Advertisement

ಪ್ಲೀಸ್‌, ವಾಟ್ಸಾಪಿನಲ್ಲಿ ಕಥೆ ಹೇಳೇ…

10:51 AM May 23, 2017 | Harsha Rao |

ಯಾವಾಗಲಾದ್ರೂ ಒಂದಿನ “ನಂಗೆ ನಿದ್ದೆ ಬರುತ್ತಿಲ್ಲ ಕಣೇ… ಒಂದು ಕಥೆ ಹೇಳು’ ಅಂದಾಗ ವಾಟ್ಸಾಪ್‌ನಲ್ಲಿ ವಾಯ್ಸ ಮೆಸೇಜ್‌ ಮೂಲಕ ಕಥೆ ಕೂಡ ಹೇಳುತ್ತಿದ್ದೆ. ಇದೇ ಅಲ್ವಾ ಅಮ್ಮನ ಪ್ರೀತಿ. ಅದ್ಕೆ ನಾನು ಅಮ್ಮನ ನಂತರದ ಸ್ಥಾನ ನಿಂಗೆ ಕೊಟ್ಟಿದ್ದು…

Advertisement

ನೀನು ಅದ್ಯಾವ ಜನ್ಮದಲ್ಲಿ ನಂಗೆ ತಾಯಿ ಆಗಿದ್ದೆಯೋ, ನಂಗಂತೂ ಗೊತ್ತಿಲ್ಲ. ಈ ಜನ್ಮದಲ್ಲಿ ಫ್ರೆಂಡ್‌ ಆಗಿ ಸಿಕ್ಕಿದ್ದೀಯಾ. ಈ ಎರಡು ವರ್ಷದ ಪಯಣದಲ್ಲಿ ಅಮ್ಮನಿಗಿಂತ ಜಾಸ್ತಿನೇ ಕಾಳಜಿ ಮಾಡಿದ್ದೀಯಾ. ನಿನ್ನನ್ನು ನಾನು ಸ್ನೇಹಿತೆ ಅನ್ನೋದಕ್ಕಿಂತ, ಈಕೆ ನಮ್ಮ ಮನೆಯಲ್ಲಿ ಒಬ್ಬಳು ಅಂತಾ ಹೇಳಿದ್ದುಂಟು.

ನಿನ್ನ ಜೊತೆ ಕೋಪ ಮಾಡ್ಕೊಂಡು ಎಷ್ಟೋ ಸಲ ದೂರ ಹೋದಾಗ ನಿನ್ನ ಕಣ್ಣೀರು ನಮ್ಮ ಸ್ನೇಹವನ್ನು ಮತ್ತೆ ಗಟ್ಟಿಗೊಳಿಸುತ್ತಿತ್ತು. ನನ್ನ ಸಣ್ಣ ಮನಸ್ಸಿನ ದೊಡ್ಡ ತಪ್ಪುಗಳನ್ನು ನಿನ್ನ ಮುಗ್ಧ ಮನಸ್ಸು ಕಾರಣಗಳನ್ನು ಕೇಳದೆ ಕ್ಷಮಿಸಿ ಬಿಡುತ್ತಿತ್ತು. ತರಗತಿಯಲ್ಲಿ ನಾನು ಮಾಡುವ ತರ್ಲೆ ಕೆಲಸಕ್ಕೆಲ್ಲ ನೀನೇ ಜವಾಬ್ದಾರಿ ಆಗಿರುತ್ತಿದ್ದೆ. ಪ್ರತಿದಿನವೂ ಕ್ಲಾಸಲ್ಲಿ ನಿನ್ನ ಹಿಂದೆ ಕೂತು ಮಾಡುತ್ತಿದ್ದ ಕಿತಾಪತಿ ಕೆಲಸಗಳಿಗೆ ಎಲ್ಲರೂ ನನ್ನ ಜೊತೆಗೆ ನಿನ್ನನ್ನೂ ಸೇರಿಸಿಕೊಂಡು ಬೈಯ್ಯುತಿದ್ದರು. ಆದ್ರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನನ್ನ ಹುಡುಗಾಟವನ್ನು ಸಹಿಸಿಕೊಳ್ಳುತ್ತಿದ್ದೆ.

