Advertisement

ಕಾಳಿ ಮೇಲೆದ್ದು ಬರುವಳೇ ಹೇಳಿ?

01:15 PM Dec 29, 2017 | |

ಧಾರವಾಡ: ಸತತ ಬರಗಾಲ, ಕುಸಿದು ಪಾತಾಳ ಸೇರುತ್ತಿರುವ ಅಂತರ್ಜಲ, ಮಳೆಯ ಕೊರತೆ, ಬರೀ ನೆಲವೇ ಕಾಣುತ್ತಿರುವ ಕೆರೆ ಕಟ್ಟೆಗಳು,  ಇದರಿಂದಾಗಿ ಸೊರಗಿ ಹೋಗಿರುವ ಸಸ್ಯ ಸಂಕುಲ. ಪಕ್ಕದಲ್ಲೇ 164 ಟಿಎಂಸಿ ನೀರಿದ್ದರೂ ಸುತ್ತಲಿನ ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ..!

Advertisement

ಕೃಷಿ, ಪಶು  ಸಂಗೋಪನೆ, ಹೈನುಗಾರಿಕೆ ಸಮೃದ್ಧವಾಗಿದ್ದ ಧಾರವಾಡ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಿಂದ ಗೋಚರಿಸುತ್ತಿರುವ ದೃಶ್ಯಗಳಿವು. ಪಕ್ಕದಲ್ಲೇ ಕಾಳಿ ಸಮೃದ್ಧವಾಗಿ ಹರಿಯುತ್ತಿದ್ದರೂ ಅದನ್ನು ಮುಟ್ಟುವಂತಿಲ್ಲ.

ಕಾರಣ ಆ ನೀರನ್ನು ಬರೀ ವಿದ್ಯುತ್‌ಗೆ  ಮೀಸಲಿಡಲಾಗಿದೆ. ಆದರೆ ಇಂದು ವಿದ್ಯುತ್‌ಗಿಂತ ಕುಡಿಯುವ ನೀರು ಮತ್ತು ನೀರಾವರಿಗೆ ಕಾಳಿ ನದಿ ನೀರು ಬಳಕೆಯಾಗುವ ಅನಿವಾರ್ಯತೆ  ಈ ಭಾಗದಲ್ಲಿ ಸೃಷ್ಟಿಯಾಗುತ್ತಿದೆ. 

ಒಂದು ಕಾಲದಲ್ಲಿ ಜಲ ವಿದ್ಯುತ್‌ ಉತ್ಪಾದನೆಗೆ ಮೀಸಲಿಟ್ಟು ಕಟ್ಟಿರುವ 164 ಟಿಎಂಸಿ ನೀರು ಸಂಗ್ರಹಿಸುವ ಸೂಪಾ ಅಣೆಕಟ್ಟೆಯಿಂದ ಇದೀಗ ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೃಷಿ ಹಾಗೂ ಕುಡಿಯಲು ನೀರು ಯಾಕೆ ಬಳಸಿಕೊಳ್ಳಬಾರದು ಎನ್ನುವ ಆಗ್ರಹ ಹೆಚ್ಚಾಗ ತೊಡಗಿದೆ.

ಒಂದೆಡೆ ಕಳಸಾ-ಬಂಡೂರಿ, ಮಹದಾಯಿ ನೀರು ಮರೀಚಿಕೆಯಾಗುತ್ತಿದ್ದರೆ, ಇತ್ತ ನಮ್ಮಲ್ಲಿರುವ ನೀರನ್ನು  ಬಳಸಿಕೊಳ್ಳಲು ನಾವೇ ಕಠಿಣ ನಿಮಯ ಮಾಡಿಕೊಂಡಿದ್ದು ಈ ಮೂರು ಜಿಲ್ಲೆಯ ಅರೆಮಲೆನಾಡು ರೈತರನ್ನು ಕಂಗಾಲು ಮಾಡಿಟ್ಟಿದೆ. 

Advertisement

ಕೆರೆ ತುಂಬಿದರೆ ಸಾಕು: ಕಾಳಿಯಿಂದ ಮೇಲೆತ್ತಿದ ನೀರಿನ ಮೂಲಕ ಧಾರವಾಡ, ಕಲಘಟಗಿ, ಮುಂಡಗೋಡ ತಾಲೂಕಿನ 1200ಕ್ಕೂ ಹೆಚ್ಚು ಕೆರೆಗಳಿಗೆ  ನೀರು ತುಂಬಿಸಲು ಸಾಧ್ಯವಿದೆ. ಈ ಪೈಕಿ 450ರಷ್ಟು ಕೆರೆಗಳಿಗೆ ನಿರ್ದಿಷ್ಟ ಪ್ರದೇಶಕ್ಕೆ ನೀರು ಕೊಂಡೊಯ್ದು ಗುರುತ್ವದ ಮೂಲಕವೇ ನೀರು  ಹರಿಸಬಹುದಾಗಿದೆ.

ಕಾಳಿ ನದಿಯಿಂದ ಅಂದಾಜು 250 ಅಡಿಯಷ್ಟು ಎತ್ತರದ ಪ್ರದೇಶದಲ್ಲಿ ನೀರು ಹರಿಸಬೇಕಿದೆ. ಆದರೆ ಇದೇನು ಕಷ್ಟದ ಕೆಲಸವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಜಲ ನೀತಿಯನ್ವಯ ಕುಡಿಯುವ ನೀರಿಗೆ ಪ್ರಥಮ ಪ್ರಾಶಸ್ತವಿದ್ದು, ಸರ್ಕಾರ ಮನಸ್ಸು ಮಾಡಿದರೆ ಈ ಯೋಜನೆ ಜಾರಿಯಾಗಬಹುದಾಗಿದೆ.

ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಬಯಲು ಸೀಮೆಯಲ್ಲಿ ಹರಿಯುವ ನದಿಗಳಿಂದ ಎಡದಂಡೆ, ಬಲದಂಡೆ  ಮೂಲಕ ಇಲ್ಲಿ ನೀರಾವರಿ ಸೃಷ್ಟಿಸುವುದು ಕಷ್ಟ ಸಾಧ್ಯ. ಕಾರಣ ಇದೆಲ್ಲವೂ ದಟ್ಟ ಅರಣ್ಯ ಪ್ರದೇಶವೇ ಆಗಿದೆ. ಇಲ್ಲಿ ಮೂರ್‍ನಾಲ್ಕು ಕಡೆಗಳಲ್ಲಿ ಏತ  ನೀರಾವರಿಗೆ ವ್ಯವಸ್ಥೆ ಮಾಡಿ ನೀರು ಹರಿಸಬೇಕು. ಅದು ನೇರವಾಗಿ ದೊಡ್ಡ ದೊಡ್ಡ ಕೆರೆಗಳನ್ನು ತುಂಬಿಸಿ ಆ ಮೂಲಕ ನೀರಾವರಿ ಮಾಡಬಹುದಾಗಿದೆ. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next