Advertisement

ದೇಗುಲ ಬಂದ್‌ ಮಾಡಿ, ಮಾರುಕಟ್ಟೆ ಮರೆತರು!

04:39 PM Aug 13, 2021 | Team Udayavani |

ಕೋಲಾರ: ಕೋವಿಡ್‌ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಅನುಭವಿಸಿದ ಕೋಲಾರ ಜಿಲ್ಲೆ ಮೂರನೇ ಅಲೆ ಎದುರಿಸಲು ಸಜ್ಜಾಗುತ್ತಿದೆ. ಆದರೂ, ಮಾರುಕಟ್ಟೆ ಜನಜಂಗುಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕಕ್ಕೆಕಾರಣವಾಗುತ್ತಿದೆ.

Advertisement

ಆಷಾಢ ಮತ್ತು ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಜನ ದಟ್ಟಣೆಯಿಂದ ಮಾರುಕಟ್ಟೆ ಪ್ರದೇಶದಲ್ಲಿ ಸೇರುವುದು ಹಿಂದಿನ ವರ್ಷಗಳ ಅನುಭವದಿಂದಲೇ ಗ್ರಹಿಸಬಹುದು. ಆದರೆ, ಕೋವಿಡ್‌ ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳಲ್ಲಿ ಒಂದಷ್ಟು ಸೌಲಭ್ಯಗಳನ್ನು ಕಲ್ಪಿಸಲು ಮಾತ್ರವೇ ಗಮನಹರಿಸಿರುವ ಆರೋಗ್ಯಇಲಾಖೆಯು ಮಾರುಕಟ್ಟೆ
ಜನಜಂಗುಳಿ ನಿಯಂತ್ರಣದಿಂದಕೋವಿಡ್‌ ಹರಡುವಿಕೆ ಸ್ಫೋಟ ತಡೆಯಬಹುದು ಎಂಬುದರತ್ತ ಚಿತ್ತ ಹರಿಸಿಲ್ಲ.

ಆಸ್ಪತ್ರೆಗೆ ಸೌಲಭ್ಯ: ಈಗಾಗಲೇ ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಒಂದಷ್ಟು ಸೌಲಭ್ಯವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸುತ್ತಿದೆ. ಪ್ರತಿ ಆಸ್ಪತ್ರೆಗಳಿಗೂ ಆಮ್ಲಜನಕ ಉತ್ಪಾದನಾ ಘಟಕಗಳ ಅಳವಡಿಕೆ. ಪ್ರತಿ ಆಸ್ಪತ್ರೆಯಲ್ಲಿಯೂ ಮಕ್ಕಳ ವಾರ್ಡ್‌ಗಳ ಸ್ಥಾಪನೆ. ಮಕ್ಕಳಿಗಾಗಿಯೇ ಪ್ರತ್ಯೇಕ ಬೆಡ್‌ಗಳ ಅಳವಡಿಕೆ. ಆಮ್ಲಜನಕ ನೀಡುವ ಕುರಿತು ವೈದ್ಯಾಧಿ
ಕಾರಿಗಳಿಗೆ ಪ್ರಾತ್ಯಕ್ಷಿಕೆ. ಇತ್ಯಾದಿ ಸೌಲಭ್ಯಗಳನ್ನುಕಲ್ಪಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಗುರುವಾರ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳನ್ನು ಭೇಟಿ ಮಾಡಿ ಕೋವಿಡ್‌ ಮೂರನೇ ಅಲೆ ಎದುರಿಸಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:ಐಪಿಎಲ್ ಗೆ ಸಿದ್ದತೆ ಜೋರು: ದುಬೈ ವಿಮಾನವೇರಿದ ಧೋನಿ ತಂಡ

