Advertisement

Western Ghats ಭೂಪರಿವರ್ತನೆ ಪ್ರಸ್ತಾವನೆಗೆ ತಾತ್ಕಾಲಿಕ ತಡೆ?

08:31 PM Aug 16, 2024 | Team Udayavani |

ಬೆಂಗಳೂರು: ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವ ವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಹೀಗಾಗಿ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ಕೃಷಿಯೇತರ ಚಟುವಟಿಕೆಗೆ ತಾತ್ಕಾಲಿಕವಾಗಿ ತಡೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂ-ಉಪಯೋಗದ ರೀತಿ ಮತ್ತು ಭೂ ಪರಿವರ್ತನೆ ಸಹಿತ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ಸಮನ್ವಯದಲ್ಲಿ ಭೂ ಉಪಯೋಗ ಸ್ವರೂಪದ ಬಗ್ಗೆ ಹೊಸ ವಲಯ ನಿಯಂತ್ರಣ ಮತ್ತು ಮಾಸ್ಟರ್‌ ಯೋಜನೆ ರೂಪಿಸುವವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳ ಪಡುವ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಸೂಕ್ತವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಕೂಡಲೇ ವಿವಿಧ ಇಲಾಖೆ ಸಮನ್ವಯದೊಂದಿಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಮಹತ್ವದ ಯೋಜನೆಗೆ ಮಾತ್ರ ಸಮ್ಮತಿ
ಅತೀ ಜರೂರಾದ, ಸಾರ್ವಜನಿಕ ಮಹತ್ವದ ಪ್ರಕರಣಗಳಲ್ಲಿ ಮಾತ್ರ ಯೋಜನೆಗೆ ಪರಿಸರ ಸಮ್ಮತಿ ಪತ್ರವನ್ನು ನೀಡಬೇಕು. ಅಂದರೆ ಇದನ್ನು ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯ ಉನ್ನತಾಧಿಕಾರ ಸಮಿತಿ ಸಭೆಯ ಅನುಮೋದನೆ ಪಡೆದು ನೀಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ತಮ್ಮ ಪತ್ರದಲ್ಲಿ ಖಂಡ್ರೆ ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರಕಾರ ಮತ್ತೂಮ್ಮೆ ಕಸ್ತೂರಿ ರಂಗನ್‌ ವರದಿಯ ಕರಡು ಅಧಿಸೂಚನೆ ಹೊರಡಿಸಿರುವ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಭೂಕುಸಿತ ತಪ್ಪಿಸಲು ಈ ಕ್ರಮ ಅಗತ್ಯ
ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಯೇ ಪ್ರಾಥಮಿಕ ಕಾರಣ ಎನ್ನಲಾಗಿದ್ದು, ಪಶ್ಚಿಮ ಘಟ್ಟದಲ್ಲಿ ಸಂಭಾವ್ಯ ಅವಘಡ ತಡೆಯಲು ಮುಂಜಾಗರೂಕತೆಯ ಕ್ರಮವಾಗಿ ಈ ಪ್ರದೇಶದ ಒತ್ತುವರಿ ತೆರವಿಗೆ ಕ್ರಮವಹಿಸಲಾಗಿದೆ ಎಂದು ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಹೊಸ ನಿಯಮಾವಳಿ ರೂಪಿಸಲು ಸೂಚನೆ
ಹಿಮಾಲಯದ ಕಣಿವೆ ರಾಜ್ಯ ಹಿಮಾಚಲ ಪ್ರದೇಶದ ಘಟ್ಟ ಪ್ರದೇಶಗಳಲ್ಲಿ ಭೂಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟವಾದ ಹಾಗೂ ಪ್ರತ್ಯೇಕವಾದ ನಿಯಮಗಳನ್ನು ರೂಪಿಸಿರುವುದು ಗಮನಕ್ಕೆ ಬಂದಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಭೂ ಉಪಯೋಗದ ಬಗ್ಗೆ ಹೊಸ ನಿಯಮಾವಳಿ ರೂಪಿಸಲು ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆಯೂ ಅವರು ಅಪರ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next