Advertisement

ದೇವಸ್ಥಾನಗಳ ಸ್ಥಳ ಒತ್ತುವರಿ ಪ್ರಕರಣಗಳು ಕಡಿಮೆ

12:44 AM Jan 15, 2023 | Team Udayavani |

ಉಡುಪಿ: ರಾಜ್ಯ ಮುಜರಾಯಿ ಇಲಾಖೆಯ ನಿರ್ದೇಶನದಂತೆ ಅಧಿಸೂಚಿತ ದೇವಸ್ಥಾನಗಳ ಜಮೀನು ಸರ್ವೆ ಕಾರ್ಯ ನಡೆಯುತ್ತಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎ ದರ್ಜೆಯ ದೇವಸ್ಥಾನಗಳಲ್ಲಿ 700 ಎಕ್ರೆಗೂ ಅಧಿಕ ಜಮೀನು ಹಾಗೂ ಬಿ- ದರ್ಜೆಯ ದೇವಸ್ಥಾನಗಳಲ್ಲಿ 170 ಎಕ್ರೆಗೂ ಅಧಿಕ ಜಮೀನು ಇರುವುದು ತಿಳಿದು ಬಂದಿದೆ.

Advertisement

ಭೂ ಮಾಪನ ಇಲಾಖೆಯಿಂದ ದೇವಸ್ಥಾನಗಳ ಜಮೀನು ಸರ್ವೆ ನಡೆಯಬೇಕಿದೆ. ಆದರೆ ಸಿಬಂದಿ ಕೊರತೆಯಿಂದ ಸರ್ವೆ ವಿಳಂಬವಾಗುತ್ತಿದ್ದು, ಪರವಾನಿಗೆ ಹೊಂದಿರುವ ಭೂ ಮಾಪಕರನ್ನು ಬಳಸಿಕೊಂಡು ಅಧಿಸೂಚಿತ ಧಾರ್ಮಿಕ ಸಂಸ್ಥೆಗಳ ಜಮೀನು ಅಳತೆ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಇಲಾಖೆಯಿಂದ ಈಗಾಗಲೇ ಸೂಚನೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ 26 ಎ ದರ್ಜೆಯ ದೇವಸ್ಥಾನಗಳ ಸ್ವಾಧೀನದಲ್ಲಿ 237.4 ಎಕ್ರೆಗೂ ಅಧಿಕ ಭೂಮಿಯಿದೆ. 7 ಬಿ-ದರ್ಜೆಯ ದೇವಸ್ಥಾನದ ವ್ಯಾಪ್ತಿಯಲ್ಲಿ 71.99 ಎಕ್ರೆ ಜಮೀನಿದೆ. ದ.ಕ. ಜಿಲ್ಲೆಯಲ್ಲಿ 43 ಎ ದರ್ಜೆಯ ದೇವಸ್ಥಾನಗಳಿದ್ದು, 467.99 ಎಕ್ರೆ ಜಮೀನು ಹೊಂದಿವೆ. ಬಿ- ದರ್ಜೆಯ 37 ದೇವಸ್ಥಾನಗಳಲ್ಲಿ 77 ಎಕ್ರೆ ಭೂಮಿಯಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಬಹುತೇಕ ದೇವಸ್ಥಾನಗಳು ತಮ್ಮದೇ ಜಮೀನು ಹೊಂದಿದ್ದರೂ ಸರಿಯಾದ ದಾಖಲೆಗಳು ಇಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸರ್ವೆ ಆಗಿಲ್ಲ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಸ್ತುತ 205 ಎ- ದರ್ಜೆಯ ಹಾಗೂ 193 ಬಿ ದರ್ಜೆಯ ದೇವಸ್ಥಾನಗಳು ಹೊಂದಿರುವ ಆಸ್ತಿಯ ಪಟ್ಟಿಯನ್ನು ಇಲಾಖೆಯಿಂದಲೇ ಸಿದ್ಧಪಡಿಸಲಾಗಿದೆ ಮತ್ತು ಸರ್ವೆ ಕಾರ್ಯವೂ ನಡೆಯುತ್ತಿದೆ.

ಒತ್ತುವರಿ ಆರೋಪ
ದೇವಸ್ಥಾನದ ಜಮೀನನ್ನು ಸಂಘ ಸಂಸ್ಥೆಗಳು ತಮ್ಮ ಅಧೀನಕ್ಕೆ ಪಡೆದುಕೊಳ್ಳುತ್ತಿರುವುದು ಈಗಾಗಲೇ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಒತ್ತುವರಿಯಾಗಿರುವ ಜಮೀನು, ಸ್ಥಿರಾಸ್ತಿಗಳ ತೆರವಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ 5,720 ದೇವಸ್ಥಾನಗಳ ಬಾಬ್ತು¤ ಅಳತೆ ಮಾಡಲಾಗಿದೆ. 302. 26 ಎಕ್ರೆ ಜಮೀನು ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿಗಳಿಗೆ ಸೂಚನೆ
ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ದೇವಸ್ಥಾನದ ಜಮೀನು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅದರಂತೆ ಸರ್ವೆಕಾರ್ಯ ಪೂರ್ಣಗೊಂಡಿರುವ ಅಥವಾ ಒತ್ತುವರಿ ಸಾಬೀತಾಗಿರುವ ಕಡೆಗಳಲ್ಲಿ ತೆರವು ಪ್ರಕ್ರಿಯೆ ನಡೆಯುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ತೀರ ಕಡಿಮೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next