ಹೊರ ಜಿಲ್ಲೆಯಿಂದ ಬಂದವರ ಮೇಲೆ ನಿಗಾ:ಕೋಲಾರ ಜಿಲ್ಲೆಯು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಹೊಂದಿದ್ದು. ಬೇರೆ ಜಿಲ್ಲೆಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬರುವ ವಲಸಿಗರ ಮೇಲೆ ನಿಗಾ ಇಡಲಾಗಿದೆ. ಹೀಗೆಬಂದವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಅದರಲ್ಲೂ ಕೋವಿಡ್‌ ಹೆಚ್ಚಳವಿರುವ ಕೇರಳದಿಂದ ಬಂದವರ ಮೇಲೆಕಣ್ಣಿಡಲಾಗುತ್ತಿದೆ. ನಿತ್ಯವೂ ಮೂರು ಸಾವಿರಕ್ಕಿಂತಲೂ ಅಧಿಕ ಕೋವಿಡ್‌ ತಪಾಸಣೆ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆಯ ಮೇಲೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಜಿಲ್ಲಾ ಪ್ರವೇಶ ಗಡಿಗಳಲ್ಲಿ ಕೋವಿಡ್‌ ತಪಾಸಣಾ ಚೆಕ್‌ ಪಾಯಿಂಟ್‌ ಗಳನ್ನು ಇಡಲು ಸೂಚಿಸಲಾಗಿದೆ.

Advertisement

ರಾತ್ರಿ 9ಕ್ಕೆ ಅಂಗಡಿ ಬಂದ್‌: ರಾಜ್ಯ ಸರ್ಕಾರ ಆದೇಶಿರುವಂತೆ ಕೋಲಾರ ಜಿಲ್ಲೆಯಲ್ಲಿ ರಾತ್ರಿ 9ಕ್ಕೆ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು ಬಂದ್‌ ಮಾಡಿಸಲಾಗುತ್ತಿದೆ. ಆದರೆ, ಹಿಂದಿನ2ನೇ ಅವಧಿಯಲ್ಲಿ ಮಾಡಿದಂತೆ ವ್ಯಾಪಾರ ಬಂದ್‌ ಕಡ್ಡಾಯ ಮಾಡಿಲ್ಲ.ಈ ವಿಚಾರದಲ್ಲಿ ಪೊಲೀಸರು ಕೊಂಚ ಉದಾರತೆ ತೋರಿಸುತ್ತಿದ್ದಾರೆ. ಇದರಿಂದ ರಾತ್ರಿ 10ರವರೆಗೂ ಕೋಲಾರ ನಗರದಲ್ಲಿಯೇ ಬೀದಿ ಬದಿಯ ಅಂಗಡಿಗಳ ವ್ಯಾಪಾರ ನಡೆಯುತ್ತಲೇ ಇದೆ.

ದೇವಾಲಯ ಬಂದ್‌:ಕೋವಿಡ್‌ ಮೂರನೇ ಅಲೆ ತಡೆಯಲು ಜಿಲ್ಲಾಡಳಿತ ಈಗಾಗಲೇ ಆದೇಶವೊಂದನ್ನು ಹೊರಡಿಸಿದ್ದು, ಕೋಲಾರ ಜಿಲ್ಲೆಯಲ್ಲಿ ಆಷಾಢ ಮತ್ತು ಶ್ರಾವಣ ಮಾಸದ ಹಬ್ಬಗಳ ಸಂದರ್ಭದಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ದೇವಾಲಯ ಗಳೆಲ್ಲವನ್ನೂ ಬಂದ್‌ ಮಾಡಿಸುವಂತೆ ಸೂಚಿಸಲಾಗಿದೆ. ವಾರಾಂತ್ಯ, ಶ್ರಾವಣ ಶುಕ್ರವಾರ, ಶನಿವಾರ, ಭಾನುವಾರಗಳಿಗೆ ಅದು ಅನ್ವಯವಾಗುತ್ತಿದೆ. ಇದರಿಂದ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿಯಂತ್ರಣವಾಗಲಿದೆ.

