Advertisement
ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ನಿಯೋಜನೆ ಪೂರ್ಣಗೊಂಡು, ವರ್ಗಾವಣೆ ಪ್ರಕ್ರಿಯೆ ಆರಂಭವಾಗು ವಷ್ಟರಲ್ಲಿ ಸಾಫ್ಟ್ವೇರ್ ತಾಂತ್ರಿಕ ಸಮಸ್ಯೆ ಉದ್ಭವಿಸಿದೆ. ಈ ಮಧ್ಯೆ ರಾಜಕೀಯ ನಾಯಕರ ಒತ್ತಡವೂ ಹೆಚ್ಚಾಗಿತ್ತು. ಇದರಿಂದ ಎದುರಾಗಿದ್ದ ಸಮಸ್ಯೆ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತು ಕೊಂಡಿರುವ ಸರಕಾರ ಹಾಗೂ ಇಲಾಖೆ, ವರ್ಗಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ. ಅಧಿಕಾರಿಗಳು ಸಾಫ್ಟ್ವೇರ್‌ನ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ದಿಢೀರ್ ತಡೆ ನೀಡು ವಂತೆ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣ ನೀತಿ ಸಂಹಿತೆ ಸಹಿತ ವಿವಿಧ ಕಾರಣಕ್ಕಾಗಿ 2017ರಲ್ಲಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ವರ್ಗಾವಣೆ ಸಂಬಂಧ ಕಾಯ್ದೆಗೆ ಹೊಸ ತಿದ್ದುಪಡಿ ಕೂಡ ತರಲಾಗಿದೆ. ಒಂದೇ ಜಾಗದಲ್ಲಿ 10 ವರ್ಷದಿಂದಿರುವ ಶಿಕ್ಷಕರನ್ನು ವರ್ಗಾವಣೆ ಮಾಡುವ ನಿರ್ಧಾರ ಹಿಂದಿನ ಕಾಂಗ್ರೆಸ್ ಸರಕಾರ ಕೈಗೊಂಡಿತ್ತು. ಶೇಕಡಾವಾರು ವರ್ಗಾ ವಣೆ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಹಾಗಿದ್ದರೂ ವರ್ಗಾವಣೆ ಪ್ರಕ್ರಿಯೆ ಮಾತ್ರ ನಡೆಸಲು ಸಾಧ್ಯವಾಗಿಲ್ಲ. ವರ್ಗಾವಣೆಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿಂದ ಸುಮಾರು 79 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಶಿಕ್ಷಕರ ನಿಯೋಜನೆ, ಕಡ್ಡಾಯ ವರ್ಗಾವಣೆ, ಪರಸ್ಪರ ಹಾಗೂ ಕೋರಿಕೆ ವರ್ಗಾವಣೆಗಾಗಿ ಮೂರ್‍ನಾಲ್ಕು ಬಾರಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದರೂ ವರ್ಗಾವಣೆ ಮಾತ್ರ ನಡೆದಿಲ್ಲ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ ಕೂಡ ತಿಂಗಳ ಹಿಂದೆ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡುವಂತೆ ಆದೇಶ ಹೊರಡಿಸಿದ್ದರು.
Related Articles
ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯುವಂತೆ ಸರಕಾರವೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಕಡ್ಡಾಯ ವರ್ಗಾವಣೆ ವಿರೋಧಿಸಿ ಹಲವು ಶಿಕ್ಷಕರು ಹೈಕೋರ್ಟ್ ಮೆಟ್ಟಿಲೇರಿದ್ದರೂ ಯಶಸ್ಸು ಕಾಣಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸರಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಪ್ರಕ್ರಿಯೆ ನಡೆಸುವ ಹುನ್ನಾರ ಮಾಡಿರಬಹುದು ಎಂದು ಕೆಲವು ಶಿಕ್ಷಕರು ಆರೋಪಿಸಿದ್ದಾರೆ. ರಾಜಕೀಯ ಒತ್ತಡ ಇಲ್ಲದೇ ವರ್ಗಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲು ಸಾಧ್ಯವಿಲ್ಲ ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement