ಶಿಡ್ಲಘಟ್ಟ: ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ತಲದುಮ್ಮನಹಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಕಳ್ಳರು ಎರಡು ದೇವಾಲಯ ಮತ್ತು ಮನೆಯೊಂದಕ್ಕೆ ನುಗ್ಗಿ ಸುಮಾರು 2 ಲಕ್ಷ ರೂಗಳ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಶ್ರೀ ವೇಣುಗೋಪಾಲ್ ಸ್ವಾಮಿ ದೇವಾಲಯದ ಬಾಗಿಲು ಮೀಟಿ ಒಳನುಗ್ಗಿದ್ದ ಕಳ್ಳರು ದೇವಾಲಯದ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಸುಮಾರು 1.5 ಲಕ್ಷ ರೂಗಳು ದೋಚಿ ಪರಾರಿಯಾಗಿದ್ದಾರೆ ಮತ್ತೊಂದು ಪ್ರಕರಣದಲ್ಲಿ ಅದೇ ಗ್ರಾಮದಲ್ಲಿ ಶ್ರೀ ಚೌಡೇಶ್ವರಮ್ಮ ದೇವಾಲಯದಲ್ಲಿ ಬಾಗಿಲು ಮುರಿಯಲು ವಿಫಲ ಯತ್ನ ನಡೆಸಿ ವಿದ್ಯುತ್ ದೀಪವನ್ನು ಹೊಡೆದು ಬಂದಿದ್ದ ಕೆಲಸಕ್ಕೆ ಸುಂಕವಿಲ್ಲದಂತೆ ಪಲಾನಯನಗೊಂಡಿದ್ದಾರೆ.
ಇದನ್ನೂ ಓದಿ:12ವರ್ಷಗಳಿಗೊಮ್ಮೆ ಅರಳುವ ಅಪರೂಪದ ನೀಲ ಕುರುಂಜಿ ಹೂವು
ನಂತರ ಗ್ರಾಮದಲ್ಲಿರುವ ಪ್ರಭಾಕರ್ ಎಂಬುವರು ತಮ್ಮ ತೋಟದ ಮನೆಗೆ ಹೋಗಿದ್ದ ಸಂದರ್ಭದಲ್ಲಿ ವಾಸ ಮಾಡುವ ಮನೆಗೆ ನುಗ್ಗಿದ ಕಳ್ಳರು ನಗದು ದೋಚಲು ಹುಡುಕಾಟ ನಡೆಸಿದ್ದಾರೆ ಏನು ಸಿಗದೆ ಹತಾಶಗೊಂಡ ಕಳ್ಳರು ಮನೆಯಲ್ಲಿದ್ದ ವಸ್ತುಗಳು ಮತ್ತು ಸಾಮಾಗ್ರಿಗಳನ್ನು ಚಲ್ಲಾಪಿಳ್ಳಿ ಮಾಡಿ ಕಾಲ್ಕಿತ್ತಿದ್ದಾರೆ ಗ್ರಾಮದಲ್ಲಿ ಎರಡು ದೇವಾಲಯಗಳು ಮತ್ತು ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಸಿರುವ ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಶ್ರೀ ವೇಣುಗೋಪಾಲ್ ಸ್ವಾಮಿ ದೇವಾಲಯದಲ್ಲಿ ಬೆಲೆಬಾಳುವ ವಿಗ್ರಹಗಳು ಹಾಗೂ ಇನ್ನಿತರೆ ವಸ್ತುಗಳಿದ್ದರು ಸಹ ಕಳ್ಳರು ಹುಂಡಿಯನ್ನು ಹೊಡೆದು ನಗದು ದೋಚಿ ಪರಾರಿಯಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಈ ಸಂಬಂಧ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.