Advertisement

ಬೇಂದ್ರೆಗೆ ತಾತ್ಕಾಲಿಕ ರಿಲೀಫ್‌

08:44 AM Jul 16, 2019 | Team Udayavani |

ಹುಬ್ಬಳ್ಳಿ: ಬೇಂದ್ರೆ ಸಾರಿಗೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 15 ದಿನಗಳ ಕಾಲ ಯಥಾಸ್ಥಿತಿ (ಸ್ಟೆಟೆಸ್ಕೋ ) ಕಾಪಾಡುವಂತೆ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಸೋಮವಾರ ಆದೇಶ ನೀಡಿದೆ.

Advertisement

ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ ರಹದಾರಿ ಪರವಾನಗಿ ನೀಡಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿರಾಕರಿಸಿತ್ತು. ಹೀಗಾಗಿ ಬೇಂದ್ರೆ ಸಾರಿಗೆ ಮಾಲೀಕರು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮನವಿ ಮಾಡಿದ್ದರು.

ಕಳೆದ 15 ವರ್ಷಗಳಿಂದ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿದ್ದು, ಇದೀಗ ಏಕಾಏಕಿ ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ ಪರವಾನಗಿ ನೀಡಲು ಆರ್‌ಟಿಎ ನಿರಾಕರಿಸಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಲೀಕರು ಮನವಿ ಮಾಡಿದ್ದರು.

ಅರ್ಜಿದಾರರ ಮನವಿ ಆಲಿಸಿದ ಮೇಲ್ಮನವಿ ನ್ಯಾಯಾಧೀಕರಣ ಸಾರ್ವಜನಿಕ ಹಿತದೃಷ್ಟಿಯಿಂದ ಜೂ. 26ರ ಸ್ಥಿತಿಯನ್ನು ಜು. 31ರ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.

ಜೂ. 26ರಂದು 41 ಬಸ್‌ಗಳು ಅವಳಿ ನಗರದ ನಡುವೆ ಸಂಚಾರ ಮಾಡುತ್ತಿದ್ದು, ಅಂದಿನ ಸ್ಥಿತಿ ಕಾಪಾಡಬೇಕು ಎನ್ನುವ ಆದೇಶವಿರುವ ಹಿನ್ನೆಲೆಯಲ್ಲಿ ಜು. 16ರಿಂದ ಪೂರ್ಣ ಪ್ರಮಾಣದಲ್ಲಿ ಮೊದಲಿನಂತೆ ಎಲ್ಲ ಬಸ್‌ಗಳು ಸಂಚಾರ ಮಾಡಲಿವೆ. ಸೋಮವಾರ ಆದೇಶ ಹೊರಬೀಳುತ್ತಿದ್ದಂತೆ ರಹದಾರಿ ಪರವಾನಗಿ ಹೊಂದಿದ ಮೂರು ಬಸ್‌ಗಳೊಂದಿಗೆ ಹೆಚ್ಚುವರಿಯಾಗಿ 5 ಬಸ್‌ ಸಂಚಾರ ಮಾಡಿದ್ದು, ಜು. 16ರಿಂದ 41 ಬಸ್‌ಗಳು ರಸ್ತೆಗಳಿಯಲಿವೆ.

Advertisement

ಬೇಂದ್ರೆ ಸಾರಿಗೆ ಬಸ್‌ಗಳ ಪರವಾನಗಿ ಹಂತ ಹಂತವಾಗಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಪರವಾನಗಿ ನವೀಕರಣ ಮಾಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಐದು ವರ್ಷಗಳ ಕಾಲ ನೀಡಿದ್ದ ಪರವಾನಗಿ ಮುಗಿದಿದ್ದು, ಅವಳಿ ನಗರದ ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ನವೀಕರಣಕ್ಕೆ ಪ್ರಾಧಿಕಾರ ಒಪ್ಪಿರಲಿಲ್ಲ. ನಂತರ ತಾತ್ಕಾಲಿಕ ಪರವಾನಗಿ ನೀಡುವಂತೆಯೂ ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಾಧಿಕಾರ ತಳ್ಳಿಹಾಕಿತ್ತು.

ನವಲೂರಿಗೆ ಸಂಪರ್ಕ ಬಸ್‌: ನವಲೂರು ಗ್ರಾಮಸ್ಥರ ಅನುಕೂಲಕ್ಕಾಗಿ ಜು. 16ರಿಂದ ಸಂಪರ್ಕ (ಫೀಡರ್‌) ಸೇವೆಯ ಬಸ್‌ಗಳ ಸಂಚಾರ ಸೇವೆಗೆ ವಾಯವ್ಯ ಸಾರಿಗೆ ಸಂಸ್ಥೆ ಮುಂದಾಗಿದೆ. ಗ್ರಾಮದಿಂದ ಹುಬ್ಬಳ್ಳಿ ಹಾಗೂ ಧಾರವಾಡ ಮಾರ್ಗದಲ್ಲಿ ಸಂಚರಿಸಲು ಸಂಪರ್ಕ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಗ್ಗೆ 8, ಮಧ್ಯಾಹ್ನ 12, ಸಂಜೆ 4 ಹಾಗೂ ರಾತ್ರಿ 8 ಗಂಟೆಗೆ ಬಸ್‌ಗಳು ಸಂಚಾರ ಮಾಡಲಿವೆ. ನವಲೂರು ಗ್ರಾಮದಿಂದ ಧಾರವಾಡಕ್ಕೆ ಹೋಗುವ ಪ್ರಯಾಣಿಕರು ಸಂಪರ್ಕ ಸಾರಿಗೆಯಲ್ಲಿ ಟಿಕೆಟ್ ಪಡೆದು ಲಕ್ಕಮನಹಳ್ಳಿಗೆ ಇಳಿದು ಬಿಆರ್‌ಟಿಎಸ್‌ ನಿಲ್ದಾಣದಿಂದ ಚಿಗರಿ ಬಸ್‌ ಮೂಲಕ ಧಾರವಾಡ ಮಾರ್ಗದ ಯಾವುದೇ ನಿಲ್ದಾಣದಲ್ಲಿ ಇಳಿಯಬಹುದು. ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರು ಸಂಪರ್ಕ ಸಾರಿಗೆ ಬಸ್‌ ಮೂಲಕ ಸತ್ತೂರಿಗೆ ಬಂದು ಅಲ್ಲಿಂದ ಬಿಆರ್‌ಟಿಎಸ್‌ ಬಸ್‌ ಮೂಲಕ ಸಂಚಾರ ಮಾಡಬಹುದು. ಎರಡು ನಗರದಿಂದ ನವಲೂರಿಗೆ ಹೋಗುವ ಪ್ರಯಾಣಿಕರು ಗ್ರಾಮಕ್ಕೆ ಟಿಕೆಟ್ ಪಡೆದು ಬಿಆರ್‌ಟಿಎಸ್‌ ಮೂಲಕ ಲಕಮನಹಳ್ಳಿ ಹಾಗೂ ಸತ್ತೂರಿಗೆ ಇಳಿದು ಸಂಪರ್ಕ ಸಾರಿಗೆ ಬಸ್‌ನಲ್ಲಿ ಟಿಕೆಟ್ ತೋರಿಸಿ ಪ್ರಯಾಣಿಸಬಹುದಾಗಿದೆ. ಸದ್ಯಕ್ಕೆ ನಾಲ್ಕು ಸಮಯದಲ್ಲಿ ಬಸ್‌ ಸಂಚಾರ ಮಾಡಲಿದ್ದು, ಪ್ರಯಾಣಿಕರ ಬೇಡಿಕೆಯನುಸಾರ ಸಾರಿಗೆ ಸೇವೆ ಹೆಚ್ಚಿಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್‌ ನಿಲುಗಡೆ ಸ್ಥಳ ಬದಲಿಸಲು ಒತ್ತಾಯ: ವಿದ್ಯಾನಗರದಲ್ಲಿ ಬದಲಾದ ನಗರ ಸಾರಿಗೆ ಬಸ್‌ ನಿಲುಗಡೆ ಸ್ಥಳದಿಂದಾಗಿ ಜೆ.ಜಿ. ಕಾಮರ್ಸ್‌ ಕಾಲೇಜ್‌ ಹತ್ತಿರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಬಸ್‌ ನಿಲುಗಡೆ ಸ್ಥಳವನ್ನು ಮತ್ತೆ ಮೊದಲಿನ ಜಾಗಕ್ಕೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಬಿಆರ್‌ಟಿಎಸ್‌ ಯೋಜನೆ ಆರಂಭವಾಗುವ ಮುನ್ನ ನಗರ ಸಾರಿಗೆ ಬಸ್‌ಗಳಿಗೆ ಜೆ.ಜಿ. ಕಾಮರ್ಸ್‌ ಕಾಲೇಜ್‌ ಹತ್ತಿರ (ಸದ್ಯ ಸ್ಟೆಲ್ಲರ್‌ ಮಾಲ್ ತಲೆ ಎತ್ತುತ್ತಿರುವ ಪ್ರದೇಶದ ಎದುರು) ನಿಲುಗಡೆ ಕಲ್ಪಿಸಲಾಗಿತ್ತು. ಅಲ್ಲದೆ ನಗರ ಸಾರಿಗೆ ಬಸ್‌ ತಂಗುದಾಣ ಕೂಡ ಇತ್ತು. ಆದರೆ ಬಿಆರ್‌ಟಿಎಸ್‌ ಯೋಜನೆಗೆ ಕಾಮಗಾರಿ ಕೈಗೊಳ್ಳುವಾಗ ಅಲ್ಲಿನ ತಂಗುದಾಣ ತೆರವುಗೊಳಿಸಿದ್ದರಿಂದ ಬಸ್‌ ನಿಲುಗಡೆ ಸ್ಥಳ ನ್ಯೂ ಅಶೋಕ ಕೆಫೆ ಎದುರು ಸ್ಥಳಾಂತರಗೊಂಡಿತು. ಈಗ ಬಿಆರ್‌ಟಿಎಸ್‌ ಯೋಜನೆ ಇಲ್ಲಿ ಪೂರ್ಣಗೊಂಡರೂ ನಗರ ಸಾರಿಗೆ ಬಸ್‌ಗಳನ್ನು ಈಗಲೂ ನ್ಯೂ ಅಶೋಕ ಕೆಫೆ ಎದುರುಗಡೆ ನಿಲ್ಲಿಸಲಾಗುತ್ತಿದೆ. ನ್ಯೂ ಅಶೋಕ ಕೆಫೆ ಎದುರಿನ ಸರ್ವಿಸ್‌ ರಸ್ತೆ ಕಿರಿದಾಗಿರುವುದರಿಂದ ಹಿಂದೆ ಬರುವ ವಾಹನಗಳು ತಂಗುದಾಣ ಬಳಿ ನಿಂತ ಬಸ್‌ಗಳನ್ನು ದಾಟಿಕೊಂಡು ಹೋಗಲು ಆಗುತ್ತಿಲ್ಲ. ಹೀಗಾಗಿ ಪ್ರತಿ ಬಾರಿ ಇಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಸ್ಟೆಲ್ಲರ್‌ ಮಾಲ್ ಎದುರು ವಿಶಾಲವಾದ ಫುಟ್ಪಾತ್‌ ಇದೆ. ನಗರ ಸಾರಿಗೆ ಬಸ್‌ಗಳ ಚಾಲಕರಿಗೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿ, ಬಸ್‌ಗಳನ್ನು ಮೊದಲಿದ್ದ (ಸ್ಟೆಲ್ಲರ್‌ ಮಾಲ್ ಎದುರುಗಡೆ) ಸ್ಥಳದಲ್ಲೇ ನಿಲುಗಡೆ ಮಾಡಬೇಕೆಂದು ನಾರಾಯಣ ಕಮಲಾಕರ ಮೊದಲಾದವರು ಆಗ್ರಹಿಸಿದ್ದಾರೆ.

