ನವದೆಹಲಿ: ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಗುಂಟಿಪಲ್ಲಿ ಸೌಮ್ಯ(25) ಮೃತಪಟ್ಟಿದ್ದಾರೆ.
ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೌಮ್ಯ ಮೇ 26 ರಂದು ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ರಸ್ತೆ ದಾಟುವ ವೇಳೆ ಕಾರೊಂದು ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಸೌಮ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ತನ್ನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದ ಅವರು,ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಕೆಲಸ ಹುಡುಕಲು ಪ್ರಯತ್ನಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಸೌಮ್ಯ ಅವರ ತಂದೆ ಕೋಟೇಶ್ವರ ರಾವ್ ಮಾಜಿ ಸಿಆರ್‌ಪಿಎಫ್ ಜವಾನರಾಗಿದ್ದು, ಇತ್ತೀಚೆಗಷ್ಟೇ ಮಗಳ ಹುಟ್ಟುಹಬ್ಬದಂದು ಬಟ್ಟೆಯ ಉಡುಗೊರೆಯನ್ನು ನೀಡಿದ್ದರು.
ಮಗಳ ಸಾವಿನ ಸುದ್ದಿ ತಿಳಿದು ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಸೌಮ್ಯಾಳ ಮೃತದೇಹವನ್ನು ತೆಲಂಗಾಣಕ್ಕೆ ತರಲು ನೆರವು ನೀಡುವಂತೆ ಸೌಮ್ಯಾಳ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ.
ಸೌಮ್ಯ ತಂದೆ ರಾವ್ ಪ್ರಸ್ತುತ ತೆಲಂಗಾಣದಲ್ಲಿ ಜನರಲ್ ಸ್ಟೋರ್ (ಕಿರಣ ಅಂಗಡಿ) ನಡೆಸುತ್ತಿದ್ದಾರೆ.