ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡುವರೆ ತಿಂಗಳುಗಳಿಂದ ಬಂದ್ ಆಗಿದ್ದ ಮಠ-ಮಂದಿರ, ಧಾರ್ಮಿಕ ಕೇಂದ್ರಗಳು, ಮಾಲ್‌ಗಳು ಬಾಗಿಲು ತೆರೆದಿದ್ದು, ವಾಣಿಜ್ಯ ನಗರಿ ಮಾಮೂಲು ಸ್ಥಿತಿಗೆ ಮರಳಿದಂತೆ ಗೋಚರಿಸುತ್ತಿದೆ. ಸರಕಾರ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಘೋಷಣೆ ಮಾಡಿದ್ದರಿಂದ ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಮಠ, ಮೂರುಸಾವಿರ ಮಠ, ಶಿರಡಿ ಸಾಯಿಬಾಬಾ ಮಂದಿರ, ಇಂಡಿ ಪಂಪ್ ಫತೇಶಾವಲಿ ದರ್ಗಾ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಸಿದ್ಧಾರೂಢಸ್ವಾಮಿ ಮಠಕ್ಕೆ ಬೆಳಗ್ಗೆಯಿಂದಲೇ ಹೆಚ್ಚಿನ ಜನರು ಆಗಮಿಸಿ ಸದ್ಗುರುಗಳ ಗದ್ದುಗೆ ದರ್ಶನ ಪಡೆದುಕೊಂಡರು. ಕೊಪ್ಪಳ, ದಾವಣಗೆರೆ, ಹಾವೇರಿ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಸಿದ್ಧಾರೂಢಸ್ವಾಮಿ ಮಠಕ್ಕೆ ಆಗಮಿಸಿ ದರ್ಶನ ಪಡೆದುಕೊಂಡರು.
ಶ್ರೀ ಸಿದ್ಧಾರೂಢ ಸ್ವಾಮೀಜಿ, ಶ್ರೀ ಗುರುನಾಥಾರೂಢ ಸ್ವಾಮೀಜಿ ಮೂರ್ತಿಗಳಿಗೆ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ಹಾಗೂ ಅಭಿಷೇಕ ಸೇವೆಗಳಿಗೆ ಅವಕಾಶ ನೀಡಲಾಯಿತು. ಮಾಲ್‌ಗಳು ಓಪನ್: ನಗರದಲ್ಲಿನ ಎಲ್ಲ ವಾಣಿಜ್ಯ ಮಾಲ್‌ಗಳು ಸೋಮವಾರದಿಂದ ಬಾಗಿಲು ತೆರೆದಿದ್ದು, ರವಿವಾರವೇ ಮಳಿಗೆದಾರರು ಎಲ್ಲ ಸಿದ್ದತೆ ಹಾಗೂ ಸ್ವತ್ಛತಾ ಕಾರ್ಯ ಮಾಡಿಕೊಂಡಿದ್ದರು. ಕೋಯಿನ್ ರಸ್ತೆ, ಗೋಕುಲ ರಸ್ತೆ, ಕೇಶ್ವಾಪುರ, ವಿದ್ಯಾನಗರಗಳಲ್ಲಿರುವ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು. ಹೋಟೆಲ್‌ಗಳನ್ನೂ ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡಿದ್ದು, ಹೆಚ್ಚಿನ ಹೊಟೇಲ್‌ಗಳಲ್ಲಿ ಜನಜಂಗುಳಿಯಿತ್ತು. ಬಸ್ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿತ್ತು.