ಬಳ್ಳಾರಿ: ತಾಪಂ ಸದಸ್ಯರು ಅಂದರೆ ಅಧಿಕಾರಿಗಳಿಗೆ ಲೆಕ್ಕಕ್ಕೆ ಇಲ್ಲ. ಹಾಗಾದರೆ, ನಾವ್ಯಾಕ ಈ ಸಭೆಗೆ ಬರಬೇಕು. ಅಭಿವೃದ್ಧಿ ಕಾರ್ಯಗಳ ಕುರಿತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸದಸ್ಯರ ಹೆಸರಿನಡಿ ಅನುದಾನವಿದ್ದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿತ್ತು. ಆ ಭಾಗ್ಯವೂ ಇಲ್ಲ. ಆಯಾ ಇಲಾಖೆಗಳು ಸಮರ್ಪಕ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುತ್ತವೆ ಎಂದರೂ ಅಲ್ಲಿಯೂ ಕೂಡ ಶೂನ್ಯ ಸಾಧನೆಯಾಗಿದೆ ಎಂದು
ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ರಮೀಜಾ ಬೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಇತರೆ ವಿಷಯಗಳಿಗೆ ಅಧಿಕಾರಿಗಳು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸದಸ್ಯ ಬಸವರಾಜ ಮಾತನಾಡಿ, ತಾಲೂಕಿನ ಚಿಟಗಿನಹಾಳ್ ಗ್ರಾಮದ ಶಾಲೆಯ ಮೇಲ್ಛಾವಣೆ ಕುಸಿಯುವ ಹಂತಕ್ಕೆ ಬಂದಿದೆ. ಕಟ್ಟಿಗೆಯ ಗಳ ಬಳಸಿ ಮೇಲ್ಛಾವಣೆ
ಕುಸಿಯದಂತೆ ನಿಲ್ಲಿಸಲಾಗಿದೆ. ಯಾವುದೇ ಅವಘಡ ಸಂಭವಿಸುವ ಮುಂಚೆ ಅದರ ಮೇಲ್ಛಾವಣೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಳೆದ ಸಭೆಯಲ್ಲಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಈ ಬಾರಿ ಸಭೆಯಲ್ಲಿ ಆ ಕುರಿತು ಅನುಪಾಲನ ವರದಿಯೇ ಸಲ್ಲಿಕೆಯಾಗಿಲ್ಲ ಎಂದು ಆರೋಪಿಸಿದರು.
ಅನುಪಾಲನ ವರದಿಯ ಎರಡನೇ ಅಂಶದಲ್ಲಿ ತಾಲೂಕಿನ ಕೊಳಗಲ್ಲು ಗ್ರಾಮದ ಎಂಟು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ದುರಸ್ತಿಯಾಗಿವೆ. ಆ ಕೇಂದ್ರಗಳ ಮೇಲ್ಭಾಗದಲ್ಲಿ ನೀರು ಸಂಗ್ರಹಣೆ ತೊಟ್ಟಿ ಅಳವಡಿಸಿ, ಮಾರನೇ ದಿನ ತೆರವುಗೊಳಿಸಲಾಗಿದೆ. ಹೀಗಾಗಿ, ಯಾವ್ಯಾವ ಅಂಗನವಾಡಿ ಕೇಂದ್ರಗಳಲ್ಲಿ ನೀರು ಸಂಗ್ರಹಣೆ ತೊಟ್ಟಿ ಕೂರಿಸಲಾಗಿದೆ ಎನ್ನುವ ಕುರಿತು ವಿವರಣೆ ನೀಡಿ ಎಂದು ಕೇಳಿದ್ದಾರೆ.
ಗ್ರಾಮೀಣ ಕ್ಷೇತ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಲ್ಲಿಸಿರುವ ಅನುಪಾಲನ ವರದಿಯಲ್ಲಿ ಅಂಗನವಾಡಿ ಕೇಂದ್ರಗಳ ಶೌಚಾಲಯಗಳ ಅಭಿವೃದ್ಧಿ ಕಾರ್ಯದ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನೀರು ಸಂಗ್ರಹಣೆ ತೊಟ್ಟಿ ಕುಳ್ಳಿರಿಸಿರುವ ಕುರಿತು ಈಗಾಗಲೇ ಸದಸ್ಯರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಆ ವರದಿ ನಮಗೆ ತಲುಪಿಲ್ಲ. ಹಾಗಾದರೆ, ಯಾರಿಗೆ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಯೋಜನಾಧಿಕಾರಿ ಜಿ.ಕೆ. ಕೃಷ್ಣಮ್ಮ, ಈಗಾಗಲೇ 88 ಶೌಚಾಲಯಗಳು ಮಂಜೂರಾಗಿವೆ. ಅವುಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ, ನೀರು ಸಂಗ್ರಹಣೆ ತೊಟ್ಟಿ ಅಳವಡಿಸುವ ಜವಾಬ್ದಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಸದಸ್ಯರಿಗೆ ಸಲ್ಲಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ನಿರ್ಮಿತಿ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಉತ್ತರಿಸಿ, ಎಲ್ಲ ಅಂಗನವಾಡಿ ಕೇಂದ್ರಗಳಿಗೆ ನೀರು ಸಂಗ್ರಹಣೆ ತೊಟ್ಟಿ ಕುಳ್ಳಿರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದರಿಂದ ಕೊಪಗೊಂಡ ಜಿ.ಕೆ.ಕೃಷ್ಣಮ್ಮ, ಕಳೆದ ಆರು ತಿಂಗಳಿಂದ ಈ ವಿಚಾರವನ್ನೇ ಕೇಳುತ್ತಾ ಬಂದಿರುವೆ. ಆದರೆ, ನೀವು ಅಂಕಿ, ಸಂಖ್ಯೆಗಳನ್ನು ಅನುಪಾಲನ ವರದಿಯಲ್ಲಿ ತಿಳಿಸದೇ ಬಾಯಿ ಮಾತಲ್ಲಿ ನೀರು ಸಂಗ್ರಹಣೆ ತೊಟ್ಟಿ ಕುಳ್ಳಿರಿಸಲಾಗಿದೆ ಎಂದರೆ ಏನರ್ಥ ಎಂದು ತರಾಟೆ ತೆಗೆದುಕೊಂಡರು. ಉಪಾಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಆರ್.ಸೋಮನಗೌಡ, ತಿಮ್ಮಾರೆಡ್ಡಿ, ಅಮರಗೌಡ, ಸುಮಂಗಳಮ್ಮ, ಶಾಂತಿಬಾಯಿ, ಕೆ.ಪಂಪಣ್ಣ, ಮಲ್ಲಿಕಾರ್ಜುನ ದೊಡ್ಡಮನಿ, ವೀರನಗೌಡ, ಗೋವಿಂದಪ್ಪ, ವೆಂಕಟರಾಮ ರಾಜು, ಚೆನ್ನಪ್ಪ ಇತರರಿದ್ದರು.