ತೆಲಂಗಾಣ: ತೆಲಂಗಾಣ ರಾಜ್ಯ ಮಾರಣಾಂತಿಕ ಕೋವಿಡ್ 19 ಮಹಾಮಾರಿ ಸೋಂಕಿನಿಂದ ಏಪ್ರಿಲ್ 7ರೊಳಗೆ ಮುಕ್ತವಾಗಲಿದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ 70 ಕೋವಿಡ್ 19 ಸೋಂಕು ಪೀಡಿತರಿದ್ದಾರೆ. ಹನ್ನೊಂದು ಮಂದಿ ಚೇತರಿಸಿಕೊಂಡಿದ್ದು, ನೆಗೆಟೀವ್ ವರದಿ ಬಂದಿದೆ. ಇವರನ್ನೆಲ್ಲಾ ಸೋಮವಾರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಾ ರೀತಿಯ ವೈದ್ಯಕೀಯ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಎಲ್ಲಾ ಔಪಚಾರಿಕ ಕಾರ್ಯದ ನಂತರ ರೋಗಿಗಳನ್ನು ಡಿಸ್ ಚಾರ್ಜ್ ಮಾಡಲಾಗುವುದು. 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶದಿಂದ ರಾಜ್ಯಕ್ಕೆ ಮರಳಿದ 25,937 ಮಂದಿ ಸರ್ಕಾರದ ನಿಗಾದಲ್ಲಿದ್ದಾರೆ. ಅವರ ಕ್ವಾರಂಟೈನ್ ಸಮಯ ಏಪ್ರಿಲ್ 7ರಂದು ಮುಕ್ತಾಯವಾಗಲಿದೆ ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ಲಾಕ್ ಡೌನ್ ಬಗ್ಗೆ ಒತ್ತಡಕ್ಕೊಳಗಾಗದೆ ಸ್ವಯಂ ನಿಯಂತ್ರಣದಲ್ಲಿರುವುದು ಮುಖ್ಯ ಎಂದು ತಿಳಿಸಿದ್ದು, ಏಪ್ರಿಲ್ 7ರ ನಂತರ ಒಂದು ವೇಳೆ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ ರಾಜ್ಯ ಕೋವಿಡ್ 19 ವೈರಸ್ ಮುಕ್ತವಾಗಲಿದೆ ಎಂದು ಹೇಳಿದರು.
ಎಲ್ಲಾ ಆಹಾರ ಧಾನ್ಯಗಳನ್ನು ಗ್ರಾಮಗಳಿಂದ ಖರೀದಿಸಲಾಗುವುದು. ಕೂಪನ್ ದಿನಾಂಕ ಪ್ರಕಾರದ ಬೆಳೆಯನ್ನು ಖರೀದಿಸಲಾಗುವುದು. ಒಂದು ವೇಳೆ ಈ ಶಿಸ್ತನ್ನು ಪಾಲಿಸಿದರೆ ನಾವು ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಬಂದಾಗ ಅವರು ತಮ್ಮ ಪಾಸ್ ಬುಕ್ ಅನ್ನು ಪಡೆಯಬಹುದಾಗಿದೆ. ಹಣವನ್ನು ಆನ್ ಲೈನ್ ಮೂಲಕ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು.