Advertisement

ರಾಜ್ಯೋತ್ಸವ ತಿಂಗಳಲ್ಲಿ ತೆಲುಗು ಚಿತ್ರ ಪ್ರದರ್ಶನ

04:07 PM Nov 11, 2019 | Suhan S |

ಕೋಲಾರ: ಕರ್ನಾಟಕ ರಾಜ್ಯೋತ್ಸವದ ನವೆಂಬರ್‌ ಪೂರ್ತಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂಬ ಜಿಲ್ಲಾಧಿಕಾರಿಗಳ ಸಭೆಯ ನಿರ್ಧಾರವನ್ನು ನಗರದ ಎರಡು ಚಿತ್ರಮಂದಿರಗಳು ಧಿಕ್ಕರಿಸುವ ಮೂಲಕ ಸವಾಲು ಎಸೆದಿವೆ.

Advertisement

ನಗರದ ಪ್ರಭಾತ್‌ ಮತ್ತು ಶಾರದಾಚಿತ್ರಮಂದಿರಗಳು ಶುಕ್ರವಾರದಿಂದ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಮುಂದಾಗುವ ಮೂಲಕ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ನಿರ್ಧಾರವನ್ನು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆ. ಗಡಿ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಕನ್ನಡ ಚಿತ್ರಗಳಿಗೆ ಸಾಕಷ್ಟು ಬೇಡಿಕೆ ಇವೆ. ಕನ್ನಡ ಚಿತ್ರಗಳು ನಾಲ್ಕೈದು ವಾರಗಳ ಪ್ರದರ್ಶನ ಕಾಣುತ್ತಿರುವುದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಆದರೆ, ಚಿತ್ರಮಂದಿರಗಳ ಮಾಲಿಕರು ಹಾಗೂ ಚಿತ್ರ ಪ್ರದರ್ಶಕರು ಸತತವಾಗಿ ತೆಲುಗು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕೋಲಾರ ಕನ್ನಡ ಚಿತ್ರಪ್ರೇಮಿಗಳನ್ನು ನಿರಾಸೆಗೊಳಿಸುತ್ತಿದ್ದಾರೆ. ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ.

ಜನರಿಲ್ಲ ಸಬೂಬು: ಕೋಲಾರದಲ್ಲಿ ಕನ್ನಡ ಚಿತ್ರಗಳನ್ನು ಜನ ನೋಡುವುದಿಲ್ಲವೆಂಬ ಸಬೂಬು ಚಿತ್ರಮಂದಿರಗಳದ್ದಾಗಿದೆ. ಆದರೆ, ಶುಕ್ರವಾರದಿಂದ ಪ್ರಭಾತ್‌ ಚಿತ್ರಮಂದಿರದ ಗಜೇಂದ್ರುಡು ಮತ್ತು ಶಾರದಾ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿರುವ ಹೊಸ ಬಿಡುಗಡೆಯ ಏಡು ಚಾಪಲ ಕಥ ತೆಲುಗು ಚಿತ್ರಗಳಿಗೂ ಜನರಿಲ್ಲವೆನ್ನುವುದು ಗಮನಾರ್ಹ.

ನವೆಂಬರ್‌ ಒಂದರಿಂದ ಏಳರವರೆಗೂ ಪ್ರದರ್ಶಿ ಸಲ್ಪಟ್ಟ ಕನ್ನಡ ಚಿತ್ರಗಳಿಗೆ ಜನರು ಚಿತ್ರಮಂದಿರಗಳಿಗೆ ಬಂದಿಲ್ಲವೆಂದರೆ, ಶುಕ್ರವಾರದ ತೆಲುಗು ಚಿತ್ರಗಳಿಗೆ ಚಿತ್ರಮಂದಿರ ಕಿಕ್ಕಿರಿದು ತುಂಬಿರಬೇಕಿತ್ತು. ಆದರೆ, ಇದ್ಯಾವ ದೃಶ್ಯಗಳು ಎರಡೂ ಚಿತ್ರಮಂದಿರಗಳಲ್ಲಿ ಶುಕ್ರವಾರ ಕಾಣಿಸಲಿಲ್ಲ. ಎರಡೂ ಚಿತ್ರಮಂದಿರಗಳು ಡೀಸಿ ಆದೇಶ ಧಿಕ್ಕರಿಸಿ ಪ್ರದರ್ಶಿಸುತ್ತಿರುವ ತೆಲುಗು ಚಿತ್ರಗಳಿಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಇದ್ದುದ್ದನ್ನು ಕನ್ನಡ ಚಿತ್ರ ಪ್ರೇಕ್ಷಕರು ಗಮನಿಸಿದ್ದಾರೆ. ಜನರಿಲ್ಲದೆ ಕನ್ನಡ ಚಿತ್ರಗಳಿಂದ ಮಾತ್ರವೇ ನಷ್ಟವಾಗುತ್ತದೆಯೇ, ಜನರಿಲ್ಲದಿದ್ದರೂ ತೆಲುಗು ಚಿತ್ರಗಳು ಹೇಗೆ ಲಾಭದಾಯಕ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಕನ್ನಡ ಚಿತ್ರಗಳಿಗಷ್ಟೇ ಜನರು ಬರುವುದಿಲ್ಲವೆಂಬ ಸಬೂಬು ಕೇವಲ ಚಿತ್ರಮಂದಿರಗಳ ಕನ್ನಡ ವಿರೋಧಿ ಧೋರಣೆಯ ಭಾಗವಾಗಿದೆಯೇ ಹೊರತು, ವಾಸ್ತವಾಂಶಗಳಿಂದ ಕೂಡಿಲ್ಲವೆನ್ನುವುದು ಶುಕ್ರವಾರದ ಎರಡೂ ಚಿತ್ರಗಳು ಸಾಬೀತುಪಡಿಸಿದವು.

