Advertisement

ಮಂದಿರ ನೆನಪಿಸಿಕೊಂಡ ಬಿಜೆಪಿ; ಯುಪೀಲಿ ಪ್ರಣಾಳಿಕೆ ಬಿಡುಗಡೆ

03:45 AM Jan 29, 2017 | Team Udayavani |

ಲಕ್ನೋ:  ಐದು ರಾಜ್ಯಗಳ ಚುನಾವಣೆಗಳ ಪೈಕಿ ಪ್ರಮುಖ ರಾಜ್ಯವಾಗಿರುವ ಉತ್ತರ ಪ್ರದೇಶಕ್ಕಾಗಿ ಬಿಜೆಪಿ ಶನಿವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ರಾಮ ಮಂದಿರ ನಿರ್ಮಾಣ, 24 ಗಂಟೆಗಳ ಕಾಲ ವಿದ್ಯುತ್‌ ನೀಡಲು ಕ್ರಮ, ಕೃಷಿ ಸಾಲ ಮನ್ನಾ ಮಾಡುವ ಹಲವು ಘೋಷಣೆಗಳನ್ನು ಮಾಡಿದೆ. ಲೋಕ ಕಲ್ಯಾಣ ಸಂಕಲ್ಪದ ಭರವಸೆ ಎಂಬ ಶಿರೋನಾಮೆಯಲ್ಲಿರುವ 24 ಪುಟಗಳ ಪ್ರಣಾಳಿಕೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬಿಡುಗಡೆ ಮಾಡಿದ್ದಾರೆ.

Advertisement

ಪ್ರತಿಪಕ್ಷಗಳು ಸೋಲೊಪ್ಪಿಕೊಂಡಿವೆ ಎಂದ ಪ್ರಧಾನಿ
ಬಜೆಟ್‌ ಅನ್ನು ಫೆ. 1ರಂದು ಮಂಡಿಸುವುದಕ್ಕೆ ಆಕ್ಷೇಪಿಸಿದ್ದ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ಪಣಜಿಯಲ್ಲಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳು ಈಗಾಗಲೇ ಸೋಲನ್ನು ಒಪ್ಪಿಕೊಂಡಿವೆ ಎಂದು ಲೇವಡಿ ಮಾಡಿದ್ದಾರೆ. ಚುನಾವಣಾ ದಿನಾಂಕ ನಿಗದಿ ಮಾಡುವಲ್ಲಿ ಪ್ರಧಾನಿ ಕಚೇರಿ ಆಯೋಗದ ಮೇಲೆ ಒತ್ತಡ ಹೇರಿದೆ ಎಂಬ ಆಪ್‌ ಟೀಕೆಗೆ  ಪ್ರತಿಕ್ರಿಯೆ ನೀಡಿದ ನರೇಂದ್ರ ಮೋದಿ ಒಂದೇ ದಿನಾಂಕದಂದು ಎರಡು ರಾಜ್ಯಗಳಲ್ಲಿ ಚುನಾವಣೆ ಹೇಗೆಂದು ಕೆಲವರು ಪ್ರಶ್ನಿಸುತ್ತಾರೆಂದರು.

ಇಂದು ಜಂಟಿ ಪ್ರಚಾರ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಜೊತೆಯಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.  ಈ ಮಧ್ಯೆ, ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಸೀಟು ಹಂಚಿಕೆಯ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂದು ಹೇಳಲಾಗಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ ನಾಯಕರ ಭದ್ರಕೋಟೆಗಳು. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ತಮಗೇ ಹೆಚ್ಚಿನ ಸೀಟುಗಳು ಬೇಕು ಎಂಬುದು ಕಾಂಗ್ರೆಸ್‌ನ ಬೇಡಿಕೆ.

ಮನ್‌ಕೀ ಬಾತ್‌ಗೆ ಚುನಾವಣಾ ಆಯೋಗದ ಒಪ್ಪಿಗೆ
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಭಾಷಣ ಮನ್‌ಕೀ ಬಾತ್‌ಗೆ ಕೇಂದ್ರ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದೆ. ಈ ಕಾರ್ಯಕ್ರಮ ಭಾನುವಾರ ಪ್ರಸಾರವಾಗಲಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಮನ್‌ ಕೀ ಬಾತ್‌ ಪ್ರಸಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಅಂಗೀಕರಿಸಿರುವ ಚುನಾವಣಾ ಆಯೋಗ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದೆ. 

ಯೋಗಿ ಆದಿತ್ಯನಾಥ್‌ ಬೆಂಬಲಿಗರ ಸ್ಪರ್ಧೆ
ಉತ್ತರ ಪ್ರದೇಶದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಉತ್ಸಾಹದಲ್ಲಿರುವ ಬಿಜೆಪಿಗೆ ರಾಜ್ಯದ ಪೂರ್ವ ಭಾಗದಲ್ಲಿ ಪೆಟ್ಟು ಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಗೋರಖ್‌ಪುರ ಕ್ಷೇತ್ರದ ಸಂಸದ ಯೋಗಿ ಆದಿತ್ಯನಾಥ್‌ ಬೆಂಬಲಿತ ಹಿಂದೂ ಯುವ ವಾಹಿನಿ ಆರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಸಂಘಟನೆಯ ಬೇಡಿಕೆ ಯೋಗಿ ಆದಿತ್ಯಾನಾಥ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬುದಾಗಿದೆ. ಆದರೆ ಈ ಬಗ್ಗೆ ಬಿಜೆಪಿ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಸಂಘಟನೆಯ ವಕ್ತಾರರು ಹೇಳಿದ್ದಾರೆ. ಇದೇ ವೇಳೆ ಈ ಬೆಳವಣಿಗೆಗಳಿಂದ ದೂರ ಉಳಿದಿರುವ ಯೋಗಿ ಆದಿತ್ಯನಾಥ್‌, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

Advertisement

ಪ್ರಣಾಳಿಕೆಯ ಪ್ರಮುಖಾಂಶಗಳು
ಎಲ್ಲಾ ರೈತರ ಸಾಲ ಮನ್ನಾ, ಮುಂದೆ ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಾಲ
ಕೃಷಿಯ ಅಭಿವೃದ್ಧಿಗಾಗಿ ಮುಂದಿನ 5 ವರ್ಷಕ್ಕೆ 150 ಕೋಟಿ ರೂಪಾಯಿ ಮೀಸಲು
ಬುಂದೇಲ್‌ಖಂಡ್‌ಗೆ ವಿಶೇಷ ಸ್ಥಾನಮಾನ
ಅಧಿಕಾರಕ್ಕೆ ಬಂದ 45 ದಿನಗಳಲ್ಲಿ ಪೆರೋಲ್‌ ಮೇಲೆ ಹೊರಗೆ ಹೋಗಿರುವ ಅಪರಾಧಿಗಳು ಜೈಲಿಗೆ ವಾಪಸ್‌
ಜಾತಿಯ ಬೇಧ ಭಾವವಿಲ್ಲದೇ ಯಾರ ವಿರುದ್ಧ ಪ್ರಕರಣ ದಾಖಲಾದರೂ ಎಫ್ಐಆರ್‌
ಮೆರಿಟ್‌ ಆಧಾರದಲ್ಲಿ ಕ್ಲಾಸ್‌ 3 ಮತ್ತು ಕ್ಲಾಸ್‌ 4 ಉದ್ಯೋಗಿಗಳ ನೇಮಕ. ಸಂದರ್ಶನ ರದ್ದು ಮಾಡಲು ನಿರ್ಧಾರ
ಸ್ಟಾರ್ಟ್‌ಅಪ್‌ ನಿಧಿಗಾಗಿ 1000 ಕೋಟಿ ರೂ. ಶೇ.90 ರಷ್ಟು ಉದ್ಯೋಗ ಉತ್ತರ ಪ್ರದೇಶದವರಿಗೆ
ಜಿಬಿ ಇಂಟರ್ನೆಟ್‌ನೊಂದಿಗೆ ಎಲ್ಲರಿಗೂ ಲ್ಯಾಪ್‌ಟಾಪ್‌
ಶೇ.50ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಮುಂದಿನ 5 ವರ್ಷಗಳಲ್ಲಿ ಎಲ್ಲ ಮನೆಗಳಲ್ಲಿ ಶೌಚಾಲಯ, ಎಲ್‌ಪಿಜಿ ಸೌಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next