ಅಪ್ಪನನ್ನು ಬಿಟ್ರೆ, ನನ್ನನ್ನು ಅರ್ಥ ಮಾಡ್ಕೊಂಡಿರೋ ಇನ್ನೊಂದು ಮನಸ್ಸು ಅಂದ್ರೆ ಅದು ನಿನ್ನದೇ. ನಾನೂ ಅಷ್ಟೇ… ನಿನ್ನ ಮುಗ್ಧ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನು ಕ್ಷಣಮಾತ್ರದಲ್ಲಿ ಅರ್ಥಮಾಡಿಕೊಳ್ಳುತ್ತಿದ್ದೆ. ನಿನ್ನ ಜೀವನದಲ್ಲಿ ನಡೆದ ಕೆಲ ನೆನಪುಗಳು ಯಾವುದೋ ಸನ್ನಿವೇಶಗಳಲ್ಲಿ ಹೊರ ಬಂದಾಗ ಆ ಸೂಕ್ಷ್ಮ ವೇದನೆ ನನಗೆ ಮಾತ್ರ ಗೊತ್ತಾಗುತ್ತಿತ್ತು. ಆದರೆ ಅವುಗಳಿಗೆ ಸ್ಪಂದಿಸುವ ಶಕ್ತಿ ನನ್ನ ಕಣ್ಣೀರಿಗೆ ಮಾತ್ರ ಇತ್ತು. ಕೆಲವೊಂದ್ಸಲ ನಂಗೆ ಅಮ್ಮನ ನೆನಪಾದಾಗ ತಕ್ಷಣ ನಿಂಗೆ ಮೆಸೇಜ್‌ ಮಾಡ್ತಿದ್ದೆ. ಆಗ ನೀನು ಅಮ್ಮನ ಥರಾನೆ ಸಮಾಧಾನ ಮಾಡುತ್ತಿದ್ದೆ. ಯಾವಾಗಲಾದ್ರೂ ಒಂದಿನ “ನಂಗೆ ನಿದ್ದೆ ಬರುತ್ತಿಲ್ಲ ಕಣೇ… ಒಂದು ಕಥೆ ಹೇಳು’ ಅಂದಾಗ ವಾಟ್ಸಾಪ್‌ನಲ್ಲಿ ವಾಯ್ಸ ಮೆಸೇಜ್‌ ಮೂಲಕ ಕಥೆ ಕೂಡ ಹೇಳುತ್ತಿದ್ದೆ. ಇದೇ ಅಲ್ವಾ ಅಮ್ಮನ ಪ್ರೀತಿ. ಅದ್ಕೆà ನಾನು ಅಮ್ಮನ ನಂತರದ ಸ್ಥಾನ ನಿಂಗೆ ಕೊಟ್ಟಿದ್ದು….

ನಿನ್ನ ಜೊತೆ ಇಷ್ಟೊಂದು ಸಲಿಗೆ, ಹುಡುಗಾಟ, ಮುಗ್ಧ ಸ್ನೇಹದ ಕಾಳಜಿಯಲ್ಲಿ ಜೂನಿಯರ್ ನಮಗೆ ವಿದಾಯ ಹೇಳುವ ಸಮಯ ಬಂದಿದ್ದೇ ಗೊತ್ತಾಗ್ಲಿಲ್ಲ. ಅವತ್ತೂ ಅಷ್ಟೇ, ಕಣ್ಣೀರು ಹಾಕಬಾರದು ಅಂತ ಹೇಳಿದ ನಾನೇ, ನಗುತ್ತಿದ್ದ ನಿನ್ನ ಮನಸ್ಸಿಗೆ ನೆನಪುಗಳನ್ನು ಬಿಚ್ಚಿಟ್ಟು ಕಣ್ಣೀರು ಹಾಕಿಸಿದೆ. ಅದೇನೇ ಇರಲಿ, ಈ ನಮ್ಮ ಸ್ನೇಹ ಇಲ್ಲಿಗೆ ಕೊನೆಯಾಗದೆ, ಈ ನನ್ನ ಕಂಗಳಿಗೆ ರೆಪ್ಪೆಯಂತೆ ಸಾವಿನ ಆಚೆಗೂ ನಿರಂತರವಾಗಿರಲಿ ಎಂದು ನಿನ್ನ ಮುಗ್ಧ ಮನಸ್ಸಿನ ತುಂಟ ಹೃದಯದ ಕೋರಿಕೆ.

Advertisement

– ಮಂಜುನಾಥ ಕೆರಿ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next