Advertisement

ಮಕ್ಕಳಿಗೆ ಮಾನವೀಯ ಮೌಲ್ಯ ತಿಳಿಸಿ: ಕೆಂಗಬಾಲಯ್ಯ

05:10 PM Aug 18, 2018 | Team Udayavani |

ದಾವಣಗೆರೆ: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಡಿ ಆಗುತ್ತಿರುವ ಸಾಕಷ್ಟು ಬದಲಾವಣೆ ನಡುವೆಯೂ ಅನೇಕ ಶಾಲೆಗಳಲ್ಲಿ ಸಂಖ್ಯಾಬಲ ಕುಸಿಯುತ್ತಿರುವುದು ಆತಂಕಕಾರಿ ವಿಚಾರ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಹೇಳಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಜಿಲ್ಲಾ ಸಮನ್ವಯ ವೇದಿಕೆ, ಸ್ಪಂದನ ಯುವಜನಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆ ಹಾಗೂ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಮತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ… ಕುರಿತು ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದ ಅವರು, ಗುಣಾತ್ಮಕ ಕಡ್ಡಾಯ ಶಿಕ್ಷಣ ಪಡೆಯುವುದು 14 ವರ್ಷದೊಳಗಿನ ಎಲ್ಲ ಮಕ್ಕಳ ಹಕ್ಕು. ಆ ಹಕ್ಕು ಉಲ್ಲಂಘನೆಯಾದರೆ ಅದನ್ನು ಪ್ರತಿರೋಧಿಸುವವರು ಯಾರು ಎಂಬ ಪ್ರಶ್ನೆ ಬಂದಾಗ ಪೋಷಕರೆ ಹೊಣೆಯಾಗಬೇಕಾಗುತ್ತದೆ ಎಂದರು.

ಶಿಕ್ಷಣ ಸಂಸ್ಥೆಗಳ ಪ್ರಗತಿಯಾಗಬೇಕು. ಶೈಕ್ಷಣಿಕ ವ್ಯವಸ್ಥೆ ದಿಕ್ಕುತಪ್ಪಿ ಅದನ್ನು ಪಡೆಯಲು ಹೋರಾಡಬೇಕಾದ ಪ್ರಸಂಗ ಎದುರಾಗುವ ಮೊದಲು ಸಂಘಟನೆ, ಸಾರ್ವಜನಿಕರು ಹಾಗೂ ಪ್ರಗತಿಪರರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
 
ಪ್ರಸ್ತುತ ವಾತಾವರಣದಲ್ಲಿ ಔದ್ಯೋಗಿಕ ವ್ಯವಸ್ಥೆಗೆ ಸೀಮಿತಗೊಳಿಸಿ ಶಿಕ್ಷಣ ಪದ್ಧತಿ ಬೆಳೆಯುತ್ತಿದೆ. ಮಾನವೀಯ ಮೌಲ್ಯಗಳನ್ನು ತಿಳಿಸಲಾಗುತ್ತಿಲ್ಲ. ಹೆಣ್ಣುಮಕ್ಕಳು ಆರ್ಥಿಕ ಸ್ವಾವಲಂಬಿಗಳಾದರೆ ಬಾಲ್ಯವಿವಾಹದಂತಹ ಪೀಡೆಗಳು ತನ್ನಿಂದ ತಾನೇ ನಿರ್ಮೂಲನೆಯಾಗುತ್ತದೆ ಎಂದು ಹೇಳಿದರು.  ಕಡ್ಡಾಯ ಶಿಕ್ಷಣ ಹಕ್ಕು ಕುರಿತು ಉಪನ್ಯಾಸ ನೀಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮೊದಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಸಹಿಸಿಕೊಳ್ಳಲಿಲ್ಲ. ಈಗ ಸರ್ಕಾರದಿಂದ ಹಣ ಬರಲಾರಂಭಿಸಿದ ಮೇಲೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾ ದುರ್ಬಲ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ಸರಿಯಲ್ಲ. ಸರ್ಕಾರಗಳನ್ನು ನಿಯಂತ್ರಿಸುತ್ತಿರುವ ಮಾಫಿಯಾಗಳು ಬಲಿಷ್ಟವಾಗಿವೆ. ಕಡ್ಡಾಯ ಶಿಕ್ಷಣ ಹಕ್ಕುನಂತಹ ಜನಪರ ಕಾಯ್ದೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಅವಕಾಶ ನೀಡದೇ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಶಿಕ್ಷಣ ಹಕ್ಕು ಕಾಯ್ದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲಪಡಿಸಲು ಸಾಕಷ್ಟು ಅವಕಾಶಗಳ ಹೊಂದಿದೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ವಿಲೀನ ಹಾಗೂ ಹೆಚ್ಚುವರಿ ಶಿಕ್ಷಕರ ಮಾಹಿತಿ ಕಾಣುತ್ತಿರುವುದು ಶೋಚನೀಯ. ಸಂಖ್ಯಾಬಲದ ದೌರ್ಬಲ್ಯದಿಂದ ಶಾಲೆ ವಿಲೀನಕ್ಕೆ ಬದಲು ಶಾಲೆಗಳಿಗೆ ಹೆಚ್ಚು ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆಗಳು ಕಡಿಮೆಯಾದಂತೆ ಶಿಕ್ಷಣ ದುಬಾರಿಯಾಗುತ್ತದೆ ಎಂದು ಎಚ್ಚರಿಸಿದರು.

ಶಾಲಾ ಮುಖ್ಯ ಶಿಕ್ಷಕ ಈ. ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಬಿ.ಕೆ. ಮಂಜಮ್ಮ, ಮಾಜಿ ಅಧ್ಯಕ್ಷ ಪಿ.ಎಂ. ಮಂಜುನಾಥ್‌, ಪರಮೇಶ್ವರಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಮಾಜಿ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ನಳಿನಾಶೇಖರ್‌, ಸ್ಪಂದನ ಯುವಜನ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಎನ್‌. ಸುಲೋಚನಮ್ಮ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next