Advertisement

ಮಾಸಿಕ ಪಾಸ್‌ ವಿತರಣೆ ತಾತ್ಕಾಲಿಕ ಸ್ಥಗಿತ

01:20 PM Mar 02, 2020 | Team Udayavani |

ಗದಗ: ರಾಜ್ಯ ಸರಕಾರ ಸಾರಿಗೆ ಸಂಸ್ಥೆ ಪ್ರಯಾಣ ಹೆಚ್ಚಿಸಿದ್ದರಿಂದ ಮಾಸಿಕ ಪಾಸ್‌ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಪಾಸ್‌ ವಿತರಣೆ ಸ್ಥಗಿತಗೊಂಡಿದ್ದು, ತಿಂಗಳ ಆರಂಭದಲ್ಲಿ ಮಾಸಿಕ ಪಾಸ್‌ ಸಿಗದೇ ಸಾವಿರಾರು ಜನರ ಜನರು ಪರದಾಡುವಂತಾಗಿದೆ.

Advertisement

ಇತ್ತೀಚೆಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ ವ್ಯಾಪ್ತಿಯ ಎಲ್ಲ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಕರ್ನಾಟ ರಾಜ್ಯ ಸಾರಿಗೆ ಸಂಸ್ಥೆ, ಬೃಹತ್‌ ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ ಪ್ರಯಾಣ ದರವನ್ನು ಹೆಚ್ಚಿಸಿದೆ. ಅದರಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯೂ ಪ್ರಯಾಣ ದರವನ್ನು ಹೆಚ್ಚಿಸುವುದರೊಂದಿಗೆ ಇದೀಗ ಮಾಸಿಕ ಪಾಸ್‌ ದರವನ್ನೂ ಪರಿಷ್ಕರಣೆಗೆ ಮುಂದಾಗಿದೆ. ಪರಿಣಾಮ ಕಳೆದ ಶುಕ್ರವಾರದಿಂದ ಗದಗ ಜಿಲ್ಲೆಯಲ್ಲಿ ಹೊಸ ಪಾಸ್‌ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈಗಾಗಲೇ ಮುದ್ರಿತ ಪಾಸ್‌ಗಳನ್ನು ಕೇಂದ್ರ ಕಚೇರಿಗೆ ಮರಳಿಸಲಾಗಿದೆ. ಅವುಗಳ ಮೇಲೆ ಪರಿಷ್ಕೃತ ದರದ ಮೊಹರು ಹಾಕಿ, ಪೂರೈಕೆಯಾದ ಬಳಿಕ ಪ್ರಯಾಣಿಕರಿಗೆ ವಿತರಿಸಲಾಗುತ್ತದೆ. ಹೀಗಾಗಿ ಪಾಸ್‌ ಕೇಳುವವರಿಗೆ ಇನ್ನೂ 2- 3 ದಿನಗಳ ನಂತರ ಬರುವಂತೆ ಸೂಚಿಸಲಾಗುತ್ತಿದೆ ಎಂದು ಸಂಸ್ಥೆಯ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಮಾಹಿತಿ ನೀಡಿದರು.

ಪಾಸ್‌ಗಾಗಿ ಪ್ರಯಾಣಿರ ಪರದಾಟ: ಜಿಲ್ಲೆಯ ವಿವಿಧೆಡೆಯಿಂದ ಗದಗ, ಮುಂಡರಗಿ, ನರಗುಂದ, ರೋಣ ಹಾಗೂ ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿದಂತೆ ಹುಬ್ಬಳ್ಳಿ, ಕೊಪ್ಪಳ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಪ್ರತಿ ಸಾವಿರಾರು ಜನರು ಪ್ರತಿ ನಿತ್ಯ ಪ್ರಯಾಣಿಸುತ್ತಾರೆ. ಈ ಪೈಕಿ ಶಿಕ್ಷಕರು, ಬ್ಯಾಂಕ್‌ ಉದ್ಯೋಗಿಗಳೇ ಹೆಚ್ಚು. ಇನ್ನುಳಿದಂತೆ ವಿವಿಧ ಇಲಾಖೆಗಳ ನೌಕರರು, ಕಾರ್ಮಿಕರು, ವ್ಯಾಪಾರಸ್ಥರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಮಾಸಿಕ ಪಾಸ್‌ ಪಡೆದು ಪ್ರಯಾಣಿಸುತ್ತಾರೆ.