ಅವಳಿ ನಗರದ ನಡುವೆ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿದ ಪರಿಣಾಮ ಮೇಲ್ಮನವಿ ನ್ಯಾಯಾಧೀಕರಣ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿದ್ದು, ನೌಕರರು ಹಾಗೂ ಜನರಲ್ಲಿ ಸಂತಸ ಮೂಡಿದೆ. ಪ್ರಾಮಾಣಿಕ ಕಾನೂನು ಹೋರಾಟದಿಂದ ನಮಗೆ ಒಂದಿಷ್ಟು ಯಶಸ್ಸು ದೊರಕಿದೆ. ಜು. 16ರಿಂದ 41 ಬಸ್‌ಗಳ ಸಂಚಾರ ಆರಂಭವಾಗಲಿದೆ.• ಸುಧಾಕರ ಶೆಟ್ಟಿ, ವ್ಯವಸ್ಥಾಪಕ, ಬೇಂದ್ರೆ ಸಾರಿಗೆ

ಯಥಾಸ್ಥಿತಿ ಗೊಂದಲ: ಮೇಲ್ಮನವಿ ನ್ಯಾಯಾಧೀಕರಣ ನೀಡಿರುವ ಯಥಾಸ್ಥಿತಿ ಕಾಪಾಡಿಕೊಳ್ಳುವ ಆದೇಶ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಸುಮಾರು 38 ಬಸ್‌ಗಳ ಪರವಾನಗಿ ರದ್ದಾಗಿದೆ. ಯಾವುದೇ ವಾಹನ ರಸ್ತೆಗಿಳಿಯಬೇಕಾದರೆ ಪರವಾನಗಿ ಇಲ್ಲವೆ ತಾತ್ಕಾಲಿಕ ಪರವಾನಗಿ ಬೇಕಾಗುತ್ತದೆ. ಹೀಗಿರುವಾಗ ಯಾವ ಆಧಾರದ ಮೇಲೆ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಯಥಾಸ್ಥಿತಿ ಕಾಪಾಡಿಕೊಳ್ಳುವುದರ ಸಾರಾಂಶ ಅರ್ಥವಾಗುತ್ತಿಲ್ಲ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಯಥಾಸ್ಥಿತಿ ಕಾಪಾಡುವಂತೆ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಆದೇಶವಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತ ಆದೇಶ ಪ್ರತಿ ನಮಗೆ ತಲುಪಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. • ವಿವೇಕಾನಂದ ವಿಶ್ವಜ್ಞ, ವಿಭಾಗೀಯ ನಿಯಂತ್ರಣಾಧಿಕಾರಿ, ಹು-ಧಾ ನಗರ ವಿಭಾಗ
Advertisement

Udayavani is now on Telegram. Click here to join our channel and stay updated with the latest news.

Next