Advertisement
ನವೆಂಬರ್ ತಿಂಗಳ ಪೂರ್ತಿ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವಂತೆ ಜಿಲ್ಲಾಡಳಿತ ನೀಡಿದ ಸೂಚನೆಗೂ ಇಲ್ಲಿನ ಚಿತ್ರ ಮಂದಿರಗಳ ಮಾಲೀಕರು ಬಗ್ಗಲಿಲ್ಲ. ಅತ್ತ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಕೊಟ್ಟು ಕನ್ನಡ ಪರ ಸಂಘಟನೆಗಳು ತೆಲುಗು ಭಾಷಾ ಚಿತ್ರಗಳ ಪ್ರದರ್ಶನಕ್ಕೆ ತೆಲೆ ಕೆಡಿಸಿಕೊಳ್ಳದೇ ಸುಮ್ಮನಾದ ಕಾರಣ ರಾಜ್ಯೋತ್ಸವ ತಿಂಗಳ ಮೊದಲ ದಿನವೇ ಜಿಲ್ಲೆಯಲ್ಲಿ ಪರ ಭಾಷಾ ಚಿತ್ರಗಳು ಕೇಕೆ ಹಾಕುವಂತೆ ಆಯಿತು.
Related Articles
Advertisement
ಕನ್ನಡ ಚಿತ್ರ ಪ್ರದರ್ಶಿಸಬಹುದು. ಕಡ್ಡಾಯವಲ್ಲ ಅಂತೆ..
ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಹೇಳಿದೆ. ನೀವು ತೆಲುಗು ಭಾಷೆಯ ಚಿತ್ರಗಳ ಪ್ರದರ್ಶನ ಮುಂದುವರೆಸಿದ್ದೀರಲ್ಲಾ ಎಂದು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರ ಮಂದಿರದ ವ್ಯವಸ್ಥಾಪಕ ವೇಣುರನ್ನು ಪ್ರಶ್ನಿಸಿದರೆ, ಯಾವುದೇ ಭಾಷೆಯ ಚಿತ್ರವನ್ನು ನಾವು ಪ್ರದರ್ಶಿಸಬಹುದು. ಕನ್ನಡ ಚಿತ್ರ ಪ್ರದರ್ಶಿಸಬೇಕೆಂಬ ಕಡ್ಡಾಯ ಇಲ್ಲ ಎಂದರು. ಬಾಲಾಜಿ ಚಿತ್ರ ಮಂದಿರದಲ್ಲಿ ತೆಲುಗು ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಪ್ರೇಕ್ಷಕರು ಬರಲ್ಲ ಎಂಬ ಆರೋಪ : ಕನ್ನಡ ಚಿತ್ರಗಳನ್ನು ಪ್ರದರ್ಶಿಸಬಹುದು. ಆದರೆ ನಾವು ನಿರೀಕ್ಷಿಸಿದಷ್ಟು ಪ್ರೇಕ್ಷಕರು ಸಿನಿಮಾ ನೋಡಲಿಕ್ಕೆ ಬರಲ್ಲ. ಚಿತ್ರ ಮಂದಿರ ನಿರ್ವಹಣೆಗೆ ತಗುಲುವ ವೆಚ್ಚವಾದರೂ ನಮಗೆ ಬರಬೇಕಲ್ಲ. ಸುಮ್ಮನೆ ಕನ್ನಡ ಚಿತ್ರ ಹಾಕಿ ಎನ್ನುತ್ತಾರೆ. ಒತ್ತಾಯ ಮಾಡುವರೇ ಚಿತ್ರ ಮಂದಿರಗಳಿಗೆ ಬಂದು ಚಿತ್ರಗಳನ್ನು ವೀಕ್ಷಣೆ ಮಾಡುವುದಿಲ್ಲ. ಕಳೆದ ವರ್ಷ ಕನ್ನಡ ಚಿತ್ರಗಳನ್ನು ಸಾಕಷ್ಟು ಪ್ರದರ್ಶನ ಮಾಡಿದೆವು. ಈಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ಆದರೆ ನಾವು ನಿರೀಕ್ಷಿದಷ್ಟು ಪ್ರೇಕ್ಷಕರು ಬರಲ್ಲ ಎಂದು ನಗರದ ವಾಣಿ ಚಿತ್ರದ ಮಂದಿರದಲ್ಲಿ ಟಿಕೆಟ್ ಹಂಚಿಕೆ ಮಾಡುವ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಉದಯವಾಣಿಗೆ ತಿಳಿಸಿದರು.
-ಕಾಗತಿ ನಾಗರಾಜಪ್ಪ