Advertisement

ಐಸೋಲೇಷನ್ ವ್ಯವಸ್ಥೆಯಿಲ್ಲದ ಬಡವನ ಮನೆ:ಮರವನ್ನೇ ಹೋಮ್ ಐಸೋಲೇಷನ್ನಾಗಿ ಮಾಡಿಕೊಂಡ ವಿದ್ಯಾರ್ಥಿ!

08:59 AM May 20, 2021 | Team Udayavani |

ಕೋವಿಡ್ ಎಲ್ಲೆಡೆಯೂ ಹಬ್ಬಿದೆ. ಎಲ್ಲರನ್ನೂ ತಲ್ಲಣಗೊಳಿಸಿದೆ. ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಂಥ ಸಂದರ್ಭದಲ್ಲಿ ನಾವೂ – ನೀವೂ ಎಷ್ಟು ಸುರಕ್ಷಿತವಾಗಿರುತ್ತೆವೆಯೋ ಅಷ್ಟೇ ಒಳಿತು.

Advertisement

ಗ್ರಾಮೀಣ ಭಾಗದಲ್ಲಿ, ಬಡವರ ಮನೆಯಲ್ಲಿ ಕೋವಿಡ್ ಕಂಡು ಬಂದರೆ, ವೈದ್ಯರು ಸೂಚಿಸುವ ಹೋಮ್ ಐಸೋಲೇಷನ್, ಹೋಮ್ ಕ್ವಾರಂಟೈನ್  ಹೀಗೆ ಕೋವಿಡ್ ಇನ್ನೊಬ್ಬರಿಗೆ ಹರಡದಿರಲು ಅನುಸರಿಸುವ ಕ್ರಮಗಳನ್ನು ಬಡವರ ಮನೆಯಲ್ಲಿ ಅನುಕರಣೆ ಆಗುವುದು ಕಡಿಮೆ. ಒಂದು ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ  ಹಣ ಇದ್ದಷ್ಟು ದಿನ ಪ್ರಾಣ ಇರುತ್ತದೆ. ಹಣ ಖಾಲಿಯಾದ ಮೇಲೆ ಪ್ರಾಣ ಹಾರಿ ಹೋಗುತ್ತದೆ. ಇಂಥ ಘನಘೋರ ಸ್ಥಿತಿಯನ್ನು ಕೋವಿಡ್ ತಂದು ಇಟ್ಟಿದೆ.

ತೆಲಂಗಾಣದ ನಲಗೊಂಡ ಗ್ರಾಮದ 18 ವರ್ಷದ ವಿದ್ಯಾರ್ಥಿ ರಾಮವತ್ ಶಿವ, ತನ್ನಿಂದ ತನ್ನ ಮನೆಯವರಿಗೆ, ತನ್ನ ಗ್ರಾಮದವರಿಗೆ ಕೋವಿಡ್ ಹರಡಬಾರದೆನ್ನುವ ನಿಟ್ಟಿನಲ್ಲಿ ಅನುಸರಿಸಿದ ಕ್ರಮವನ್ನು ನೋಡಿದರೆ ಒಮ್ಮೆ ಎಂಥವವರಿಗೂ ಆಶ್ಚರ್ಯವಾಗಬಹುದು.

ಕಾಲೇಜಿನಲ್ಲಿ ಮೊದಲ ವರ್ಷದ ಬಿಎ ವಿದ್ಯಾರ್ಥಿಯಾಗಿರುವ ರಾಮವತ್, ಇತ್ತೀಚೆಗೆ ಕೋವಿಡ್ ಕಾರಣದಿಂದ ಊರಿಗೆ ಬಂದು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗುವಷ್ಟು ದುಡಿಮೆಯನ್ನು ಮಾಡುತ್ತಿದ್ದ. ಮಾರ್ಚ್ 4 ಕೋವಿಡ್ ಪಾಸಿಟಿವ್ ಕಂಡುಕೊಂಡ ಕೊಡಲೇ ವೈದ್ಯರು ರಾಮವತ್ ಗೆ ಹೋಮ್ ಐಸೋಲೇಷನ್ ನಲ್ಲಿಇರಲು ಸೂಚಿಸುತ್ತಾರೆ.

ವೈದ್ಯರ ಈ ಸೂಚನೆ ಶಿವನನ್ನು ಚಿಂತೆಗೀಡು ಮಾಡುತ್ತದೆ. ಕಾರಣ ಶಿವ ಇರುವ ಮನೆಯಲ್ಲಿ ಅಪ್ಪ, ಅಮ್ಮ ತಂಗಿ ಬಿಟ್ಟರೆ, ಉಳಿದ ಜಾಗಗಳಿರುವುದು ಮನೆಯ ಪಾತ್ರೆ, ಸಾಮಾಗ್ರಿಗಳಿಗೆ ಮಾತ್ರ ವಿನಃ ಪ್ರತ್ಯೇಕವಾಗಿ ಹೋಮ್ ಐಸೋಲೇಷನ್ ಗಾಗಿ ಅಲ್ಲಿ ಯಾವ ಸ್ಥಳಾವಕಾಶವೂ ಇಲ್ಲ.

