ಊರ ಜನರೆಲ್ಲ ನನ್ನನ್ನು ಹೇಗೆ ನೋಡುತ್ತಿದ್ದರು ಅಂದರೆ, ಶ್ಯಾನುಭೋಗರ ಕೆಲಸಕ್ಕೆ ಬಾರದ ಕೂಸು ಇದು ಅಂತ. ನನಗೂ ಹಾಗೆ ಅನ್ನಿಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲ. ಏಕೆಂದರೆ, ಆ ಹೊತ್ತಿಗಾಗಲೇ ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ಭಾರಿ ಢುಮ್ಕಿ ಹೊಡೆದಿದ್ದೆ. ಈ ಎಸ್‌ಎಸ್‌ಎಲ್‌ಸಿ ಬರೋ ತನಕ ಯಾರಿಗೂ ಕೂಡ ನನ್ನ ಬಗ್ಗೆ ಅನುಮಾನಗಳಿರಲಿಲ್ಲ. ಶ್ಯಾನಭೋಗರ ಮಗ ಬಹಳ ಚೆನ್ನಾಗಿ ಓದುತ್ತಾನೆ ಅಂದು ಕೊಂಡಿದ್ದರು. ಯಾವಾಗ ಮುಗ್ಗರಿಸಿದೆನೋ, ಆಗ ಸಾಮಾಜಿಕವಾಗಿ ಇದ್ದ ಸ್ಟೇಟಸ್ ದಿನೇ ದಿನೇ ಕುಸಿಯ ತೊಡಗಿತು. ನನಗಿದ್ದದ್ದು ಒಂದೇ ಹಾದಿ. ಕೃಷಿ ಮಾಡೋದು. ಅಪ್ಪನಿಗೂ ತೀರಾ ಇದು ಇಷ್ಟವಿರಲಿಲ್ಲ. ನಾನು ದೊಡ್ಡ ಕೆಲಸಕ್ಕೆ ಸೇರಬೇಕು ಅನ್ನೋ ಬಯಕೆಯನ್ನು ಹೊಟ್ಟೆಯಲ್ಲೇ ಇಟ್ಟುಕೊಂಡಿದ್ದರು. ಆದರೂ, ಇವನು ಏನೋ ಮಾಡ್ತಾನೆ ಅನ್ನೋ ನಂಬಿಕೆ ಅವರಿಗಿತ್ತು ಅನಿಸುತ್ತದೆ.
ನನ್ನ ಮೊದಲ ವೃತ್ತಿಯಾಗಿ ಕೃಷಿಯನ್ನು ಕೈಗೆತ್ತಿಕೊಂಡೆ. ಮೊದಲು ಕಂಬಳಿ ಸೊಪ್ಪು ಬೆಳೆಯೋದು, ಮಾರೋದು ಮಾಡಿದೆ. ಆಮೇಲೆ, ರೇಷ್ಮೆ ಮೊಟ್ಟೆ ಮೇಯಿಸಿ, ಗೂಡಾದ ಮೇಲೆ ಮಾರುವುದಕ್ಕೆ ಮುಂದಾದೆ. ಇದರಿಂದ ಸ್ವಲ್ಪ ಹಣ ನೋಡುವಂತಾಯಿತಾದರೂ, ಮನೆಯಲ್ಲಿದ್ದ ಬಡತನ ಕರಗಿಸಲು ಮಾತ್ರ ಆಗಲಿಲ್ಲ. ಹೀಗಾಗಿ, ವಿಧಿ ಇಲ್ಲದೆ ಈ ಪ್ರೊಫೆಷನ್ ಮಾಡುತ್ತಲೇ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಮುಗಿಸಿದೆ. ಈ ಸಂದರ್ಭದಲ್ಲಿ ಒಂದಷ್ಟು ಗೆಳೆಯರು ಸಿಕ್ಕರು. ಬಹುತೇಕರು ನನ್ನಂತೆ ಬಡತನವನ್ನು ಕೂಸುಮರಿ ಮಾಡಿಕೊಂಡೇ ಓದುತ್ತಿದ್ದರು. ಇವರಲ್ಲಿ ಒಂದಿಬ್ಬರು ಬೆಂಗಳೂರಿನ ಅವಿನ್ಯೂರಸ್ತೆಯಲ್ಲಿ ಯಾವ್ಯಾವುದೋ ಕೆಲಸಗಳನ್ನು ಮಾಡುತ್ತಿದ್ದರು. ಒಂದಷ್ಟು ಜನ ಅಲ್ಲಿಂದ ವಸ್ತುಗಳನ್ನು ತಂದು ಇಲ್ಲಿ ಮಾರಿ ಬದುಕು ನಡೆಸುತ್ತಿದ್ದರು. ನಂಜೇ ಆಚಾರಿ ಅನ್ನೋ ಗೆಳೆಯ, ನನ್ನ ಕಷ್ಟ ನೋಡಲಾಗದೆ ಒಂದು ಗಿರವಿ ಅಂಗಡಿಗೆ ಸೇರಿಸಿದ. ತಿಂಗಳಿಗೆ 5 ಸಾವಿರ ಸಂಬಳ. ಊಟ, ವಾಸ್ತವ್ಯ ಅವರದೇ. ನನ್ನ ತಮ್ಮ ಸ್ವಲ್ಪ ಮಟ್ಟಿಗೆ ಕೃಷಿಯನ್ನು ತಿಳಿದವನಾದ್ದರಿಂದ ಅವನ ಹೆಗಲ ಮೇಲೆ ಜಮೀನಿನ ಜವಾಬ್ದಾರಿ ಇಟ್ಟು ನಾನು ಬೆಂಗಳೂರ ಕಡೆ ಹೊರಟೆ.
