Advertisement

ತಾತ್ಕಾಲಿಕ ಶಮನ: ಕಬ್ಬು ಬಾಕಿ ಹಣ ಕೊಡುವ ಭರವಸೆ ನೀಡಿದ ಸರಕಾರ

06:00 AM Nov 21, 2018 | |

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿದ್ದ ಕಬ್ಬಿನ ಬಾಕಿ ಹಣ ಕೊಡಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತತ್‌ಕ್ಷಣಕ್ಕೆ ರೈತರನ್ನು ಸಮಾ ಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳು ಬಾಕಿ ಕೊಡುವ ವಿಚಾರದಲ್ಲಿ ಸರಕಾರದ ಸೂಚನೆಗೆ ಇನ್ನೂ ಸಮ್ಮತಿ ಸೂಚಿಸಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ (ನಾಡಿದ್ದು ) ಮತ್ತೂಮ್ಮೆ ಕಾರ್ಖಾನೆ ಮಾಲಕರ ಜತೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೋರಾಟದಿಂದ ಹಿಂದೆ ಸರಿಯುವ ಬಗ್ಗೆ ರೈತರು ಭರವಸೆ ನೀಡಿದ್ದಾರೆ. 

Advertisement

ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸತತ ಆರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಸಭೆಯಲ್ಲಿ ಕಳೆದ ವರ್ಷ ಕಾರ್ಖಾನೆ ಮಾಲಕರು ನೀಡಿದ ಭರವಸೆಯಂತೆ ಪ್ರತಿ ಟನ್‌ಗೆ 2,900 ರೂ. ದರ ಕೊಡಿಸು ವಂತೆ ರೈತರು ಪಟ್ಟು ಹಿಡಿದರು. ಆದರೆ ರೈತರ ವಾದ ಒಪ್ಪದ ಸಕ್ಕರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಕಾರ್ಖಾನೆಗಳು ನಷ್ಟದಲ್ಲಿರುವುದರಿಂದ ಹೆಚ್ಚಿನ ಹಣ ನೀಡಲು ಆಗುವುದಿಲ್ಲ ಎಂದು ಹೇಳಿದರು. 

ಮಾತಿನ ಚಕಮಕಿ
ರೈತರು ಮತ್ತು ಕಾರ್ಖಾನೆ ಮಾಲಕರ ನಡುವೆ ಕಬ್ಬು ಕಟಾವು ಸಂದರ್ಭದಲ್ಲಿ ಮಾತುಕತೆಯ ಮೂಲಕ ಒಪ್ಪಂದ ಆಗಿದೆ. ಮಾಲಕರ ಮೇಲಿನ ನಂಬಿಕೆ ಮೇಲೆ ಆಗಿರುವ ಮಾತುಕತೆ ಇದಾಗಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳ ಬೇಕು ಎಂದು ರೈತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಮಾಲಕರ ಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯ ಪ್ರವೇಶಿಸಿ, ರೈತರು ಹಾಗೂ ಕಾರ್ಖಾನೆ ಮಾಲಕರ ನಡುವೆ ಆಗಿರುವ ಒಪ್ಪಂದದಂತೆ ರೈತರಿಗೆ ಬಾಕಿ ಹಣ ಕೊಡುವಂತೆ ಕಾರ್ಖಾನೆ ಮಾಲಕರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಕಾರ್ಖಾನೆ ಪ್ರತಿನಿಧಿಗಳು ತಾವು ಇಲ್ಲಿಯೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಮಾಲಕರ ಜತೆ ಚರ್ಚಿಸಿ ನಿರ್ಧರಿಸಬೇಕಾಗುತ್ತದೆ ಎಂದು ಜಾರಿಕೊಂಡರು.