Advertisement

ತಮ್ಮವವರಿಗಾಗಿ ಮನೆಯ ಹೊರಗೆ ಉಳಿದ :

ಸೋಂಕು ದೃಢಪಟ್ಟ ದಿನ, ರಾಮವತ್ ಮನೆಗೆ ಹೋಗದೆ ಮೊದಲ ದಿನ ಮನೆಯ ಹೊರಗೆ,ಮನೆಯಿಂದ ದೂರ ಉಳಿದು ಕಳೆದ. ತನಗೆ ಸೋಂಕು ತಗುಲಿದೆ ಇದರಿಂದ ತಮ್ಮ ಮನೆಯವರಿಗೆ ಹಾಗೂ ತಮ್ಮ ಗ್ರಾಮದವರಿಗೆ ತೊಂದರೆ ಆಗಬಾರದೆಂದುಕೊಂಡ ರಾಮವತ್ ನಲ್ಲಿ ಹುಟ್ಟಿಕೊಂಡದ್ದು ಒಂದು ಭಿನ್ನ ಯೋಜನೆ.

ಹೋಮ್ ಐಸೋಲೇಷನ್ ನ 14 ದಿನಗಳನ್ನು ಕಳೆಯಲು ರಾಮವತ್ ಹುಡುಕಿಕೊಂಡದ್ದು ಒಂದು ಮರ.! ತನ್ನ ಮನೆಯ ಮುಂದಿರುವ ಬೃಹತ್ ಮರದ ಕೊಂಬೆಗಳಿಗೆ ಮರದ ಮಂಚದೊಂದಿಗೆ ಹಾಸಿಗೆಯನ್ನು ಭದ್ರವಾಗಿ ಕಟ್ಟಿ ಅದನ್ನು ತನ್ನ ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಿದ.

ಮರದ ಕಳೆಗೆ ಇಟ್ಟಿದ್ದ ಕುರ್ಚಿಯೊಂದರಲ್ಲಿ ಮೂರು ಹೊತ್ತಿನ ಊಟ ,ತಿಂಡಿ , ನೀರನ್ನು ಮಗನಿಗಾಗಿ ಅಪ್ಪ ,ಅಮ್ಮ ಇಡುತ್ತಿದ್ದರು. ರಾಮವತ್ ಕಳೆಗೆ ಬಂದು ಊಟ ಮುಗಿಸಿ ಮತ್ತೆ ಮೇಲೆ ಮರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಶೌಚಕ್ಕಾಗಿ ಮಾತ್ರ ಮನೆ  ಸೌಲಭ್ಯವನ್ನು ಬಳಸುತ್ತಿದ್ದ.

ರಾಮವತ್ ನ ಐಸೋಲೇಷನ್ ಸಮಯದಲ್ಲಿ ಕೋವಿಡ್ ಭಯದಿಂದ ಯಾವೊಬ್ಬ ಅಧಿಕಾರಿಗಳಾಗಲಿ,ಊರ ಮುಖ್ಯಸ್ಥರಾಗಲಿ ಅವರನ್ನು ಕಾಣಲು ಬರಲಿಲ್ಲ. ನಮ್ಮದು ಅತೀ ಚಿಕ್ಕ ಗ್ರಾಮ ಅಲ್ಲಿವುರುವುದು 1000 ಜನ ಮಾತ್ರ. ಕೋವಿಡ್ ಬಂದಾಗ ಅಲ್ಲಿ ರೋಗಿಗಳಿಗೆ ಯಾವ ಸೌಲಭ್ಯವೂ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಊರಿಂದ 5. ಕೀ.ಮಿ ದೂರದಲ್ಲಿದೆ ಎನ್ನುತ್ತಾರೆ ರಾಮವತ್.

ತನ್ನ ಐಸೋಲೇಷನ್ ಸಮಯವನ್ನು ರಾಮವತ್ ಹೆಚ್ಚಾಗಿ ಪುಸ್ತಕಗಳನ್ನು ಓದಿ, ಹಾಡುಗಳನ್ನು ಕೇಳುತ್ತಾ, ಸ್ನೇಹಿತರೊಂದಿಗೆ ಫೋನಿನಲ್ಲಿ ಮಾತಾನಾಡುತ್ತಾ ಕಳೆಯುತ್ತಿದ್ದರಂತೆ. ಕೋವಿಡ್ ಬಗ್ಗೆ ಭೀತಿ ಆಗುವುದು ಅನಗತ್ಯ ನಾವು ಪಾಸಿಟಿವ್ ಆಗಿ ಯೋಚಿಸಿ ಅದನ್ನು ಸ್ವೀಕರಿಸಿದರೆ ಎಲ್ಲವೂ ಒಳಿತಾಗುತ್ತದೆ ಎನ್ನುತ್ತಾರೆ ರಾಮವತ್

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next