ಮೂಲ ಸೌಕರ್ಯಗಳಿಲ್ಲ: ಕೋಲಾರ ನಗರದಲ್ಲಿರುವ ಚಿತ್ರಮಂದಿರಗಳಲ್ಲಿ ಉತ್ತಮ ಆಸನ ವ್ಯವಸ್ಥೆ, ಗಾಳಿ ಬೆಳಕಿನ ಸೌಲಭ್ಯ, ಫ್ಯಾನ್‌ ಅಥವಾ ಎಸಿ, ಸ್ವತ್ಛವಾದ ಶೌಚಾಲಯ, ಕುಡಿಯುವ ನೀರು, ಶುದ್ಧ ವಾತಾವರಣ ಇದ್ಯಾವುದನ್ನು ಕೇಳುವಂತಿಲ್ಲ. ಪ್ರತಿ ವರ್ಷ ಡಿ.ಸಿ. ಕಚೇರಿಯೇ ಚಿತ್ರಮಂದಿರಗಳ ಪರವಾನಗಿ ನವೀಕರಿಸುವ ಸಂದರ್ಭದಲ್ಲಿ ಇವೆಲ್ಲಾ ಸೌಲಭ್ಯಗಳನ್ನು ಗಮನಿಸಬೇಕಾಗುತ್ತದೆ. ಆದರೆ, ಡಿ.ಸಿ. ಕಚೇರಿಯಲ್ಲಿ ಪರವಾನಗಿ ನವೀಕರಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳು ಚಿತ್ರಮಂದಿರಗಳನ್ನು ವೀಕ್ಷಿಸದೆ ಕಚೇರಿಯಲ್ಲೇ ಕುಳಿತು ಪರವಾನಗಿ ನವೀಕರಿಸುತ್ತಿರು ವುದರಿಂದ ಚಿತ್ರಮಂದಿರಗಳು ಸೌಲಭ್ಯಗಳಿಲ್ಲದೆ ಗಬ್ಬು ನಾರುವಂತಾಗಿದೆ.

Advertisement

ನಗರಸಭೆಯ ಆರೋಗ್ಯ ನಿರೀಕ್ಷಕರು ಚಿತ್ರಮಂದಿ ರಗಳತ್ತ ತಲೆ ಹಾಕುತ್ತಿಲ್ಲ. ಇಂತ ಚಿತ್ರಮಂದಿರಗಳಿಗೆ ಯಾರೇ ಆಗಲಿ ಕುಟುಂಬ ಸಮೇತ ತೆರಳಿ ಚಿತ್ರವೀಕ್ಷಿಸಲು ಬಯಸುವುದಿಲ್ಲ. ಇದು ಚಿತ್ರಮಂದಿ ರಗಳಿಗೆ ಜನ ಬಾರದಿರಲು ಪ್ರಮುಖ ಕಾರಣವಾಗಿದೆ.

ಕನ್ನಡ ಡಬ್ಬಿಂಗ್‌ ಚಿತ್ರ ಪ್ರದರ್ಶನವಿಲ್ಲ: ಇತ್ತೀಚಿಗೆ ಪರಭಾಷಾ ಚಿತ್ರಗಳು ಕನ್ನಡದಲ್ಲಿಯೂ ಡಬ್ಬಿಂಗ್‌ ಆಗಿ ಪ್ರದರ್ಶನ ಕಾಣುತ್ತಿದೆ. ಆದರೆ, ಕೋಲಾರದ ಚಿತ್ರಮಂದಿರಗಳು ಕನ್ನಡ ವಿರೋಧಿ ಧೋರಣೆ ತೋರಿಸುತ್ತಾ ತೆಲುಗು ಚಿತ್ರಗಳನ್ನು ಮಾತ್ರವೇ ಪ್ರದರ್ಶಿಸುವ ಮೂಲಕ ಕನ್ನಡಿಗ ಚಿತ್ರ ಪ್ರೇಮಿಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗೆ ಚಿರಂಜೀವಿ ಅಭಿನಯದ ಸೈರಾ ನರಸಿಂಹರೆಡ್ಡಿಯ ಕನ್ನಡ ಅವತರಣಿ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡರೆ ಕೋಲಾರದಲ್ಲಿ ಮಾತ್ರ ತೆಲುಗು ಭಾಷೆಯಲ್ಲೇ ಪ್ರದರ್ಶಿಸುವ ಮೂಲಕ ತಾವು ತೆಲುಗು ನಾಡಿನಲ್ಲಿರುವಂತೆ ಜನರಲ್ಲಿ ಭಾವನೆ ಮೂಡಿಸುತ್ತಿರುವುದು ಟೀಕೆಗೆ ಗುರಿಯಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮೂಲ ಕನ್ನಡ ಚಿತ್ರಗಳಿಗೆ ಜನ ಬರುವುದಿಲ್ಲವೆಂಬ ಕುಂಟು ನೆಪ ಹೇಳುವ ಚಿತ್ರ ಪ್ರದರ್ಶಕರು ಡಬ್ಬಿಂಗ್‌ ಆಗಿರುವ ಪರಭಾಷಾ ಕನ್ನಡ ಚಿತ್ರಗಳನ್ನೇಕೆ ಪ್ರದರ್ಶಿಸಲು ಮುಂದಾಗುತ್ತಿಲ್ಲ ಎಂಬುದು ಡಬ್ಬಿಂಗ್‌ ಪರವಾಗಿರುವವರ ವಾದವಾಗಿದೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next