Advertisement
ಅನಿವಾರ್ಯ ಗಳನ್ನು ಸಹಿಸಿಕೊಳ್ಳಿಜೀವನದಲ್ಲಿ ಕೆಲವೊಂದಿಷ್ಟು ಅನಿವಾರ್ಯವಾಗಿ ಬಂದು ಹೋಗುತ್ತವೆ. ಹೀಗಾಗಿ ನಾವು ಪ್ರತಿದಿನ ಸುಳ್ಳುಗಳನ್ನು ಹೇಳುತ್ತೇವೆ. ಹೇಗೆ ಊಟ, ತಿಂಡಿ ನೀರು, ನಿದ್ದೆ ನಮ್ಮ ದಿನ ನಿತ್ಯಕ್ಕೆ ಅನಿವಾರ್ಯವೂ ಹಾಗೆಯೇ ಸುಳ್ಳು ಕೂಡ ನಮಗೆ ಅನಿವಾರ್ಯವಾಗಿಬಿಟ್ಟಿದೆ. ದಿನಕ್ಕೆ ಒಂದಾದರೂ ಸುಳ್ಳು ಹೇಳೆ ಹೇಳುತ್ತೇವೆ. ಆಫೀಸ್ ಗೆ ಹೋಗುವಾಗ ಬಸ್‌ನ್ನು ಮಿಸ್ ಮಾಡಿಕೊಂಡರೆ ಅಲ್ಲಿ ನಾವು ಬಸ್ ಲೇಟ್ ಅನ್ನುವ ಸುಳ್ಳು ಹೇಳುತ್ತೇವೆ. ಬಾಸ್ ಮುಂದೆ ಮಾತಿಗೆ ಸಿಕ್ಕಿಕೊಂಡಾಗ ಆ ಕ್ಷಣಕ್ಕೆ ಹೊಳೆಯುವ ಸುಳ್ಳನ್ನು ಹೇಳಿ ಒತ್ತಡದಿಂದ ಮುಕ್ತರಾಗುವ ಪ್ರಯತ್ನ ಮಾಡುತ್ತೇವೆ. ಸುಳ್ಳೇ ಹೇಳದೇ ಸತ್ಯವಂತರಾಗುವುದು ಕಷ್ಟ ಸಾಧ್ಯ. ಸುಳ್ಳು ಅನಿವಾರ್ಯ ಆಗಬೇಕು ಅದು ಪರಿಸ್ಥಿತಿಗೆ ಅನುಗುಣವಾಗಿ. ಸುಳ್ಳು ಮುಳ್ಳಿನ ಮಧ್ಯ ಇರುವ ಹೂವನ್ನು ಜಾಗ್ರತೆಯಿಂದ ಮುಟ್ಟಿ ತೆಗೆಯುವ ಹಾಗೆ. ಅಪ್ಪಿ ತಪ್ಪಿ ಆಚೆ-ಈಚೆಯಾದ್ರೆ ಅಪಾಯವೇ ಸುಳ್ಳಿನ ಶಿಕ್ಷೆ.!
ನೆನಪುಗಳೇ ಹಾಗೆ ನೆನಪಾಗುವ ಸಮಯದಲ್ಲಿ ನೆನಪು ಆಗದು.! ಜೀವನದಲ್ಲಿ ಹೆಚ್ಚು ಆಳವಾಗಿ ಕಾಡುವುದು ಬಿಟ್ಟು ಬಂದ ಕ್ಷಣಗಳು, ಸಂಬಂಧಗಳ ಜತೆಗಿನ ಒಡನಾಟಗಳು. ಅನಿರೀಕ್ಷಿತ ಆನಂದ ಹಾಗೂ ಅನಿರೀಕ್ಷಿತ ಆಘಾತ ಜೀವನದ ಕೊನೆಯವರೆಗೂ ನೆನಪಾಗಿಯೇ ಕಾಡುವಂಥದ್ದು. ನಾವು ನಿನ್ನೆ ಬಗ್ಗೆ ಯೋಚಿಸಿ ಮರಳಾಗುವಷ್ಟು, ಕ್ಷಣಗಳೊಂದಿಗೆ ಲೀನವಾಗುವಷ್ಟು ಒಂದಿಷ್ಟು ಹೊತ್ತು ನಾಳೆಯ ಬಗ್ಗೆ ಯೋಚಿಸಲು ಸಮಯ ಕೊಟ್ಟರೆ ಪ್ರಾಯಶಃ ಚಿಂತೆಗೂ ತಾತ್ಕಾಲಿಕ ನೆಮ್ಮದಿ ನೀಡಬಹುದಿತ್ತು. ಆದರೆ ನಾಳೆಯನ್ನು ನಾವು ಚಿಂತೆ ಆಗಿಯೇ ನೋಡುತ್ತೇವೆ. ನಾಳೆ ಎನ್ನುವುದು ಖಾಲಿ ಹಾಳೆ ನಿಜ. ಆದರೆ ಖಾಲಿ ಹಾಳೆಯಲ್ಲಿ ಗೀಚಲು ಆಲೋಚನೆಗಳು ಇವತ್ತಿನಿಂದಲೇ ಆರಂಭವಾಗಬೇಕು. ವಿನಃ ಗಾಡಿ ಹತ್ತಿದ ಮೇಲೆ ದಾರಿ ಹುಡುಕುವ ಪ್ರಮೇಯ ಜೀವನದಲ್ಲಿ ಯಾವತ್ತೂ ಬರಬಾರದು. ನಾಳೆ ಎನ್ನುವ ಅಸ್ಪಷ್ಟ ದೃಶ್ಯಕ್ಕೆ ಇವತ್ತೇ ಒಂದು ದೃಷ್ಟಿಕೋನ ಕೊಟ್ಟು ಇಟ್ಟರೆ ಒಳಿತು. ಬದುಕೇ ಹಾಗೆ ಹೇಳುವುದು ಒಂದು, ಮಾಡುವುದು ಇನ್ನೊಂದು ಕೊನೆಗೆ ಆಗೋದೇ ಮತ್ತೂಂದು. ಒಟ್ಟಿನಲ್ಲಿ ನಮ್ಮೆಲ್ಲರ ಜೀವನ ಆ ದೇವನೊಬ್ಬ ಕೂತು ಬರೆದ ಸ್ಕ್ರಿಪ್ಟ್! ಅವನಿಗೆ ಆದಿಯೂ ಗೊತ್ತು ಅಂತ್ಯವೂ ಗೊತ್ತು.
Related Articles
ಪ್ರಯತ್ನಗಳಿರಬೇಕು. ನಾವು ಗೆಲ್ಲಲು ಪ್ರಯತ್ನ ಪಡುತ್ತಿದ್ದರೆ, ನಮ್ಮ ಎದುರಾಳಿ ನಮ್ಮನ್ನು ಸೋಲಿಸಲು ಪ್ರಯತ್ನ ಪಡುತ್ತಿರುತ್ತಾನೆ. ಒಟ್ಟಿನಲ್ಲಿ ಇಬ್ಬರಲ್ಲೂ ಪ್ರಯತ್ನಗಳಿರುತ್ತವೆ. ಪ್ರಯತ್ನವೇ ಇಲ್ಲದೆ ಸೋಲು – ಗೆಲುವು ಕೂಡ ಪ್ರಶ್ನಾರ್ಥಕವಾಗಿ ನಿಲ್ಲುತ್ತದೆ. ನಾವು ಪ್ರಯತ್ನ ಪಡುತ್ತೇವೆ ನಿಜ ಅದು ಇನ್ನೊಬ್ಬರ ಹಾರೈಕೆಯಿಂದ,ಇನ್ನೊಬ್ಬರ ಮಾತಿನ ಪ್ರೇರಣೆಯಿಂದ, ಒಬ್ಬರನ್ನು ಅನುಕರಣೆ ಮಾಡುವುದರಿಂದ ನಮ್ಮ ಪ್ರಯತ್ನಗಳು ಸಾಗುತ್ತವೆ. ಆದರೆ ಎಲ್ಲಾ ಸಮಯದಲ್ಲಿ ನಮ್ಮ ಪ್ರಯತ್ನದ ಹಿಂದೆ ಬೆನ್ನೆಲುಬಾಗಿ ನಿಲ್ಲುವ ಶಕ್ತಿಗಳನ್ನು ನಾವು ನಿರೀಕ್ಷೆ ಮಾಡಬಾರದು. ಕೆಲವೊಮ್ಮೆ ಸಾಧಿಸಲು ಕಿಚ್ಚು ಹಚ್ಚುವುದು ನಮ್ಮ ಹಟ. ಒಂಟಿತನದ ಮೌನ ನಮ್ಮ ಪ್ರಯತ್ನದಲ್ಲಿ ಅಡಗಿರಬೇಕು. ಸ್ವಪ್ರಯತ್ನವೇ ಸಾರ್ಥಕತೆಯನ್ನು ತರಬಹುದು. ಯಾರ ಹಂಗಿಲ್ಲದೆ ಯಾರ ಮೇಲೂ ಹಗೆಯಿಲ್ಲದೆ ಸಾಗಬೇಕಷ್ಟೇ.
Advertisement
-ಸುಹಾನ್ ಶೇಕ್