ಬೆಂಗಳೂರು: ನಟಿ ಶೃತಿ ಹರಿಹರನ್ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜುನ್ ಸರ್ಜಾ ಅವರನ್ನು ಬಂಧಿಸದಂತೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಅರ್ಜುನ್ ಸರ್ಜಾ ಸದ್ಯ ನಿರಾಳರಾಗಿದ್ದಾರೆ.
ತಮ್ಮ ವಿರುದ್ಧ ಶೃತಿ ಹರಿಹರನ್ ದಾಖಲಿಸಿರುವ ದೂರು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜುನ್ ಸರ್ಜಾ ಅವರನ್ನು ಬಂಧಿಸುವಂತಿಲ್ಲ ಎಂದು ನಿರ್ದೇಶನ ನೀಡಿತು. ಆದರೆ, ಕಾನೂನು ರೀತಿ ತನಿಖೆ ನಡೆಸಲು ಕಬ್ಬನ್ ಪಾರ್ಕ್ ಪೊಲೀಸರಿಗೆ ಅನುಮತಿ ನೀಡಿ ವಿಚಾರಣೆಯನ್ನು ನ.14ಕ್ಕೆ ಮುಂದೂಡಿತು.
ಶುಕ್ರವಾರ ಅರ್ಜಿ ವಿಚಾರಣೆ ವೇಳೆ ಅರ್ಜುನ್ ಸರ್ಜಾ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ತಮ್ಮ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಇದೊಂದು ಚಾರಿತ್ರ್ಯ ಹರಣ ಮತ್ತು ಘನತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಶೃತಿ ಹರಿಹರನ್ ಸುಳ್ಳು ಆರೋಪ ಮಾಡುವ ಮೂಲಕ ಸರ್ಜಾ ಅವರ ಗೌರವ-ಘನತೆಗೆ ಚ್ಯುತಿ ತಂದಿದ್ದಾರೆ. “ಮೀ ಟೂ’ ಅಭಿಯಾನ ಹೆಸರಲ್ಲಿ 2015ರಲ್ಲಿ ಚಿತ್ರವೊಂದರ ಚಿತ್ರೀಕರಣದ ಸಂದರ್ಭದ ಸನ್ನಿವೇಶವನ್ನು ಪ್ರಸ್ತಾಪಿಸಿ ಆರೋಪ ಮಾಡಿದ್ದಾರೆ. ಚಿತ್ರಕಥೆಗೆ ಅನುಗುಣವಾಗಿ ಸರ್ಜಾ ನಟನೆ ಮಾಡಿದ್ದಾರೆ.
ಚಿತ್ರತಂಡ ಹಾಗೂ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆದಿದೆ. ಪ್ರಚಾರ ಗಿಟ್ಟಿಸಿಕೊಳ್ಳಲು ಈ ಸುಳ್ಳು ಆರೋಪ ಮಾಡಲಾಗಿದೆ. ಒಂದೊಮ್ಮೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದರೆ, ದೂರು ಸಲ್ಲಿಸುವ ಮುನ್ನ ಸಮಿತಿ ರಚಿಸಬೇಕು. ಸಮಿತಿಯ ವಿಚಾರಣೆಯಲ್ಲಿ ಆರೋಪ ದೃಢಪಟ್ಟರೆ ದೂರು ಸಲ್ಲಿಸಬೇಕು. ಈ ಪ್ರಕರಣದಲ್ಲಿ ಅದನ್ನು ಪಾಲಿಸಿಲ್ಲ. ಹಾಗಾಗಿ ಪ್ರಕರಣವನ್ನು ಮುಂದುವರಿಸದಂತೆ ಮತ್ತು ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಆಚಾರ್ಯ ಕೋರಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್, ಅರ್ಜಿಯು ಪ್ರಾಥಮಿಕ ವಿಚಾರಣೆ ಹಂತದಲ್ಲಿದೆ. ಈ ವೇಳೆ ಮಧ್ಯಂತರ ಆದೇಶ ನೀಡುವುದು ಸಮಂಜಸವಲ್ಲ ಎಂದು ತಿಳಿಸಿದರು.
ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ, ಇದೊಂದು, ವರ್ಷಗಳ ಹಳೆಯ ಪ್ರಕರಣವಾಗಿದ್ದು, ನ್ಯಾಯಸಮ್ಮತವಾಗಿ ನಡೆದುಕೊಳ್ಳಲಿದೆ ಎಂದು ತಿಳಿಸಿದರು. ತನಿಖೆ ಮುಂದುವರಿಯಲಿದ್ದು, ಅರ್ಜಿದಾರವನ್ನು ವಿಚಾರಣೆಗೆ ಕರೆಯುವುದಿಲ್ಲ
ಎಂದು ಭರವಸೆ ನೀಡಲಾಗುವುದು ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು.