ಬೆಳಗಾವಿ: ಸದನದಲ್ಲಿ ಇಂದು ಮಂಗಳವಾರ ಮದ್ಯ ನಿಷೇಧದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ಸಮರ ನಡೆದಿದೆ.ಈ ವೇಳೆ ದೇಶಾದ್ಯಂತ ಸಂಪೂರ್ಣ ಮದ್ಯ ನಿಷೇಧ ಮಾಡಲು ನಿಮ್ಮ ಮೋದಿಗೆ ಹೇಳಿ’ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಮದ್ಯ ನಿಷೇಧ ಕುರಿತ ಪ್ರಸ್ತಾವಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿ ‘ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಇಲ್ಲ’ ಎಂದರು.
ಸಿ.ಟಿ.ರವಿ ಅವರು ‘ನಾವು ಸರಾಯಿ ನಿಷೇಧ ಮಾಡಿ ಒಂದು ಹೆಜ್ಜೆ ಇಟ್ಟಿದ್ದೇವೆ, ನೀವು ಮದ್ಯ ನಿಷೇಧ ಮಾಡಿ ಇನ್ನೊಂದು ಹೆಜ್ಜೆ ಇಡಿ’ ಎಂದರು.
ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ‘ನೋಡಪ್ಪಾ.. ಮೊದ್ಲು ಒಂದು ಪ್ಯಾಕೆಟ್ 12 ರೂಪಾಯಿಗೆ ಸಿಗ್ತಿತ್ತು, 2 ಪ್ಯಾಕೆಟ್‌ಗೆ 24 ಆಗ್ತಿತ್ತು 30 ರೂಪಾಯಿ ಒಳ್ಗೆ ಚಟ ಮುಗಿತಿತ್ತು. ಈಗ ಕ್ವಾಟರ್‌ಗೆ 70 , 2 ಕ್ವಾಟರ್‌ಗೆ 140 ರೂಪಾಯಿ ಆಗಿದೆ. ಇದರಿಂದ ಬಡವರಿಗೆ ಲಾಭ ಆಯ್ತಾ’ ಎಂದು ಪ್ರಶ್ನಿಸಿದರು.
ಮತ್ತೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ‘ಮುಖ್ಯಮಂತ್ರಿಗಳೇ ನೀವೆನಾದರೂ ”ಸಾರಾಯಿ ಭಾಗ್ಯ” ನೀಡುವ ಯೋಚನೆ ಮಾಡಿದ್ದೀರಾ’ ಎಂದು ಪ್ರಶ್ನಿಸಿನರು.
ಮತ್ತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಪೂರ್ಣ ಮದ್ಯ ನಿಷೇಧ ಇನ್ನೂ ಸಾಧ್ಯವಾಗಿಲ್ಲ. ನ್ಯಾಷನಲ್ ಪಾಲಿಸಿ ಆಗಬೇಕು. ಇಡೀ ದೇಶದಲ್ಲಿ ಮದ್ಯ ನಿಷೇಧ ಮಾಡಲು ನಿಮ್ಮ ಮೋದಿಗೆ ಹೇಳಿ , ಆವಾಗ ನಾವೂ ಸಪೋರ್ಟ್ ಮಾಡುತ್ತೇವೆ’ ಎಂದರು.