ಮಾರುಕಟ್ಟೆ ಬಂದ್‌ ಇಲ್ಲ!: ಇಷ್ಟೆಲ್ಲಾ ಕೋವಿಡ್‌ ಮೂರನೇ ಅಲೆಯ ನಿಯಂತ್ರಣ ಕ್ರಮ ತೆಗೆದುಕೊಳ್ಳುತ್ತಿರುವ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯು ಮಾರುಕಟ್ಟೆ ಗಳ ಮೇಲೆ ಇದುವರೆಗೂ ಯಾವುದೇ ನಿಯಂತ್ರಣ ಕ್ರಮ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮುಂದಿನ ವಾರ ಆಚರಿಸಲಿರುವ ವರಮಹಾಲಕ್ಷ್ಮಿ ‌ಹಬ್ಬವನ್ನುಕೋಲಾರ ಜಿಲ್ಲೆಯ ಜನರು ಸಡಗರ ಸಂಭ್ರಮದಿಂದ ಆಚರಣೆ
ಮಾಡುತ್ತಾರೆ. ಈ ಹಬ್ಬದ ತಯಾರಿಗಾಗಿ ವಾರದಿಂದಲೇ ಬಟ್ಟೆ ಖರೀದಿ ಜೋರಾಗಿ ನಡೆಯುತ್ತೆ. ಹಬ್ಬದ ಹಿಂದಿನ ಮೂರು ನಾಲ್ಕು ದಿನಗಳಿಂದಲೇ ಮಾರುಕಟ್ಟೆಗಳಿಗೆ ಮುಗಿ ಬೀಳುವ ಜನರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ .ಹಬ್ಬದ ಹಿಂದಿನ ದಿನ ಹೂವಿನ ಮಾರುಕಟ್ಟೆ ಗಿಜಿಗುಡುತ್ತದೆ ‌ . ಇದೇ ರೀತಿಯ ವಾತಾವರಣ ಗಣೇಶ ಹಬ್ಬದ ಸಂದರ್ಭದಲ್ಲಿಯೂ ಕಂಡು ಬ‌ರುತ್ತದೆ. ಈ ಹಬ್ಬಗಳ ‌ ಪರಿಣಾಮದಿಂದ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಇದೆ. ಬಟ್ಟೆ ಅಂಗಡಿಗಳು ತುಂಬಿ ತುಳುಕುತ್ತಿವೆ. ದಿನಸಿ, ಆಭರಣ ಅಂಗಡಿಗಳಲ್ಲೂ ಜನ ತುಂಬಿ ತುಳುಕಾಡುತ್ತಿದ್ದಾರೆ. ಜೊತೆಗೆ ಎಪಿಎಂಸಿ, ರೇಷ್ಮೆ ಮಾರುಕಟ್ಟೆಗಳಲ್ಲೂ ವಹಿವಾಟು ಜನಜಂಗುಳಿಯಿಂದಲೇ ನಡೆಯುತ್ತಿದೆ.ಕೋವಿಡ್‌ ಸಾಮಾಜಿಕ ಅಂತರ ಪಾಲಿಸದಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದು ದೃಢಪಟ್ಟಿದ್ದರೂ ಜನರು ಮೈಮರೆತಂತೆ ವ್ಯಾಪಾರದಲ್ಲಿ ತೊಡಗುತ್ತಿರುವುದು ನಿತ್ಯದ ದೃಶ್ಯವಾಗಿ ಮಾರುಕಟ್ಟೆ ಪ್ರದೇಶದಲ್ಲಿ ಕಾಣಿಸುತ್ತಿದೆ.. ಜಿಲ್ಲೆಗೆ ಕೋವಿಡ್‌ ಮೂರನೇ ಅಲೆ,ಡೆಲ್ಟಾ ರೂಪಾಂತರಿ ವೈರಸ್‌ ಕಾಲಿಡಲು ಹಬ್ಬಗಳೇ ಕಾರಣ ಆಗುವ ಅಪಾಯವಿದೆ.

