ತೆಲಸಂಗ: ಅಥಣಿ ತಾಲೂಕಿನ ಒಂದು ಭಾಗ ಅತಿವೃಷ್ಟಿಯಿಂದ ನಲುಗಿದರೆ ಇನ್ನು ಒಂದು ಭಾಗ ಅನಾವೃಷ್ಟಿಯಿಂದ ನಲುಗುತ್ತದೆ. ಅಂತೆಯೇ ಸತತ ಬರದಿಂದ ನಲುಗಿದ ಅಥಣಿ ಪೂರ್ವಭಾಗದ ರೈತನಿಗೆ ಈ ವರ್ಷವೂ ಮಳೆ ಕೈಕೊಟ್ಟಿದ್ದರಿಂದ ನೀರಿಲ್ಲದೆ ದ್ರಾಕ್ಷಿ ಕಮರಿ ಹೋಗುತ್ತಿದೆ.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುರಿಂದ ಮಳೆ ಆಧಾರಿತ ಬೆಳೆಯಿಂದ ಹಿಂದೆ ಸರಿದ ರೈತರು ತುಂತುರು ನೀರಾವರಿ ಮೂಲಕ ಬೆಳೆಯಬಹುದಾದ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ಮೊರೆ ಹೋಗಿದ್ದಾರೆ. ಭಾರಿ ಪ್ರಮಾಣದಲ್ಲಿ ಬೋರ್‌ವೆಲ್‌ಗಳ ನೀರು ಬತ್ತಿ ಹೋಗುತ್ತಿರುವುದರಿಂದ ಅದು ಕೂಡಾ ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿಸಿದೆ. ಮೂರು ನೂರು ಅಡಿ ಆಳಕ್ಕೆ ಕೊರೆಸುತ್ತಿದ್ದ ಬೋರ್‌ವೆಲ್‌ಗಳ ಆಳ, ಕಳೆದ ಏಳೆಂಟು ವರ್ಷಗಳಲ್ಲಿ ಸಾವಿರ ಅಡಿಗೆ ಮುಟ್ಟಿದೆ. ಅಷ್ಟು ಕೊರೆಸಿದರೂ ನೀರು ಸಿಗುತ್ತದೆನ್ನುವ ಭರವಸೆಯಿಲ್ಲ. ನೀರು ದೊರಕದಿದ್ದರೆ ಬೆಳೆ ಉಳಿಯುವುದಿಲ್ಲ.
ರೈತ ಕಷ್ಟಪಟ್ಟು ವರ್ಷದಿಂದ ಬೆಳೆಸಿದ ಗಿಡ ಫಲ ಕೊಡುವ ಸಮಯದಲ್ಲಿ ಕಮರಿ ಹೋಗುತ್ತಿರುವುದನ್ನು ಕಂಡು ಮರಮರನೆ ಮರಗುತ್ತಿದ್ದಾನೆ. ವರ್ಷದ ಆರಂಭದಲ್ಲಿಯೇ ಹವಾಮಾನದಲ್ಲಿ ವ್ಯತ್ಯಾಸವಾಗಿದ್ದರಿಂದ ಶೇ.
70 ರಷ್ಟು ದ್ರಾಕ್ಷಿ ತೋಟಗಳು ಹಣ್ಣು ಬಿಡದೆ ಕೈಕೊಟ್ಟಿವೆ. ಇನ್ನು ಕೆಲವು ತೋಟಗಳಲ್ಲಿ ಹಣ್ಣು ಬಿಟ್ಟರೂ ಇಳುವರಿಗೆ ಹೊಡೆತ ಬಿದ್ದಿದೆ. ಇಷ್ಟಿದ್ದರೂ ಉಳಿದ ಬೆಳೆಗೆ ಔಷಧಿ ಸಿಂಪಡಿಸಿ ಮಗುವಿನಂತೆ ಬೆಳೆಸಿದ ಗಿಡಗಳು ಕೊನೆಯ ಗಳಿಗೆಯಲ್ಲಿ ಕಮರುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಂದ ಅಲ್ಪಸ್ವಲ್ಪ ದ್ರಾಕ್ಷಿಗೂ ಬೆಲೆ ಸಿಗದೇ ಇರುವುದರಿಂದ ಹಸಿ ದ್ರಾಕ್ಷಿ ಮಾರಾಟದ ಬದಲು ಒಣದ್ರಾಕ್ಷಿ ತಯಾರಿಸುತ್ತಿದ್ದೇವೆ ಎಂದು ನೋವು ತೋಡಿಕೊಳ್ಳುತ್ತಾರೆ ದ್ರಾಕ್ಷಿ ಬೆಳೆಗಾರರು.
