ಕೋಲ್ಕತಾ: ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯ ಟೆಲ್ನಿಪಾರಾ ಎಂಬಲ್ಲಿ ಸಂಭವಿಸಿದ ಕೋಮು ಘರ್ಷಣೆ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಬುಧವಾರ ಸೆಕ್ಷನ್ 144 ಜಾರಿಗೊಳಿಸಿ, ಮೇ 17ರ 6ಗಂಟೆವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ.
ಮೇ 17ರ ಸಂಜೆ 6ಗಂಟೆವರೆಗೆ ಚಂದನ್ ನಗರ್ ಮತ್ತು ಶ್ರೀರಾಮ್ ಪುರ್ ಪ್ರದೇಶದಲ್ಲಿಯೂ ಬ್ರಾಡ್ ಬ್ಯಾಂಡ್ ಸೇರಿದಂತೆ ಇಂಟರ್ನೆಟ್ ಸೇವೆ ರದ್ದುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ ಹರಡುವ ವಿಚಾರದಲ್ಲಿ 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ನಡೆಯಲು ಕಾರಣವಾಗಿತ್ತು. ವರದಿಯ ಪ್ರಕಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಯಾರು ಲಾಕ್ ಡೌನ್ ಆದೇಶ ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಸೋಂಕನ್ನು ಯಾರೇ ಹರಡಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.