ಜನಜಂಗುಳಿ ಸೇರದಂತೆ ನಿರ್ಬಂಧ ವಿಧಿಸಿ
ಈಗ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ಕಠಿಣಕ್ರಮಗಳ ಜೊತೆಗೆ, ಮಾರುಕಟ್ಟೆಯ ಮೇಲೆ ಜನಜಂಗುಳಿ ಸೇರದಂತೆ ನಿರ್ಬಂಧ ಹೇರಬೇಕಾಗಿದೆ. ಏಕೆಂದರೆ, ವರಮಹಾಲಕ್ಷ್ಮಿ ಹಬ್ಬ ಮತ್ತು ಗಣೇಶ ಹಬ್ಬಗಳ ಸಂದರ್ಭದಲ್ಲಿ ದೇವಾಲಯ ಪ್ರವೇಶಕ್ಕಿಂತಲೂ ಮನೆ ಪೂಜೆಗೆ ಆದ್ಯತೆ. ಇದರಿಂದ ಇಡೀ ಜಿಲ್ಲೆಯಲ್ಲಿ ಮಾರುಕಟ್ಟೆಯಲ್ಲಿ ಜನರ ಗಿಜಿಗಿಡುವಿಕೆ ಹೆಚ್ಚಾಗಿರುತ್ತದೆ. ಮಾರುಕಟ್ಟೆಯನ್ನು ತೆರೆದಿಟ್ಟು ಅಂತರ ಪಾಲಿಸಿ ಎಂದು ಜನರಿಗೆ ಬಿಡುವುದಕ್ಕಿಂತಲೂ ಮಾರುಕಟ್ಟೆ ವಹಿವಾಟನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿದೆ. ಆರೋಗ್ಯವಾಗಿದ್ದರೆ ಹಬ್ಬವನ್ನು ಮುಂದಿನ ವರ್ಷ ಮಾಡಬಹುದು ಎಂಬುದನ್ನು ಜನತೆಗೆ ಮನದಟ್ಟು ಮಾಡಿಸಬೇಕಾಗಿದೆ.
ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಕಾರ್ಯಚರಣೆ ಸದ್ಯಕ್ಕೆ ನಿಂತಂತಿದ್ದು, ಇದನ್ನು ಮತ್ತೆ ಆರಂಭಿಸಬೇಕಾಗಿದೆ. ಜನ ಹೆಚ್ಚು ಸೇರುವ ಮಾರುಕಟ್ಟೆಗಳಲ್ಲಿ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನೇಮಿಸಿ ಜನರ ಚಲನವಲನಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಏಕೆಂದರೆ ಕೋಲಾರ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಈಗಲೂ ಶೇ.1.17 ಇದ್ದು, ಮರಣ ಪ್ರಮಾಣ ಶೇ.1.30 ಇದೆ.

ಸರ್ಕಾರಿ ಆದೇಶ
ಕೋವಿಡ್‌ ಮೂರನೇ ಅಲೆ ನಿಯಂತ್ರಣ ದೃಷ್ಟಿಯಿಂದ ಸರಕಾರವು ಆ.12 ರಂದು ಆಗಸ್ಟ್‌, ಸೆಪ್ಟೆಂಬರ್‌ ಮಾಹೆಯ ಹಬ್ಬಗಳ ಸಂದರ್ಭದಲ್ಲಿ
ಕೋವಿಡ್‌ ಸೋಂಕು ನಿಯಂತ್ರಣ ಮಾರ್ಗಸೂಚಿ ಪ್ರಕಟಿಸಿದ್ದು, ಅದರ ಅನ್ವಯ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಡಳಿತ ವರಮಹಾಲಕ್ಷ್ಮಿ, ಗಣೇಶ ಹಾಗೂ ಮೊಹರಂ, ಶ್ರಾವಣ ಮೂರನೇ ನಾಲ್ಕನೇ ಶನಿವಾರದಂದು ಮಾರುಕಟ್ಟೆ ಜನದಟ್ಟಣೆ ಪ್ರದೇಶಗಳಲ್ಲಿ ಕ್ರಮ ಜರುಗಿಸಬೇಕಾಗಿದೆ.

ಸರ್ಕಾರ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕೋವಿಡ್‌-19 ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. 3ನೇ ಅಲೆ ಕೋವಿಡ್‌-19ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುವಬಗ್ಗೆಈಗಾಗಲೇ ತಜ್ಞರು ವರದಿ ನೀಡಿರುವುದರಿಂದ ಈ ನಿಟ್ಟಿನಲ್ಲಿ ಸೌಲಭ್ಯಗಳನ್ನುಕಲ್ಪಿಸಲಾಗುತ್ತಿದೆ.
– ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವರು,

ಮೂರನೇ ಅಲೆ ಎದುರಿಸಲು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡುತ್ತಿದ್ದಾರೆ. ಅದರಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆಸ್ಪತ್ರೆಗಳಿಗೆ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕಾಗಿಆಮ್ಲಜನಕ ಘಟಕಗಳ ಸ್ಥಾಪಿಸಿ, ಮಕ್ಕಳ ವಾರ್ಡ್‌ಗಳನ್ನು
ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುತ್ತಿದೆ.
– ಡಾ.ಜಗದೀಶ್‌, ಡಿಎಚ್‌ಒ, ಕೋಲಾರ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next