ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇನ್ನು ಒಂದು ವಾರ ಬಾಕಿ ಉಳಿದಿದೆ. ಅದಕ್ಕೆ ಪೂರಕವಾಗಿ ಕರ್ನಾಟಕ ಸಹಿತ ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿಯ ನಾಯಕರು ದೇವಸ್ಥಾನ ಸ್ವತ್ಛತೆ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಕಸಬರಿಕೆ ಹಿಡಿದು ಗುಡಿಸಿದ್ದಾರೆ. ಕೆಲವು ನಾಯಕರು ವಿವಿಧ ಸ್ಥಳಗಳಲ್ಲಿ ನೆಲ ಒರೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಜ. 12ರಂದು ನಾಶಿಕ್‌ನಲ್ಲಿ ದೇಗುಲ ಶುಚಿ ಮಾಡಿದ್ದ ವೇಳೆ ದೇಶಾದ್ಯಂತ ಇದೇ ಮಾದರಿ ಅಭಿಯಾನಕ್ಕೆ ಕರೆ ನೀಡಿದ್ದರು.
ಹೊಸದಿಲ್ಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ಮಂದಿರದಲ್ಲಿ ಕಸಬರಿಕೆ ಹಿಡಿದು ಗುಡಿಸಿ, ಒರೆಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸ್ವತ್ಛತೆ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾನೆ. ಈ ಕಾರ್ಯಕ್ರಮ ಜ. 22ರ ವರೆಗೆ ನಡೆಯಲಿದೆ. ಇದರ ಜತೆಗೆ ಭಜನೆ, ಕೀರ್ತನೆಗಳನ್ನು ಹಾಡುವ ಕಾರ್ಯಕ್ರಮಗಳನ್ನೂ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ಶುಚಿತ್ವ ಆಂದೋಲನದಲ್ಲಿ ಭಾಗವಹಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಪ್ರಧಾನಿ ಮೋದಿಯವರ ಕರೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶುಚಿತ್ವದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಯೋಧ್ಯೆಯಲ್ಲಿ ಕೂಡ ಅದನ್ನು ನಡೆಸಲಾಗಿದೆ’ ಎಂದಿದ್ದಾರೆ. ಲಕ್ನೋದಲ್ಲಿ ಉ.ಪ್ರ. ಡಿಸಿಎಂ ಬೃಜೇಶ್ ಪಾಠಕ್ ಕಾರ್ಯತರ್ತರು, ಮುಖಂಡರ ಜತೆಗೂಡಿ ದೇಗುಲದ ನೆಲವನ್ನು ಒರೆಸಿದ್ದಾರೆ.
ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಉಜ್ಜಯಿನಿಯ ರಾಮ ಜನಾರ್ದನ ದೇಗುಲದಲ್ಲಿ ಕಸ ಗುಡಿಸಿದ್ದಾರೆ. ಗುಜರಾತ್, ರಾಜಸ್ಥಾನ ಸಿಎಂಗಳಾದ ಭೂಪೇಂದ್ರ ಪಟೇಲ್, ಭಜನ್‌ಲಾಲ್ ಶರ್ಮಾ ಕೂಡ ತಮ್ಮ ರಾಜ್ಯಗಳಲ್ಲಿ ದೇಗುಲ ಸ್ವತ್ಛಗೊಳಿಸಿ ಶುಚಿತ್ವದ ಮಹತ್ವ ಸಾರಿದ್ದಾರೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಒಡಿಶಾದ ಬಾಲೇಶ್ವರದಲ್ಲಿ, ಧರ್ಮೇಂದ್ರ ಪ್ರಧಾನ್ ಹೊಸದಿಲ್ಲಿಯಲ್ಲಿ ಸ್ವತ್ಛತೆ ಅಭಿಯಾನದಲ್ಲಿ ಭಾಗವಹಿಸಿದ್ದರು. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಶಾ ಅವರು ಅರ್ಗತಾದಲ್ಲಿರುವ ಜಗನ್ನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.