ಜಿಲ್ಲೆಯಲ್ಲಿ ಏಳು ತಾಲೂಕು ಸೇರಿದಂತೆ ಒಟ್ಟು 12 ಬಸ್‌ ನಿಲ್ದಾಣಗಳಲ್ಲಿ ವಿದ್ಯಾರ್ಥಿ ಹಾಗೂ ಮಾಸಿಕ ಪಾಸ್‌ ವಿತರಿಸಲಾಗುತ್ತದೆ. ಆ ಪೈಕಿ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ರೋಣ ತಾಲೂಕಿನಲ್ಲಿ ಮಾಸಿಕ ಪಾಸ್‌ ದಾರರ ಸಂಖ್ಯೆ ಹೆಚ್ಚಿದ್ದು, ಪ್ರತಿ ನಿತ್ಯ ಆಯಾ ಬಸ್‌ ನಿಲ್ದಾಣಗಳಲ್ಲಿ ಪ್ರತೀ ತಿಂಗಳು 1 ರಿಂದ 10ನೇ ತಾರೀಖೀನವರೆಗೆ 70 ರಿಂದ 100, 25 ರಿಂದ 30ನೇ ತಾರೀಖೀನವರೆಗೆ ಸರಾಸರಿ 50 ರಿಂದ 60 ಪಾಸ್‌ಗಳು ವಿತರಣೆಯಾಗುತ್ತವೆ.

Advertisement

ಇನ್ನುಳಿದ ದಿನಗಳಲ್ಲಿ ಸರಾಸರಿ 50 ಪಾಸ್‌ ವಿತರಣೆಯಾಗುತ್ತವೆ. ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನದ ಬಳಿಕ ಪಾಸ್‌ ವಿತರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲಿವರೆಗೆ 33 ಪಾಸ್‌ಗಳ ವಿತರಣೆಯಾಗಿದ್ದು, 40 ಸಾವಿರ ರೂ. ಸಂಗ್ರಹಗೊಂಡಿತ್ತು ಎಂಬುದು ಮಾಸಿಕ ಪಾಸ್‌ಗೆ ಇರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಆದರೆ, ತಿಂಗಳ ಆರಂಭದಲ್ಲೇ ತಿಂಗಳ ಪಾಸ್‌ ಪಡೆಯುವುದರಿಂದ ಶೇ.30ರಷ್ಟು ಹಣ ಉಳಿತಾಯವಾಗುತ್ತದೆ. ಆದರೆ, ಇದೀಗ ಪಾಸ್‌ ವಿತರಣೆ ಸ್ಥಗಿತಗೊಂಡಿದ್ದರಿಂದ ಸಾವಿರಾರು ಜನರು ಪ್ರತಿನಿತ್ಯ ಟಿಕೆಟ್‌ ಪಡೆದು ಪ್ರಯಾಣಿಸುವಂತಾಗಿದ್ದು, ಜೇಬಿಗೆ ಕತ್ತರಿ ಬೀಳುತ್ತಿದೆ ಎಂಬುದು ಪ್ರಯಾಣಿಕರ ದೂರು.

ಸಾರಿಗೆ ಬಸ್‌ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮಾಸಿಕ ಪಾಸ್‌ ದರವನ್ನು ಮಾರ್ಗವಾರು ಪರಿಷ್ಕರಿಸಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಹೊಸ ಪಾಸ್‌ ವಿತರಿಸುತ್ತಿಲ್ಲ. ಪರಿಷ್ಕೃತ ದರ ನಮೋದಿಸಿರುವ ಪಾಸ್‌ಗಳು ಸೋಮವಾರ ಜಿಲ್ಲೆಗೆ ಆಗಮಿಸಲಿದ್ದು, ತ್ವರಿತಗತಿಯಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. – ಎಫ್‌.ಸಿ. ಹಿರೇಮಠ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ವಾ.ಕ.ರ.ಸಾ.ಸಂಸ್ಥೆ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next