ನವದೆಹಲಿ: ವಿಶ್ವವನ್ನೇ ರಣರಂಗ ಮಾಡಿಕೊಂಡು ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್ 19 ವೈರಸ್ ವಿರುದ್ಧ ಜನ ಜಾಗೃತಿಗಾಗಿ ವಿಶ್ವಾದ್ಯಂತ ಸರಕಾರಗಳು, ಸೆಲೆಬ್ರಿಟಿಗಳು, ವೈದ್ಯ ಸಮೂಹ, ಪೊಲೀಸರು, ಸಂಘ ಸಂಸ್ಥೆಗಳು ಹಲವಾರು ಜಾಗೃತಿ ಸಂದೇಶ, ವಿಡಿಯೋ, ಕಾರ್ಟೂನ್, ಚಿತ್ರಗಳನ್ನು ರಚಿಸುವ ಮೂಲಕ ಜನಸಾಮಾನ್ಯರಲ್ಲಿ ಈ ಮಾರಕ ವೈರಸ್ ಹರಡುವ ಕುರಿತಾದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಇದೀಗ ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಭಾರತದಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳಾಗಿರುವ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ನಟರು ಸೇರಿಕೊಂಡು ‘ಕೋವಿಡ್ 19’ ಹಾಡೊಂದನ್ನು ತಯಾರಿಸಿದ್ದಾರೆ.
ಶ್ರೀನಿವಾಸ ಮೌಳಿ ಅವರು ಬರೆದು ಸಂಗೀತ ನಿರ್ದೇಶಕ ಕೋಟಿ ಸಂಯೋಜನೆ ಮಾಡಿ ಹಾಡಿರುವ ಮೂರು ನಿಮಿಷಗಳ ಈ ಹಾಡಿನಲ್ಲಿ ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ನಾವು ಏನು ಮಾಡಬೇಕೆಂಬುದನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗಿದೆ. ಕೈಗಳನ್ನು ಸ್ವಚ್ಛ ಮಾಡುವ ವಿಧಾನ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ರೀತಿ ಮತ್ತು ಸೋಂಕಿನ ಲಕ್ಷಣಗಳಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯತೆ ಹಾಗೂ ಐಸೊಲೇಷನ್ ಗೊಳಗಾಗುವುದು ಇತ್ಯಾದಿಗಳನ್ನು ಈ ಹಾಡಿನಲ್ಲಿ ಹೇಳಲಾಗಿದೆ.
View this post on InstagramRelated Articles
A post shared by Chiranjeevi Konidela (@chiranjeevikonidela) on
ಕೋಟಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಲೆಟ್ಸ್ ಫೈಟ್ ದಿಸ್ ವೈರಸ್, ಲೆಟ್ಸ್ ಕಿಲ್ ದಿಸ್ ವೈರಸ್ – ಲೆಟ್ಸ್ ದೂ ಇಟ್ ಟುಗೆದರ್, ಲೆಟ್ಸ್ ಲಿವ್ ಹೆಲ್ದಿಯರ್ (ಈ ವೈರಸ್ ವಿರುದ್ಧ ಹೋರಾಡೋಣ, ಈ ವೈರಸ್ ನಾಶ ಮಾಡೋಣ ; ಇದನ್ನು ನಾವೆಲ್ಲರೂ ಜೊತೆಯಾಗಿಯೇ ಮಾಡೋಣ, ಎಲ್ಲರೂ ಆರೋಗ್ಯದಿಂದಿರೋಣ) ಎಂಬ ಸಾಲು ತುಂಬಾ ಪವರ್ ಫುಲ್ ಆಗಿ ಮೂಡಿಬಂದಿದೆ.
ವಿಶೇಷವೆಂದರೆ ಚಿರಂಜೀವಿ, ನಾಗಾರ್ಜುನ, ವರುಣ್ ತೇಜ್ ಮತ್ತು ಸಾಯಿ ಧರಮ್ ತೇಜ ಅವರೆಲ್ಲಾ ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೋಟಿ ಎಂದೇ ಹೆಸರುವಾಸಿಯಾಗಿರುವ ಖ್ಯಾತ ಸಂಗೀತ ನಿರ್ದೇಶಕ ಸಾಲೂರಿ ಕೋಟೇಶ್ವರ ರಾವ್ ಅವರು ಈ ಹಾಡನ್ನು ಸಂಯೋಜನೆ ಮಾಡಿದ್ದಾರೆ. ನಟ ವರುಣ್ ತೇಜ್ ಅವರು ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಅವರ ಪುತ್ರ ಮತ್ತು ಸಾಯಿ ಧರಮ್ ತೇಜ್ ಅವರು ಚಿರಂಜೀವಿ ಅವರ ಸಹೋದರಿಯ ಪುತ್ರನಾಗಿದ್ದಾರೆ.
ಇದೀಗ ಈ ಜಾಗೃತಿ ಹಾಡಿನ ವಿಡಿಯೋವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು. ಈ ನಟರ ಪ್ರಯತ್ನಕ್ಕೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಈ ಪ್ರಯತ್ನಕ್ಕೆ ತೆಲುಗು ಭಾಷೆಯಲ್ಲೇ ತಮ್ಮ ಅಭಿನಂದನೆಗಳನ್ನು ಪ್ರಧಾನಿಯವರು ಸಲ್ಲಿಸಿರುವುದು ವಿಶೇಷವಾಗಿದೆ.
ನಟ ಚಿರಂಜೀವಿ ಅವರು ಈ ಹಾಡನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಮಾತ್ರವಲ್ಲದೇ ಇದೇ ರೀತಿಯ ಕ್ರಿಯೇಟಿವ್ ಯೋಚನೆಗಳ ಮೂಲಕ ಕೋವಿಡ್ 19 ವೈರಸ್ ವಿರುದ್ಧ ಜಾಗೃತಿ ಮೂಡಿಸುವಂತೆ ತಮ್ಮ ಅಭಿಮಾನಿಗಳಿಗೆ ಈ ನಟ ಕರೆ ಕೊಟ್ಟಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರು ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯನ್ನು ತೆರೆದಿದ್ದರು. ಮತ್ತು ಮೊದಲ ಪೋಸ್ಟ್ ಆಗಿ ತಮ್ಮ ತಾಯಿಯ ಜೊತೆ ಇರುವ ಫೊಟೋವನ್ನು ಅಪ್ ಲೋಡ್ ಮಾಡಿದ್ದರು ಹಾಗೂ ಈ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಮನೆಯ ಹಿರಿಯರ ಕಾಳಜಿ ವಹಿಸುವುದು ಅಗತ್ಯ ಎಂಬ ಸಂದೇಶವನ್ನು ನೀಡಿದ್ದರು.