ಸರಕಾರದ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಸ್ವಾಗತಿಸುತ್ತೇನೆ. ಸರಕಾರದ ಸಭೆಗೆ ಕಾರ್ಖಾನೆ ಮಾಲಕರು ಗೈರು ಹಾಜರಾದರೆ ಕ್ರಮ ಕೈಗೊಳ್ಳುವ ಶಕ್ತಿ ಸರಕಾರಕ್ಕಿದೆ. ಕಳೆದ 8 ವರ್ಷಗಳಿಂದ ಪ್ರತಿಭಟನೆ ನಡೆಸಿದ ರೈತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂಪುಟದಲ್ಲಿ ನಿರ್ಧರಿಸಲಾಗುವುದು. 
ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

ಸಿಎಂ ಕುಮಾರಸ್ವಾಮಿ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಬಾಕಿ ಹಣ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಸರಕಾರ ಕಬ್ಬಿನ ಇಳುವರಿ ಪ್ರಮಾಣವನ್ನು 9.5 ರಿಂದ 10ಕ್ಕೆ ಏರಿಸಿ ಎಫ್ಆರ್‌ಪಿ ದರ ನಿಗದಿ ಮಾಡಿರುವುದರಿಂದ ರೈತರಿಗೆ ನಷ್ಟವಾಗುತ್ತದೆ. ಅದನ್ನು ಕೈ ಬಿಡುವಂತೆ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕು.
ಕೆ.ಟಿ ಗಂಗಾಧರ, ರೈತ ಮುಖಂಡ

Advertisement

ಪ್ರಮುಖರ ಗೈರು 
ಬೆಳಗಾವಿ ಸುವರ್ಣಸೌಧ ಮುಂದೆ ಪ್ರತಿಭಟನೆ ಮಾಡಿದ್ದ ರೈತರು ಮುಖ್ಯಮಂತ್ರಿ ಕರೆದಿದ್ದ ಸಭೆಗೆ ಗೈರು ಹಾಜರಾಗಿದ್ದರು. ವಿಧಾನಸೌಧದ ಸಭೆಯಲ್ಲಿ ಭಾಗವಹಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗಳು ಮನವಿ ಮಾಡಿದರೂ ಮುಖ್ಯಮಂತ್ರಿಯವರೇ ಇಲ್ಲಿಗೆ ಬಂದು ನಮ್ಮ ಜತೆ ಮಾತನಾಡಲಿ ಎಂದು ಬರಲು ನಿರಾಕರಿಸಿದರು ಎಂದು ಹೇಳಲಾಗಿದೆ. ಸಭೆಗೆ ಶಾಸಕ ಸೀಮಂತ್‌ ಪಾಟೀಲ್‌ ಹೊರತುಪಡಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಸಹಿತ ಬಹುತೇಕ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಸಕ್ಕರೆ ಕಾರ್ಖಾನೆ ಮಾಲಕರು ಹಾಜರಾಗದೇ ತಮ್ಮ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದರು.

ಪ್ರಮುಖ ನಿರ್ಣಯಗಳು
ಕಳೆದ ವರ್ಷದ ಬಾಕಿ ಹಣ ಕೊಡಿಸುವುದು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರೈತರೊಂದಿಗೆ ಮತ್ತೂಂದು ಸಭೆ ನಡೆಸುವುದು.
ಕಾರ್ಖಾನೆ ಮಾಲಕರ ನಿಯಂತ್ರಣಕ್ಕೆ ಸೂಕ್ತ ಕಾನೂನು ತಿದ್ದುಪಡಿ
ಈ ವರ್ಷದ ಬೆಲೆ 2,750 ಎಫ್ಆರ್‌ಪಿ ದರ ಮೊದಲ ಕಂತಿನಲ್ಲಿ ನೀಡುವುದು.
22ರಂದು ಈರುಳ್ಳಿ, ಭತ್ತ, ಜೋಳಕ್ಕೆ ಬೆಂಬಲ ಬೆಲೆ ಘೋಷಣೆ. 
ಮಹಾರಾಷ್ಟ್ರ, ಗುಜರಾತ್‌ ಮಾದರಿ ಅಧ್ಯಯನಕ್ಕೆ ತಂಡ ಕಳಿಸಲು ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next