ವಿಶ್ವಸಂಸ್ಥೆ: ಜಾಗತಿಕ ತಾಪಮಾನವು ನಾವು-ನೀವು ಮಾಡುವ ಕೆಲಸದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ತಾಪಮಾನ ಏರಿಕೆಯಿಂದಾಗಿ 2030ರ ವೇಳೆಗೆ ಭಾರತವು ಶೇ.5.8ರಷ್ಟು ಕೆಲಸದ ಅವಧಿಯನ್ನು ಕಳೆದುಕೊಳ್ಳಲಿದೆ. ಅಂದರೆ 3.40 ಕೋಟಿ ಪೂರ್ಣಪ್ರಮಾಣದ ಉದ್ಯೋಗಕ್ಕೆ ಸಮನಾದ ಉತ್ಪಾದಕತೆಯ ನಷ್ಟವನ್ನು ದೇಶ ಅನುಭವಿಸಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
“ಬಿಸಿ ತಾಪಮಾನದಲ್ಲಿ ಕೆಲಸ- ಕಾರ್ಮಿಕರ ಉತ್ಪಾದಕತೆ ಮತ್ತು ಶಿಸ್ತಿನ ಕೆಲಸದ ಮೇಲೆ ಉಷ್ಣತೆಯಿಂದಾಗಿ ಉಂಟಾಗುವ ಒತ್ತಡದ ಪರಿಣಾಮ’ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ.
ಅದರ ಪ್ರಕಾರ, ಅತಿಯಾದ ತಾಪಮಾನ ದಿಂದಾಗಿ ಉದ್ಯೋಗಿಗಳಿಗೆ ಕೆಲಸ ಮಾಡು ವುದೇ ಅಸಾಧ್ಯ ಎಂಬಂಥ ಸ್ಥಿತಿ ನಿರ್ಮಾಣ ವಾಗಲಿದೆ ಅಥವಾ ಉದ್ಯೋಗಿಗಳು ನಿಧಾನಗತಿಯಲ್ಲಿ ಕೆಲಸ ಮಾಡಬೇಕಾಗಿ ಬರಲಿದೆ. ಹೀಗಾಗಿ, ಪ್ರತಿ ವರ್ಷ ಜಗತ್ತಿನಲ್ಲಿ ಒಟ್ಟಾರೆ ಕೆಲಸದ ಅವಧಿಯ ಶೇ.2ಕ್ಕಿಂತಲೂ ಹೆಚ್ಚು ಸಮಯವು ನಷ್ಟವಾಗಿ ಹೋಗಲಿದೆ ಎಂದು ಹೇಳಲಾಗಿದೆ.
ತಾಪಮಾನದ ಒತ್ತಡದಿಂದ 2030ರ ವೇಳೆ ಜಗತ್ತಿಗೆ ಸುಮಾರು 2,400 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಟಾಗಲಿದೆ. ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಾ ಸಾಗುವ ಕಾರಣ, ಈ ಕೂಡಲೇ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕದೇ ಹೋದರೆ, ಈ ಮೊತ್ತವು ಇನ್ನಷ್ಟು ಏರಿಕೆ ಕಾಣಲಿದೆ ಎಂದೂ ವರದಿ ಎಚ್ಚರಿಸಿದೆ.