆ ಹಾಲಿನ ಪುಡಿ ಶೇಖರಣೆಯಾ ವಾಲಿ ಗಿದೆ ಎಂದು ಬಮೂಲ್‌ನ ಸದಸ್ಯರು ತಿಳಿಸಿದ್ದಾರೆ.
2020-21ನೇ ಸಾಲಿನ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆ ಮತ್ತು ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಆಹಾರ ಪದಾರ್ಥಗಳ ವಿತರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸರ್ಕಾರದ ಆದೇಶವಾಗಿರುವುದರಿಂದ ಅಕ್ಕಿ, ಬೇಳೆ ಮುಂತಾದವುಗಳನ್ನು ಆಹಾರ ಇಲಾಖೆಯ ಗೋದಾಮುಗಳಿಂದಲೇ ಶಾಲೆಗಳು ಪಡೆದುಕೊಂಡಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಆಹಾರ ಪದಾರ್ಥಗಳ ದಾಸ್ತಾನು ಇಲ್ಲ.
–ನಟರಾಜ್, ಶಿಕ್ಷಣ ಅಧಿಕಾರಿ, ಅಕ್ಷರ ದಾಸೋಹ