ಟ್ಯಾಂಕರ್ ನೀರು: ಬೆಳೆ ಬರದಿದ್ದರೆ ವರ್ಷದಿಂದ ಹಾಕಿದ ಲಕ್ಷಾಂತರ ಹಣ ನಷ್ಟವಾಗುತ್ತಿದೆ ಎಂಬ
ಆತಂಕದಿಂದ ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹಣ ಖರ್ಚು ಮಾಡಿ ಟ್ಯಾಂಕರ್ ವ್ಯವಸ್ಥೆ ಮಾಡಿದರೂ ನೀರು ತರುವುದೆಲ್ಲಿಂದ ಎಂಬ ಪ್ರಶ್ನೆಗೆ ಪರಿಹಾರ ಸಿಗುತ್ತಿಲ್ಲ.
30 ಬೋರ್‌ವೆಲ್ ಕೊರೆದರು: ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿದು ಕೊಳವೆ ಬಾವಿ ಬತ್ತಿದ್ದರಿಂದ ಪ್ರತಿವರ್ಷ ನೀರಿನ ಕೊರತೆ ಆದಾಗಲೆಲ್ಲ ಕೊಳವೆ ಬಾವಿ ಕೊರೆಸುತ್ತ ಬಂದಿರುವುದರಿಂದ ಎಕರೆ ಭೂಮಿಯಲ್ಲಿ 4 ರಿಂದ 5 ಬೋರ್‌ವೆಲ್ ಕೊರೆದಿರುವುದು ಕಾಣುಸಿಗುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇರುವ ನಮಗೆ ಸರಕಾರ ಕೈ ಹಿಡಿಯಬೇಕು ಇಲ್ಲದಿದ್ದರೆ ದ್ರಾಕ್ಷಿ ಬೆಳೆದ ರೈತನ ಸ್ಥಿತಿ ನೋಡತೀರದಾಗಿದೆ ಎಂದು ರೈತರು ಸಂಕಷ್ಟ
ತೋಡಿಕೊಂಡಿದ್ದಾರೆ.
ಬರದ ಪರಿಣಾಮ ಮೊದಲಿದ್ದ ನಾಲ್ಕು ಬೋರ್‌ವೆಲ್ ಕೈಕೊಟ್ಟಿದ್ದರಿಂದ ಮತ್ತೆ ಈ ವರ್ಷ ಎರೆಡು ಬೋರ್‌ವೆಲ್ ಕೊರೆಸಿದ್ದೇವೆ. ತೋಟದಲ್ಲಿ ವಾಸಿಸುವ ನಮಗೆ ಕುಡಿಯಲು ನೀರಿನ ತೊಂದರೆ ಎದುರಾಗಿದ್ದು, ಇನ್ನು ದ್ರಾಕ್ಷಿ ಬೆಳೆ ಉಳಿಸಿಕೊಳ್ಳುವುದು ಹೇಗೆಂಬ ಯೋಚನೆ ಎದುರಾಗಿ ದಿಕ್ಕು ತೋಚದಂತಾಗಿದೆ.
ನವೀನ ಪೋಳ,
ಯುವ ರೈತ ತೆಲಸಂಗ
ಯುವ ರೈತ ತೆಲಸಂಗ
ಜಗದೀಶ ತೆಲಸಂಗ