ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿ ಶೀಘ್ರವೇ ಪೂರ್ಣಗೊಳಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರಗೆ ಮನವಿ ಸಲ್ಲಿಸಿದರು.
ಸೂಪರ್ ಮಾರ್ಕೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ನಗರ ಸಾರಿಗೆ ಬಸ್ ನಿಲ್ದಾಣದ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿದೆ. ಇದರಿಂದ ಗ್ರಾಮೀಣ ಹಾಗೂ ನಗರದ ಜನತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬಸ್ ನಿಲ್ದಾಣದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಬಸ್ ನಿಲ್ದಾಣಕ್ಕೆ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಹೆಸರಿಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ನಗರದ ನೆಹರು ಗಂಜ್, ಬಂಬೂ ಬಜಾರ್ ಪ್ರದೇಶದಲ್ಲಿ ಬಸ್ ನಿಲ್ದಾಣವಿಲ್ಲದೇ ಜನರು ಪರದಾಡುವಂತೆ ಆಗಿದೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಎರಡೂ ಕಡೆಗಳಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಬೇಕು. ಹೊಸ ತಾಲೂಕು ಕೇಂದ್ರಗಳಾದ ಶಹಾಬಾದ, ಕಮಲಾಪುರ, ಯಡ್ರಾಮಿ ಪಟ್ಟಣಗಳಲ್ಲಿ ಹೊಸ ಬಸ್ ಘಟಕ ಆರಂಭಿಸಬೇಕು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ದೇವಲಗಾಣಗಾಪುರಕ್ಕೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ದೇಶದ ಹಲವು ರಾಜ್ಯಗಳಿಂದ ಯಾತ್ರಾರ್ಥಿಗಳು ಆಗಮಿಸಿರುತ್ತಾರೆ. ಇಲ್ಲಿ ಬಸ್ ಘಟಕ ಆರಂಭಿಸಿದರೆ ಸಂಸ್ಥೆಯವರಿಗೆ ಲಾಭದ ಜತೆಗೆ ಯಾತ್ರಾ ಸ್ಥಳದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಇಲ್ಲಿಂದ ರಾಜ್ಯದ ಇತರೆ ಯಾತ್ರಾ ಸ್ಥಳಗಳಿಗೆ ನೇರವಾದ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ ಪ್ರಮುಖ ನಗರಗಳಿಗೆ ಐರಾವತ ಕ್ಲಬ್ ಕ್ಲಾಸ್ ಹಾಗೂ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಸೌಲಭ್ಯವಿದ್ದು, ಕಲಬುರಗಿ ಮಹಾನಗರಕ್ಕೆ ಮಾತ್ರ ಈ ಸೌಲಭ್ಯವಿಲ್ಲ. ಕಲಬುರಗಿ ಮಹಾನಗರವು ವಿಭಾಗಿಯ ಕೇಂದ್ರವಾಗಿದ್ದು, ಬೆಂಗಳೂರು (ವಾಯಾ ಬಳ್ಳಾರಿ), ಮಂಗಳೂರು (ವಾಯಾ ಹುಬ್ಬಳ್ಳಿ ಮತ್ತು ಶಿವಮೊಗ್ಗ), ಪಣಜಿ (ವಾಯಾ ಬೆಳಗಾವಿ), ಮುಂಬೈ (ವಾಯಾ ಪುಣೆ) ನಗರಗಳಿಗೆ ಐರಾವತ ಬಸ್ ಸೇವೆ ಒದಗಿಸಬೇಕು. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಮುಖ ನಗರಗಳ ಹೆಸರು ಸೂಚನಾ ಫಲಕದಲ್ಲಿ ಇಲ್ಲ. ಇವುಗಳನ್ನು ಕೂಡಲೇ ಸೂಚನಾ ಫಲಕದಲ್ಲಿ ಸೇರ್ಪಡೆ ಮಾಡಬೇಕೆಂದು ಸಾರಿಗೆ ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ಮುತ್ತಣ್ಣ ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ್, ಉಪಾಧ್ಯಕ್ಷ ಅನಿಲ ಕಪನೂರ, ಸಂಘಟಕರಾದ ಗೌತಮ ಕರಿಕಲ್, ಉದಯಕುಮಾರ ಖಣಗೆ, ಸಾಗರ ಪಾಟೀಲ, ಸೂರ್ಯಪ್ರಕಾಶ ಚಾಳಿ, ಜೈಭೀಮ ಮಾಳಗೆ, ಪ್ರವೀಣ ಖೇಮನ್, ಸಿದ್ಧಲಿಂಗ ಉಪ್ಪಾರ, ನಾಗು ಡೊಂಗರಗಾಂವ್, ಮಹೇಶ ಮಾನೆ, ವಿಠ್ಠಲ ಬಿಂಗೆ, ದೇವುದೊರೆ, ರಾಕೇಶ ದೊಡ್ಡಮನಿ, ಪಿಂಟು ಬೋಧನ ಇದ್ದರು.