ಟೀ. ಕಾಫಿ ತಂದು ಕೊಡುವುದು, ಗಿರವಿಗೆ ಬಂದ ಒಡವೆಗಳನ್ನು ಪರೀಕ್ಷಿಸಲು ಚಿನ್ನದ ಅಂಗಡಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆ. ಒಂದು ದಿನ, ಚಿನ್ನದ ಅಂಗಡಿಗೆ ಒಡವೆಗಳನ್ನು ಪರೀಕ್ಷೆಗೆ ಕೊಡಲು ಹೋದಾಗ,” ನೀನು ಇಲ್ಲಿ ಕೆಲಸ ಮಾಡ್ತೀಯಾ’ ಅಂತ ಕೇಳಿದರು. “ಸಂಬಳ 10 ಸಾವಿರ ಕೊಡ್ತೀನಿ’ ಅಂದರು. ಮಾರನೆ ದಿನವೇ ಅಲ್ಲಿ ಕೆಲಸಕ್ಕೆ ಸೇರಿದೆ. ಬದುಕಿನ ಟರ್ನಿಂಗ್ ಪಾಯಿಂಟ್ ಇದೇ. ಅಲ್ಲಿ ಇದೇ ರೀತಿ ಬಂಗಾರದ ಗುಣಮಟ್ಟ ಪರೀಕ್ಷೆ ಮಾಡಿಸುವುದು, ಬಂದ ಗಿರಾಕಿಗೆ ಒಡವೆಗಳನ್ನು ತೋರಿಸುವುದು, ಅವರ ಮನ ಮೆಚ್ಚಿಸಿ ಮಾರಾಟ ಮಾಡುವ ಕೆಲಸ. ದಿನೇ ದಿನೇ ಇದರಲ್ಲಿ ಚತುರನಾದೆ. ಸಂಬಳ 20 ಸಾವಿರದ ತನಕ ಹೋಯಿತು. ಯಜಮಾನರು ನನ್ನ ಮೇಲೆ ನಂಬಿಕೆ ಇಟ್ಟು ಕೋಟ್ಯಂತರ ರೂ. ಬೆಲೆ ಬಾಳುವ ಅಂಗಡಿಯನ್ನು ಬಿಟ್ಟು ಹೋಗುತ್ತಿದ್ದರು. ಇಡೀ ಅಂಗಡಿ ನಿರ್ವಹಣೆಯನ್ನು ನಾನೇ ಮಾಡುತ್ತಿದ್ದೆ. ಈ ಜವಾಬ್ದಾರಿ ಅನ್ನೋದು ವ್ಯವಹಾರಿಕ ತಂತ್ರಗಳನ್ನು ಕಲಿಸಿಕೊಟ್ಟಿತು. ದೂರದೂರುಗಳಿಂದ ದೊಡ್ಡ ದೊಡ್ಡ ಆರ್ಡರ್‌ಗಳು ಬರಲು ಶುರುವಾದವು. ಮಾಲೀಕರು ಇನ್ನೊಂದು ಅಂಗಡಿ ಮಾಡಿದರು.
ಅಷ್ಟರಲ್ಲಿ ನಾನ್ಯಾಕೆ ಈ ರೀತಿಯ ಅಂಗಡಿ ಮಾಡಬಾರದು ಅನಿಸಿತು. ಮಾಲೀಕರು, ಮಾಡಯ್ಯ. ನಿನ್ನ ಬೆನ್ನಿಗೆ ನಾನು ಇದ್ದೀನಿ ಅಂತ ಪ್ರೋತ್ಸಾಹ ಕೊಟ್ಟರು. ದುಬಾರಿ ಬಾಡಿಗೆಯಾದ್ದರಿಂದ ಬೆಂಗಳೂರಲ್ಲಿ ಇದು ಸಾಧ್ಯವಿಲ್ಲ ಅಂತ ಊರಲ್ಲಿ ಇದೇ ರೀತಿ ಅಂಗಡಿ ತೆರೆದೆ. ಸುತ್ತಮುತ್ತ ಹಳ್ಳಿಯವರು, ಗೆಳೆಯರೆಲ್ಲ ಒಡವೆ ಆರ್ಡರ್ ಕೊಡಲು ಶುರುಮಾಡಿದರು. ಆರ್ಡರ್ ಪಡೆಯುತ್ತಿದ್ದ ಕೆಲಸ ಮಾಡುತ್ತಿದ್ದ ಅಂಗಡಿಗೇ ನಾನೇ ಆರ್ಡರ್ ಕೊಡಲು ಶುರುಮಾಡಿದೆ. ಸಾವಿರ, ಸಾವಿರ ಬ್ಯುಸಿನೆಸ್, ಲಕ್ಷವಾಗಿ, ಇವತ್ತು ಕೋಟಿ ಮುಟ್ಟಿದೆ. ಕಾರು, ಬೈಕು ಮನೆ ತುಂಬಿದೆ. ಬೆನ್ನ ಮೇಲೆ ಕೂತಿದ್ದ ಬಡತನ ನಿಧಾನಕ್ಕೆ ಇಳಿದು ಎದ್ದು ಹೋಯಿತು. ಇವನೇನು ಮಾಡ್ತಾನೆ ಶ್ಯಾನುಭೋಗರ ಮಗ ಅಂತ ನೋಡುತ್ತಿದ್ದ ಕಣ್ಣುಗಳಲ್ಲಿ ಬೆರಗು ಹುಟ್ಟಿದೆ. ಇದಕ್ಕಿಂತ ಇನ್ನೆಂಥ ಪ್ರೊಫೆಷನ್ ಬೇಕು ಹೇಳಿ?
ಕೆ.ಜಿ ರಾಜು, ದೇವನಹಳ್ಳಿ