ಆ ದಿನ ನನಗೆ ಸರಿಯಾಗಿ ನೆನಪಿದೆ. ಸ್ನೇಹಿತನ ಮದುವೆಗೆ ಅಂತ ನಾನು ಬಳ್ಳಾರಿಯಿಂದ ದೂರದ ಮಂಗಳೂರಿಗೆ ಬಂದಿದ್ದೆ. ಅವತ್ತೇ ನಾನು ನಿನ್ನ ಮೊದಲು ನೋಡಿದ್ದು. ವಧುವಿನ ಜೊತೆ ಮದುಮಗಳಂತೆಯೇ ಸಿಂಗಾರಗೊಂಡ ನಿನ್ನ ಸೌಂದರ್ಯಕ್ಕೆ ಆ ಕ್ಷಣದಲ್ಲೇ ಶರಣಾಗಿಬಿಟ್ಟೆ. ನಿನ್ನ ಕೋಗಿಲೆ ಧ್ವನಿ, ಕಮಲದಂಥ ಕಣ್ಣುಗಳು, ನಾಜೂಕು ನಡಿಗೆ, ಅಬ್ಟಾ, ಅದೆಷ್ಟು ಚೆಂದ ಕಾಣ್ತಿದ್ದೆ ಗೊತ್ತಾ ನೀನು? ಮದುವೆ ಮನೇಲಿದ್ರೂ ಯಾವುದೇ ಗಲಾಟೆ,, ಗೋಜು ನನ್ನ ಅರಿವಿಗೆ ಬರಲೇ ಇಲ್ಲ. ಯಾಕಂದ್ರೆ ಆ ಹೊತ್ತಿಗಾಗಲೇ ನೀ ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದೆ.
ಸ್ನೇಹಿತರ ಸಹಾಯದಿಂದ ಹೇಗೋ ನಿನ್ನ ಮೊಬೈಲ್ ನಂಬರ್ ಪತ್ತೆ ಹಚ್ಚಿದ್ದೇ ನಂಗೆ ಆವತ್ತಿಗೆ ದೊಡ್ಡ ಸಾಧನೆ ಅನಿಸಿದ್ದು ಸುಳ್ಳಲ್ಲ. ಸ್ವಲ್ಪ ಹೆಚ್ಚೇ ಮೃದು ಸ್ವಭಾವದ ನಾನು ಬರೋಬ್ಬರಿ ಒಂದು ವಾರ ಯೋಚನೆ ಮಾಡಿ ಅಳೆದು, ತೂಗಿ ಕೊನೆಗೂ ಒಂದು ದಿನ Hai ಅಂತ ಸಂದೇಶ ಕಳಿಸೇ ಬಿಟ್ಟೆ. ಆವಾಗ ಶುರುವಾಯಿತು ನೋಡು ನನ್ನ ಫಜೀತಿ. ಆಮೇಲೆ ನಾನು ಪಟ್ಟ ಪಾಡು ನೆನಸ್ಕೊಂಡ್ರೆ ನಗು ಬರುತ್ತೆ. ಇದೆಲ್ಲಾ ಆಗಿ ಎರಡನೇ ದಿನ ಬೆಳಗ್ಗೆ ಎದ್ದು ಮೊಬೈಲ್ ನೋಡಿದ್ರೆ ಆ ಕಡೆಯಿಂದ Hai ಅಂತ ನೀನು ಕಳ್ಸಿರೋ ಮೆಸೇಜ್ ಅವತ್ತು ಪ್ರಪಂಚವನ್ನೇ ಗೆದ್ದ ಖುಷಿ ನಂದಾಗಿತ್ತು. ಅದೆಷ್ಟು ಸಾರಿ ಆ ಮೆಸೇಜನ್ನು ಓದಿದೆನೋ…!
ಅಲ್ಲಿಂದ ಶುರುವಾದ ನಮ್ಮ ಸ್ನೇಹ, ಎಷ್ಟು ಬೇಗ ಪ್ರೀತಿ ಅಂತ ಹೆಸರು ಬದಲಾಯಿಸಿಕೊಳ್ಳು ಅಂತ ನನಗೆ ಇವತ್ತಿಗೂ ಆಶ್ಚರ್ಯ ಆಗುತ್ತೆ. ಬಯಲುಸೀಮೆಯ ನನಗೂ ಕಡಲತೀರದ ನಿನಗೂ ಈ ಪ್ರೀತಿಯನ್ನೋ ಮಾಯೆ ಬೆಸುಗೆ ಹಾಕಿಬಿಟ್ಟಿತ್ತು. ಒಂದು ದಿನ ನಿನ್ನ Call ಬರ್ದಿದ್ರೂ ಏನೋ ಕಳೆದುಕೊಂಡ ಭಾವ ನನ್ನ ಕಾಡ್ತಿತ್ತು. ಆದ್ರೆ ನೀನು ಆಥರಾ ಯಾವತ್ತೂ ಮಾಡಿಲ್ಲ Call ಮಾಡೋಕಾಗ್ದೇ ಇದ್ರು ಕಡೇಪಕ್ಷ ಮೆಸೇಜ್ ಮಾಡಿ ನನ್ನನ್ನು ಸಮಾಧಾನ ಮಾಡ್ತಿದ್ದೆ. ಆಗ ನಿಜವಾಗಲೂ ನಿನ್ನಲ್ಲಿ ಒಬ್ಬ ತಾಯಿನ ಕಂಡಿದ್ದೆ.
ಅಷ್ಟೊಂದು ಪ್ರೀತಿಸುತ್ತಿದ್ದ ನೀನು ಇದ್ದಕ್ಕಿದ್ದ ಹಾಗೆ ಮೆಸೇಜ್ ಮಾಡೋದು ನಿಲ್ಲಿಸಿಬಿಟ್ಟೆ. ಇವತ್ತಿಗೆ ನೀನು ನನ್ನಿಂದ ದೂರ ಆಗಿ ಒಂದು ವರ್ಷ ಆಯ್ತು. ಬಲವಂತವಾಗಿ ಯಾವುದನ್ನೇ ಪಡೆದರೂ ಅದು ಕೊನೆಯವರೆಗೂ ಉಳಿಯಲ್ಲ ಅನ್ನೋದು ನನ್ನ ನಂಬಿಕೆ. ಅದಕ್ಕೇ ನಾನು ನಿನ್ನನ್ನು ಯಾವುದಕ್ಕೂ ಒತ್ತಾಯ ಮಾಡಲ್ಲ. ಆದ್ರೆ ಇದೊಂದನ್ನು ಮಾತ್ರ ಕೇಳ್ತೀನಿ: ಎದ್ದು ಹೋದೆ ಸರಿ. ಆದ್ರೆ ಯಾಕೆ ಹೀಗೆ ಮಾಡಿದೆ? ಸಾಧ್ಯ ಆದ್ರೆ – “ಹೇಳಿ ಹೋಗು ಕಾರಣ’.
ನಿನ್ನದೇ ಗುಂಗಿನ…….
ಶಂಕರ ನವಲೆ ಮಧುಗಿರಿ.